More

    ದಿನಸಿ ಕೊರತೆಯಾಗದಂತೆ ಕ್ರಮ, ಸಂಸದೆ ಶೋಭಾ ಕರಂದ್ಲಾಜೆ ಭರವಸೆ

    ಕುಂದಾಪುರ: ಕರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ದಿನಬಳಕೆ ವಸ್ತುಗಳ ಸಾಗಾಟ ವಾಹನಗಳನ್ನು ಎಲ್ಲೂ ತಡೆಯುತ್ತಿಲ್ಲ. ಅಗತ್ಯ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.

    ಕೋಟೇಶ್ವರ ಕಾಳಾವರ ವರದರಾಜ್ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಲಸೆ ಕಾರ್ಮಿಕರ ತಾತ್ಕಾಲಿಕ ವಸತಿ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ ಅವರು ಮಾತನಾಡಿದರು. ದೇಶದ ಜನರ ಮಾನಸಿಕ ಸ್ಥಿತಿ ಗಟ್ಟಿ ಮಾಡಲು ದೀಪ ಬೆಳಗುವಂತೆ ಪ್ರಧಾನ ಮಂತ್ರಿ ಕರೆ ನೀಡಿದ್ದರು. ಇದರ ಬಗ್ಗೆ ಟೀಕೆ ಮಾಡುವ ಮಂದಿ ದೇಶಾದ್ಯಂತ ಕರೊನಾ ಹರಡುತ್ತಿರುವ ತಬ್ಲಿಘ್ ಬಗ್ಗೆ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು.

    ಒಂದು ಕೋಟಿ ರೂ.ನೆರವು: ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಈಗಾಗಲೇ 1 ಕೋಟಿ ರೂ. ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ನೀಡಲಾಗಿದೆ. ವಿಶೇಷವಾಗಿ ಕರೊನಾ ಕೇರ್ ನಿಧಿಗೂ ಒಂದು ಲಕ್ಷ ನೀಡಲಾಗಿದೆ. ಮುಖ್ಯಮಂತ್ರಿಗಳು ಅನುದಾನ ಕೇಳಿದಲ್ಲಿ ಅವರಿಗೂ ನೀಡಲಾಗುವುದು ಎಂದು ಶೋಭಾ ಕರಂದ್ಲಾಜೆ ಹೇಳಿದರು.
    ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕದಿಂದ ಬಂದಿರುವ ವಲಸೆ ಕಾರ್ಮಿಕರ ರಕ್ಷಣೆ ನಮ್ಮ ಕರ್ತವ್ಯ. ಯಾರಿಗೆ ಪಡಿತರ ಕಾರ್ಡ್ ಇಲ್ಲ ಅವರಿಗೆ ಅಕ್ಕಿ ಹಾಗೂ ಬೆಳೆಯ ಕಿಟ್‌ಗಳನ್ನು ಕೊಡುವ ವ್ಯವಸ್ಥೆ ಮಾಡಲಾಗಿದೆ. ಉಡುಪಿ ಸಂಸದರ ಕಚೇರಿಯಲ್ಲಿ ಈಗಾಗಲೆ ಇದಕ್ಕಾಗಿ 10 ಟನ್ ಅಕ್ಕಿ ತರಿಸಲಾಗಿದ್ದು, ಜಿಲ್ಲೆಯ ಎಲ್ಲ ಭಾಗಗಳಿಗೂ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದರು.

    ಕೋಟೇಶ್ವರ ಹಾಗೂ ಬಾರ್ಕೂರು ವಸತಿ ಕೇಂದ್ರದಲ್ಲಿ ಇರುವವರಿಗೆ ಆಹಾರ ವಸ್ತುಗಳ ಕಿಟ್ ಹಾಗೂ ಕೃಷ್ಣ ಮಠದ ಲಡ್ಡು ವಿತರಿಸಿದ ಅವರು, ಕುಂದಾಪುರದ ನಾರಾಯಣ ಗುರು ಕಲ್ಯಾಣ ಮಂದಿರದ ಸಮೀಪ ಹಾಗೂ ಸಾಸ್ತಾನದ ಪಾಂಡೇಶ್ವರ ಬಳಿಇರುವ ವಲಸೆ ಕಾರ್ಮಿಕರ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು.
    ಕುಂದಾಪುರ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ, ಸುರೇಶ್ ಶೆಟ್ಟಿ ಕಾಡೂರು, ಸಂಧ್ಯಾ ರಮೇಶ್, ಕೆ.ಮೋಹನ್‌ದಾಸ್ ಶೆಣೈ. ಸತೀಶ್ ಶೆಟ್ಟಿ ಕಿದಿಯೂರು, ಸುರೇಶ್ ಕುಂದರ್ ಸಾಸ್ತಾನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts