More

    ಬಿಜೆಪಿ ಸದೃಢತೆಗೆ ಸಂಘಟನೆ, ಹೋರಾಟ ಕಾರಣ

    ಶಿಕಾರಿಪುರ: ಕೇಂದ್ರದಲ್ಲಿ ಮತ್ತು 21 ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿರಲು ಸಂಘಟನೆ ಹಾಗೂ ಪ್ರಾಮಾಣಿಕ ಹೋರಾಟ ಕಾರಣ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಜಿಲ್ಲೆಯಲ್ಲಿ ಜೀತದಾಳು ಮುಕ್ತಿ ಮತ್ತು ಬಗರ್​ಹಕುಂ ಹೋರಾಟದಲ್ಲಿ ಯಶಸ್ಸು ಗಳಿಸಿದ್ದೇವೆ. ಪ್ರತಿಯೊಬ್ಬ ಸದಸ್ಯ ಪಕ್ಷದ ಆಸ್ತಿಯಾಗಿರುವುದರಿಂದ ಸಂಘಟನೆ ದಿನೇದಿನೆ ವೃದ್ಧಿಯಾಗುತ್ತಿದೆ. ಪಕ್ಷದ ಆಶಯದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣಕ್ಕೆ ಚಾಲನೆ ದೊರೆತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    70ರ ದಶಕದಿಂದ ಸಮಾಜವಾದಿ ನೆಲದಲ್ಲಿ ರಾಷ್ಟ್ರೀಯ ವಾದ ಬೆಳೆಸಿದ ಕೀರ್ತಿ ನಮ್ಮದು. ಬಿಜೆಪಿ ರಾಜ್ಯ ವಿಶೇಷ ಸಭೆ ಜ.2 ಮತ್ತು 3ರಂದು ಶಿವಮೊಗ್ಗದ ಪಿಇಎಸ್ ಕಾಲೇಜು ಆವರಣದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಸಭೆಯ ಎರಡೂ ದಿನ ಸಿಎಂ ಹಾಜರಿರುತ್ತಾರೆ. ಈ ಸಭೆಗೆ ರಾಷ್ಟ್ರೀಯ ನಾಯಕರು, ಅತಿ ಗಣ್ಯರು, ಸಚಿವ ಸಂಪುಟದ ಸಚಿವರು, ಪ್ರಕೋಷ್ಠಕಗಳ ಸಂಚಾಲಕರು, ಪ್ರಭಾರಿಗಳು ಪ್ರಾಂತ ಪದಾಧಿಕಾರಿಗಳು ಸೇರಿ 185 ಅಪೇಕ್ಷಿತರು ಸಭೆಯಲ್ಲಿ ಪಾಲ್ಗೊಳ್ಳುವರು ಎಂದರು.

    ಕಾರ್ಯಾಲಯ ಉದ್ಘಾಟನೆ, ವಿವಿಧ ವಿಭಾಗಗಳ ಪ್ರಬಂಧಕರ ಸಭೆ, ಕಾಲ್ ಸೆಂಟರ್ ಉದ್ಘಾಟನೆ, ರಾಜ್ಯ ಸರ್ಕಾರ ಅಭಿವೃದ್ಧಿ ಯೋಜನೆ ಮತ್ತು ಜನಸಂಘದಿಂದ ಇಲ್ಲಿಯವರೆಗೆ ನಡೆದ ಘಟನೆಗಳ ಪ್ರದರ್ಶನ ಏರ್ಪಡಿಸಲಾಗಿದೆ. ಜ.3ರ ಬೆಳಗ್ಗೆ 9ಕ್ಕೆ ಜನಸಂಘದ ಕಾರ್ಯಕರ್ತರ ಸಮ್ಮುಖದಲ್ಲಿ ಸಿಎಂ, ರಾಜ್ಯಾಧ್ಯಕ್ಷರ ಉಪಸ್ಥಿತಿಯಲ್ಲಿ ವಿಶೇಷ ಸಭೆ, ಧ್ವಜಾರೋಹಣ, ಗೋಪೂಜೆ ನೆರವೇರಲಿದೆ ಎಂದರು.

    ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಚಾರಗಲ್ಲಿ ಪರಶುರಾಮ, ನಿಂಬೆಗೊಂದಿ ಸಿದ್ಲಿಂಗಪ್ಪ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಮಹಾಲಿಂಗಪ್ಪ ಇದ್ದರು.

    ಅಮಿತ್ ಷಾ ಬರುವುದು ನಿಶ್ಚಿತ: ಮುಂದಿನ ತಿಂಗಳು ರಾಜ್ಯಕ್ಕೆ ಬರಲಿರುವ ಕೇಂದ್ರ ಗೃಹ ಸಚಿವ ಅಮಿತ್​ಷಾ ಜಿಲ್ಲೆಗೆ ಆಗಮಿಸುವುದು ನಿಶ್ಚಿತ. ಇನ್ನಷ್ಟೇ ಅಧಿಕೃತ ಪ್ರವಾಸ ಪಟ್ಟಿ ಬರಬೇಕು. ಭದ್ರಾವತಿಯಲ್ಲಿ ಆರ್​ಎಎಫ್ ಘಟಕ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಗೃಹ ಸಚಿವರು, ಸಂಸ್ಕೃತ ಗ್ರಾಮ ಮತ್ತೂರಿಗೆ ಭೇಟಿ ನೀಡಲಿದ್ದಾರೆ. ಬಳಿಕ ಶಿವಮೊಗ್ಗದಲ್ಲಿ ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತರನ್ನು ಅಭಿನಂದಿಸಿ ಬೆಂಗಳೂರಿಗೆ ತೆರಳಲಿದ್ದಾರೆ. ಜಿಲ್ಲೆಗೆ ಸುಮಾರು ಮೂರು ತಾಸು ಅವಧಿಯನ್ನು ಕೇಂದ್ರ ಗೃಹ ಸಚಿವರು ಮೀಸಲಿರಿಸಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts