More

    ಶಿವಕುಮಾರ ಶ್ರೀಗಳ ಬದುಕೇ ಸಂದೇಶ : ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀ

    ತುಮಕೂರು: ಶಿವಕುಮಾರ ಶ್ರೀಗಳ ಜೀವನ, ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಪರಮಪೂಜ್ಯರಿಗೆ ನಾವು ಸಲ್ಲಿಸುವ ನಿಜವಾದ ಗುರು ಕಾಣಿಕೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದರು.

    ಹರಳೂರು ಗ್ರಾಮದಲ್ಲಿ ಶನಿವಾರ ಡಾ.ಶಿವಕುಮಾರ ಸ್ವಾಮೀಜಿ ಪ್ರಥಮ ವಾರ್ಷಿಕ ಪುಣ್ಯಾರಾಧನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಕಾಯಕ, ದಾಸೋಹ, ಶಿವಯೋಗ ಈ ಮೂರನ್ನು ಬದುಕಿನಲ್ಲಿ ಶಿವಕುಮಾರ ಶ್ರೀಗಳು ನಿರಂತರವಾಗಿ ತಪಸ್ಸಿನಂತೆ ಆಚರಿಸಿಕೊಂಡಬಂದವರು. ಅವರ ಬದುಕೇ ಒಂದು ಸಂದೇಶದಂತೆ ಎಂದರು.

    ಮಠಕ್ಕೂ ಹರಳೂರಿಗೂ ಅವಿನಾವಭಾವ ಸಂಬಂಧವಿತ್ತು. ಉದ್ಧಾನಶ್ರೀಗಳು, ಅಟವಿಶ್ರೀಗಳ ಕಾಲದಿಂದಲೂ ಹರಳೂರು ಗ್ರಾಮಸ್ಥರು ಶ್ರೀಮಠದ ಜತೆ ಸಂಪರ್ಕ ಇಟ್ಟುಕೊಂಡಿದ್ದರು. ಮಠದ ವತಿಯಿಂದ ಗ್ರಾಮದಲ್ಲಿ ಶಾಲೆ ತೆರೆದು ಶಿಕ್ಷಣ ನೀಡುವ ಕಾರ್ಯವನ್ನು ಮಾಡಿಕೊಂಡು ಬರಲಾಗಿದೆ ಎಂದರು. ಮಠದ, ಸಮಾಜದ ಏಳಿಗೆಗೆ ಕಲ್ಲುಮುಳ್ಳಿನಿಂದ ಕೂಡಿದ ಹಾದಿಯಲ್ಲಿ ಕಠಿಣ ಬದುಕನ್ನು ಸವೆಸಿದ ಶ್ರೀಗಳು ನಾಡಿಗೆ ಹೂವಿನಂತಹ ಪರಿಮಳವನ್ನು ಬೀರಿದ ಮಹಾಪುರಷರು ಎಂದು ಸಾಹಿತಿ ಜರಗನಹಳ್ಳಿ ಶಿವಶಂಕರ್ ಬಣ್ಣಿಸಿದರು. ಜ್ಞಾನ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡಿ ಅವರ ಬಾಳನ್ನು ಬೆಳಗಿದರು ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು. ಬೇಲಿಮಠದ ಶಿವರುದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಹರಳೂರು ಜಂಗಮಮಠದ ಚನ್ನಬಸವಸ್ವಾಮೀಜಿ ಉಪಸ್ಥಿತರಿದ್ದರು. ವಾಸಾ ಸೈಂಟಿಫಿಕ್ ಕಂಪನಿ ಬಿ.ಪಿ.ಪ್ರಕಾಶ್ ಅಧ್ಯಕ್ಷತೆವಹಿಸಿದ್ದರು.

    ಎಸ್‌ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಜಿಪಂ ಸದಸ್ಯ ಶಿವಕುಮಾರ್, ಎಚ್.ಕೆ.ಕುಮಾರಯ್ಯ ಇದ್ದರು. ಎಚ್.ಎಸ್.ಉಮಾಶಂಕರ್ ಸ್ವಾಗತಿಸಿ, ಕೆ.ಸಿ.ಶಿವಕುಮಾರ್ ವಂದಿಸಿದರು. ಹರಳೂರು ಶಿವಕುಮಾರ್ ನಿರೂಪಿಸಿದರು. ಅರುಣಾಚಂದ್ರಶೇಖರ್ ಪ್ರಾರ್ಥಿಸಿದರು. ಶ್ರೀಗಳ ಕಂಚಿನಪುತ್ಥಳಿಯನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು. ಶತಾಯುಷಿ ಗರುಡಯ್ಯ, ಪ್ರೊ.ಕೆ.ಎಸ್.ಶಂಕರಯ್ಯ, ಎಚ್.ಎಸ್.ಸಿದ್ದಗಂಗಪ್ಪ, ಎಚ್. ಜಿ.ಈಶ್ವರಯ್ಯ, ಕಲಾಶ್ರೀ ನರಸಿಂಹದಾಸ್ ಅವರನ್ನು ಸಿದ್ದಲಿಂಗಶ್ರೀಗಳು ಗೌರವಿಸಿದರು.

    ತ್ಯಾಗದ ಸಂಕೇತ ಖಾವಿ: ಕಾವಿ ಧರಿಸುವ ಸಂಕೇತ ತ್ಯಾಗ. ಇಡೀ ಸಮಾಜವನ್ನು ನನ್ನದು ಎಂಬ ಭಾವನೆ ಹೊಂದಿರಬೇಕು. ಸರ್ವಸ್ವವನ್ನು ತ್ಯಾಗ ಮಾಡಿದವರು ಕಾವಿಯನ್ನು ಧರಿಸಬೇಕು. ಅದನ್ನು ನಡೆದುತೋರಿಸಿದವರು ಶಿವಕುಮಾರಶ್ರೀಗಳು. ಅವರು ನಡೆದ ದಾರಿಯಲ್ಲಿ ನಾವು ನಡೆದು ತೋರಿಸಬೇಕು ಎಂದು ಮಾಜಿ ಶಾಸಕ ಬಿ.ಸುರೇಶಗೌಡ ತಿಳಿಸಿದರು.
    ಶ್ರೀಗಳ ಬಗ್ಗೆ ಟೀಕೆ ಮಾಡಿದ್ದೇನೆಂದು ಚುನಾವಣೆ ಸಂದರ್ಭದಲ್ಲಿ ನನ್ನ ವಿರುದ್ಧ ವಿರೋಧಪಕ್ಷದವರು ಇಲ್ಲಸಲ್ಲದ ಅಪಪ್ರಚಾರ ಮಾಡಿದರು. ಒಂದು ವರ್ಷ ನಾನು ಮನಸಿನಲ್ಲೇ ಸಂಕಟ, ನೋವನ್ನು ಅನುಭವಿಸಿದೆ. ನನಗೆ ಶ್ರೀಗಳ ಬಗ್ಗೆ ಅಪಾರ ಗೌರವವಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts