More

    ಧರ್ಮಗಳು ಬೇರೆಯಾದರೂ ಗುರಿ ಒಂದೇ ; ಬಾಳೆಹೊನ್ನೂರು ಶ್ರೀ ವೀರಸೋಮೇಶ್ವರ ಜಗದ್ಗುರು ಅಭಿಮತ

    ನೆಲಮಂಗಲ: ಭಾರತ ಧರ್ಮ, ಸಂಸ್ಕೃತಿ, ಪರಂಪರೆಗಳ ಆದರ್ಶ ನಾಡು. ಮತ, ಧರ್ಮಗಳು ಬೇರೆಯಾದರೂ ಗುರಿ ಮಾತ್ರ ಒಂದೇ. ಮಠಗಳು ಜನಸಮುದಾಯಕ್ಕೆ ಸಂಸ್ಕಾರ ಕೊಡುವ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರು ಅವರು ಅಭಿಪ್ರಾಯಪಟ್ಟರು.

    ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಹಂತಿನ ಮಠದ ಶಿವಯೋಗಮಂದಿರ ಹಾಗೂ ಚಂದ್ರಮೌಳೇಶ್ವರ ಗದ್ದುಗೆಯನ್ನು ಶುಕ್ರವಾರ ಪ್ರತಿಷ್ಠಾಪಿಸಿ ಆಶೀರ್ವಚನ ನೀಡಿದರು. ಆಧುನಿಕ ಯುಗದಲ್ಲಿ ಸಂಸ್ಕಾರದ ಕೊರತೆಯಿಂದಾಗಿ ಮಾನಸಿಕ ಶಾಂತಿ ನೆಮ್ಮದಿ ಇಲ್ಲದಾಗಿವೆ. ವೈಚಾರಿಕತೆ ಬೆಳೆದಂತೆ ದೇವರು, ಧರ್ಮದಲ್ಲಿ ಶ್ರದ್ಧೆ ಕಡಿಮೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ನಾಡಿನ ಧಾರ್ಮಿಕ ಕೇಂದ್ರಗಳು ಮತ್ತು ಮಠಗಳು ಸಮಾಜದ ಸ್ವಾಸ್ಥ್ಯ ಕಾಪಾಡಲು ಯೋಗ್ಯ ಸಂಸ್ಕಾರ ಮಾರ್ಗದರ್ಶನ ಕೊಡುವ ಅಗತ್ಯ ಇದೆ ಎಂದರು.

    ವೀರಶೈವ ಧರ್ಮ ಜ್ಞಾನ, ಕ್ರಿಯಾತ್ಮಕ ಚಿಂತನೆಯೊಂದಿಗೆ ಸಾಮಾಜಿಕ ಕಳಕಳಿ ಹೊಂದಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದಲ್ಲಿ ಜೀವ ಶಿವನಾಗುವ, ಅಂಗ ಲಿಂಗವಾಗುವ, ಭವಿ ಭಕ್ತನಾಗುವ, ಪದಾರ್ಥ ಪ್ರಸಾದವನ್ನಾಗಿಸುವ ವಿಶಿಷ್ಟ ಅಂಶಗಳನ್ನು ಪ್ರತಿಪಾದಿಸಿದ್ದಾರೆ. ಶ್ರೀ ಮಹಂತಿನ ಮಠವು ರಂಭಾಪುರಿ ಪೀಠದ ಶಾಖಾ ಮಠವಾಗಿದೆ. ಮಠದ ರೇಣುಕ ಶಿವಾಚಾರ್ಯರು ಮತ್ತು ಭಕ್ತರು ಸೇರಿ ಭವ್ಯ ಕಟ್ಟಡ ನಿರ್ಮಿಸಿರುವುದು ಹರ್ಷ ತಂದಿದೆ ಎಂದರು.

    ಧರ್ಮ ಜಾಗೃತಿ ಸಮಾವೇಶ ಉದ್ಘಾಟಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿರುವ ಮಠಗಳು ಸರ್ಕಾರದ ಹೊರೆಯನ್ನು ಕಡಿಮೆ ಮಾಡುತ್ತಿವೆ. ನೆಲಮಂಗಲ ತಾಲೂಕಿನಲ್ಲಿ ಶಿವಗಂಗೆಯಂಥ ಪುಣ್ಯಕ್ಷೇತ್ರಗಳು, ಮಠ ಮಂದಿರಗಳಿವೆ. ವಿಶೇಷವಾಗಿ ವೀರಶೈವ ಧರ್ಮದ ಕ್ರಾಂತಿ ಪುರಷ ಶ್ರೀ ವೀರಭದ್ರನ ಕಾರ್ಯ ಕ್ಷೇತ್ರಗಳು ಇಲ್ಲಿ ನೆಲೆಗೊಂಡಿವೆ ಎಂದು ಹೇಳಿದರು.

    ವೀರಶೈವ ಸಮುದಾಯ ಸಂಘಟಿತವಾಗಿ, ಸೇವೆಯಲ್ಲಿ ತೊಡಗಿರುವುದು ಅಭಿಮಾನದ ಸಂಗತಿ. ವ್ಯವಹಾರದಷ್ಟೇ ಸಮಾಜದ ಕೆಲಸಕ್ಕೂ ಆದ್ಯತೆ ಕೊಟ್ಟು ದುಡಿಯುವ ಇಲ್ಲಿನ ವೀರಶೈವ ಸಮುದಾಯದ ಭಕ್ತರ ಭಕ್ತಿ ಶ್ರದ್ಧೆಯನ್ನು ನೋಡಿ ರಂಭಾಪುರಿ ಶ್ರೀ ವೀರಗಂಗಾಧರ ಜಗದ್ಗುರು ಅವರು ಹಾಗೂ ಸಿದ್ಧಗಂಗೆಯ ಶಿವಕುಮಾರಶ್ರೀಗಳು ನೆಲಮಂಗಲವನ್ನು ಪವಿತ್ರಗೊಳಿಸಿದ್ದಾರೆ. ಅಧಿಕಾರವಧಿಯಲ್ಲಿ ಜನಪರ ಕಾರ್ಯಗಳ ಜತೆಗೆ ಜಾತಿ ಮತ ನೋಡದೆ ಸಮಾಜವನ್ನು ಉದ್ದರಿಸುತ್ತಿರುವ ಸರ್ವಜನಾಂಗಗಳ ಮಠಗಳನ್ನು ಅಭಿವೃದ್ಧಿಪಡಿಸಿದ್ದು ಸಂತಸ ತಂದಿದೆ ಎಂದರು.

    ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಶೀಘ್ರದಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.

    ಇಷ್ಟಲಿಂಗ ಮಹಾಪೂಜೆ: ಜಗದ ಶಾಂತಿಗಾಗಿ ರಂಭಾಪುರಿ ಶ್ರೀಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ, ನೂರಾರು ಭಕ್ತರಿಗೆ ಶುಭ ಹಾರೈಸಿದರು. ಮಹಂತಿನ ಮಠದ ರೇಣುಕ ಶಿವಾಚಾರ್ಯರು, ಶಿವಗಂಗೆ ಮಲಯ ಶಾಂತಮುನಿ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ಹಲಗೂರು ರುದ್ರಮುನಿ ಶಿವಾಚಾರ್ಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಮಠದ ಜೀರ್ಣೋದ್ಧಾರ ಸೇವಾ ಸಮಿತಿ ಅಧ್ಯಕ್ಷ ಎನ್.ಆರ್. ಜಗದೀಶ್, ಉಪಾಧ್ಯಕ್ಷ ಎನ್.ವಿ. ಶಿವಪ್ರಕಾಶ್, ಕಾರ್ಯದರ್ಶಿ ಎನ್.ಬಿ. ದಯಾಶಂಕರ್, ಸಹಕಾರ್ಯದರ್ಶಿ ರೇಣುಕಾಪ್ರಸಾದ್, ಖಜಾಂಚಿ ರುದ್ರಮೂರ್ತಿ ಮತ್ತಿತರರು ಇದ್ದರು.

    ಮಠಗಳಿಂದ ಧರ್ಮ ರಕ್ಷಣೆ: ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಮಾತನಾಡಿ, ಧರ್ಮೋರಕ್ಷತಿ ರಕ್ಷಿತಃ ಎಂಬ ಮಾತಿನಂತೆ ಮಠಗಳು ಧರ್ಮ ಪ್ರಸಾರ ಮಾಡಿ ಸಂಸ್ಕೃತಿಯನ್ನು ರಕ್ಷಿಸುತ್ತಿವೆ. ಮಹಂತಿನ ಮಠವನ್ನು ಜೀರ್ಣೋದ್ಧಾರ ಮಾಡಿ, ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ವೀರಶೈವ ಸಮಾಜ ಮುಂದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ಮಾಜಿ ಶಾಸಕ ಎಂ.ವಿ. ನಾಗರಾಜು. ಬೆಂಗಳೂರು ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ, ನೆ.ಯೋ. ಪ್ರಾಧಿಕಾರದ ಅಧ್ಯಕ್ಷ ಎಸ್. ಮಲ್ಲಯ್ಯ, ಮಾಗಡಿ ಯೋ.ಪ್ರಾಧಿಕಾರದ ಅಧ್ಯಕ್ಷ ರಂಗಧಾಮಯ್ಯ, ಬಿಎಂಟಿಸಿ ನಿರ್ದೇಶಕ ಕೆ.ಪಿ. ಬೃಂಗೀಶ್, ಟೌನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಎಚ್. ಜಯದೇವಯ್ಯ, ಉಪಾಧ್ಯಕ್ಷ ರಘು, ನಗರಸಭೆ ಸದಸ್ಯರಾದ ಸಿ. ಪ್ರದೀಪ್, ಎನ್.ಎಸ್. ಪೂರ್ಣಿಮಾ, ವೀರಶೈವ ಮಹಾಸಭಾ ನಿಕಟಪೂರ್ವ ಅಧ್ಯಕ್ಷ ಎನ್.ಎಸ್. ನಟರಾಜು, ಮಹಿಳಾ ಘಟಕದ ಅಧ್ಯಕ್ಷೆ ರಾಜಮ್ಮ, ತಾಲೂಕು ಅಧ್ಯಕ್ಷೆ ವೇದಾವತಿ, ವೀರಶೈವ ಸಮಾಜದ ಅಧ್ಯಕ್ಷ ಎನ್.ಎಸ್. ರಾಜು ಖಜಾಂಚಿ ಗಣೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts