

ಆನಂದಪುರ: ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ ಹೇಳಿದರು.
ಸಮೀಪದ ಮುರುಘಾಮಠದ ಎಸ್ಜೆಜಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಶ್ರೀ ಮಠದ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಪ್ರಚಲಿತ ವಿದ್ಯಮಾನ್ಯಗಳ ಬಗ್ಗೆ ಸದಾ ಮಾಹಿತಿ ಹೊಂದಿರಬೇಕು. ವಿದ್ಯಾರ್ಥಿಗಳು ಎಂತಹ ಶಿಕ್ಷಣ ಪಡೆದರೆ ಶ್ರೇಷ್ಠ ಸ್ಥಾನ ಗಳಿಸಬಹುದು ಎಂಬ ಸ್ಪಷ್ಟತೆ ಶಿಕ್ಷಕರಲ್ಲಿರಬೇಕು. ಪಠ್ಯ ಜ್ಞಾನದ ಜತೆ ವಿದ್ಯಾರ್ಥಿಗಳಲ್ಲಿ ಮಾನವೀಯತೆ ಮತ್ತು ನಾಗರಿಕ ಪ್ರಜ್ಞೆ ಮೂಡಿಸುವುದು ಅಗತ್ಯ ಎಂದು ತಿಳಿಸಿದರು.
ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಸಚಿವ ಡಾ. ಕೆ.ಸಿ.ಶಶಿಧರ ಮಾತನಾಡಿ, ಶಿಕ್ಷಕರ ಅರಿವಿನ ವ್ಯಾಪ್ತಿ ಹೆಚ್ಚಿರಬೇಕು. ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆ ಜತೆ ಸ್ವಕಲಿಕಾ ಮನೋಭಾವ, ಅರಿವಿನ ಕುರಿತಾಗಿ ತೆರೆದುಕೊಳ್ಳುವ ಗುಣ ಮೂಡಿಸಬೇಕು ಎಂದರು.
ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಬಸವಾದಿ ಶಿವಶರಣರು ಗುರುಗಳ ಜತೆ ಶಿಷ್ಯರು ಸದಾ ಚಿಂತನೆಯಲ್ಲಿ ತೊಡಗಬೇಕು ಎಂದಿದ್ದಾರೆ. ಗುರುಗಳು ಜ್ಞಾನದ ಜ್ಯೋತಿಯನ್ನು ಶಿಷ್ಯರ ಮೂಲಕ ಪ್ರಪಂಚದಲ್ಲಿ ಬೆಳಗಬೇಕು ಎಂದು ತಿಳಿಸಿದರು.
ಸುವರ್ಣಕವಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರಭುದೇವ, ಎಸ್ಜೆಜಿ ವಿದ್ಯಾಪೀಠದ ಕಾರ್ಯದರ್ಶಿ ಸಿ.ಬಿ.ಶಾಂತವೀರಪ್ಪ, ನಿರ್ದೇಶಕ ಎಚ್.ಎಂ.ಚಂದ್ರಶೇಖರಯ್ಯ, ವ್ಯೋಮಕೇಶ ಆರಾಧ್ಯ, ಕೆ.ಚಂದ್ರಪ್ಪ, ಎಸ್ಜೆಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎನ್.ಎನ್.ಕರುಣಾಕರ ಉಪಸ್ಥಿತರಿದ್ದರು.