More

    ಶಿವಕುಮಾರ ಶ್ರೀಗಳ ಬೆಳ್ಳಿ ಪುತ್ಥಳಿ ಪ್ರತಿಷ್ಠಾಪನೆ

    ತುಮಕೂರು: ಸಿದ್ಧಗಂಗಾ ಮಠದ ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆಯಲ್ಲಿ 50 ಕೆಜಿ ತೂಕದ ಶ್ರೀಗಳ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ ಶಾಸ್ತ್ರೋಕ್ತವಾಗಿ ಮಂಗಳವಾರ ನೆರವೇರಿತು.
    ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳು ಲಿಂಗೈಕ್ಯರಾಗಿ ಜ.21ಕ್ಕೆ ಒಂದು ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಶ್ರೀಗಳ ಗದ್ದುಗೆಯಲ್ಲಿ ಬೆಳ್ಳಿ ಪುತ್ಥಳಿ ಪ್ರತಿಷ್ಠಾಪನೆ ಬ್ರಾಹ್ಮೀ ಮಹೂರ್ತದಲ್ಲಿ ನೆರವೇರಿತು.

    ಹಳೇ ಮಠದಿಂದ ಮೆರವಣಿಗೆ ಹೊರಟು ಉದ್ದಾನೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ ಅಲ್ಲಿಂದ ಶಿವಕುಮಾರ ಶ್ರೀಗಳ ಗದ್ದುಗೆಗೆ ಮೆರವಣಿಗೆ ತಲುಪಿತು. ಅಲ್ಲಿ ಗದ್ದುಗೆ ಸುತ್ತ ಐದು ಪ್ರದಕ್ಷಿಣೆ ಆದ ಬಳಿಕ ನೇರವಾಗಿ ಗದ್ದುಗೆಯ ಪೀಠದ ಮೇಲೆ ಬೆಳ್ಳಿ ವಿಗ್ರಹ ಪ್ರತಿಷ್ಠಾಪಿಸಲಾಯಿತು.
    ಶ್ರೀಗಳ ಪ್ರಥಮ ಪುಣ್ಯ ಸಂಸ್ಮರಣೋತ್ಸವ ಸಮಾರಂಭ ಜ.19ರಂದೇ ನಡೆದಿದ್ದು, 21 ರಂದು ಬೆಳಗಿನಜಾವ ಪ್ರತಿನಿತ್ಯದಂತೆ ಪೂಜೆಗಳು ನಡೆದವು. ಗದ್ದುಗೆಗೆ ರುದ್ರಾಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು.

    ಶ್ರೀಗಳ ಗದ್ದುಗೆಯಲ್ಲಿ ಸ್ಥಾಪಿಸಿರುವ ಶಿವಲಿಂಗು ಹಿಂಭಾಗ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಶ್ರೀಗಳ ಬೆಳ್ಳಿ ಪುತ್ಥಳಿಯನ್ನು ಶಾಸ್ತ್ರೋಕ್ತವಾಗಿ ಪೂಜಾಕೈಂಕರ್ಯಗಳ ಮೂಲಕ ಪ್ರತಿಷ್ಠಾಪನೆ ಮಾಡಲಾಗಿದ್ದು ದಿನನಿತ್ಯ ಪೂಜಾಕೈಂಕರ್ಯ ನಡೆಯಲಿದೆ. ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಜ.21ರಂದು ಪರಮಪೂಜ್ಯ ಶಿವಕುಮಾರ ಶ್ರೀಗಳ ಪ್ರಥಮ ಪುಣ್ಯ ಸ್ಮರಣೆ ಆಚರಿಸಲಾಯಿತು. ಗ್ರಾಮೀಣ ಭಾಗದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಊರಿನ ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಶ್ರೀಗಳ ಜೀವನ ಸಾಧನೆ ಸ್ಮರಿಸಲಾಯಿತು. ಶ್ರೀಸಿದ್ದಲಿಂಗಸ್ವಾಮೀಜಿ ನೇತೃತ್ವದಲ್ಲಿ ನಡೆದ ಎಲ್ಲ ಪೂಜಾ ಕೈಂಕರ್ಯಗಳಲ್ಲಿ ವಿವಿಧ ಮಠಾಧೀಶರು, ಶ್ರೀಮಠದ ಸಾವಿರಾರು ಭಕ್ತರು ಭಾಗಿಯಾದರು.

    ಪೀಠದ ಕೆಳಭಾಗ ಶ್ರೀಗಳ ಪಾದುಕೆ: ಪೀಠದ ಕೆಳಭಾಗದಲ್ಲಿ ಶ್ರೀಗಳ ಪಾದುಕೆ, ಇನ್ನು ಸ್ವಲ್ಪ ಮೇಲ್ಭಾಗದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿತ್ತು. ಶಿವಲಿಂಗದ ಹಿಂಭಾಗದ ಮೇಲ್ಭಾಗದಲ್ಲಿ ಶ್ರೀಗಳ ಭಾವಚಿತ್ರ ಇರಿಸಲಾಗಿತ್ತು. ಭಾವಚಿತ್ರ ತೆರವುಗೊಳಿಸಿ ಅದರ ಜಾಗದಲ್ಲಿ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ದೆಹಲಿ ಮೂಲದ ಉದ್ಯಮಿ ಮುಕೇಶ್‌ಗರ್ಗ್ ಭಕ್ತಿಪೂರ್ವಕವಾಗಿ ಸಮರ್ಪಿಸಿದ ಬೆಳ್ಳಿ ವಿಗ್ರಹ ಮಠದಲ್ಲಿ ಸ್ವಾಮೀಜಿ ಅವರೇ ಆಸೀನರಾದಂತೆ ಕಾಣುತ್ತಿದ್ದು, ಸ್ಮಾಮೀಜಿ ಅವರ ನೆನಪು ಮಠದ ವಾತಾವರಣದಲ್ಲಿ ಸದಾ ಇರುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts