More

    ಹಿಂದೂ ಸಾಮ್ರಾಜ್ಯ ಕಟ್ಟಿದ ಶಿವಾಜಿ ಮೂಲ ಕನ್ನಡ ನೆಲ

    ಪ್ರಶಾಂತ ಭಾಗ್ವತ ಬೆಳಗಾವಿ

    ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗಡಿ ವಿಚಾರವಾಗಿ ಹಾಗೂ ಕನ್ನಡ-ಮರಾಠಿ ಭಾಷೆ ವಿಚಾರವಾಗಿ ಕ್ಯಾತೆ ಮುಂದುವರಿಸುತ್ತಲೇ ಇದ್ದು, ರಾಜ್ಯದ ರಾಜಕಾರಣಿಗಳೂ ತಕ್ಕ ತಿರುಗೇಟು ನೀಡುತ್ತಿದ್ದಾರೆ. ಈ ನಡುವೆ ‘ಶಿವಾಜಿ ಮೂಲ’ದ ವಿಚಾರ ಭುಗಿಲೆದ್ದಿದೆ. ಹಿರಿಯ ಸಾಹಿತಿ, ಇತಿಹಾಸ ಸಂಶೋಧಕ ಡಾ. ಸರಜೂ ಕಾಟ್ಕರ್ ಬರೆದಿರುವ ‘ಶಿವಾಜಿ ಮೂಲ ಕನ್ನಡ ನೆಲ’ ಎಂಬ ಪುಸ್ತಕ ಶಿವಾಜಿ ಪೂರ್ವಜರ ಮಾಹಿತಿಯನ್ನು ಒಳಗೊಂಡಿದೆ. ಸಂಶೋಧನಾತ್ಮಕವಾಗಿರುವ ಈ ಪುಸ್ತಕದ ಪ್ರಕಾರ ಛತ್ರಪತಿ ಶಿವಾಜಿ ಕರ್ನಾಟಕ ಮೂಲದವನು.

    ಪೂರ್ವಜರು ಗದಗ ಜಿಲ್ಲೆಯವರು: ಮಹಾರಾಷ್ಟ್ರದ ಹೆಸರಾಂತ ವಿದ್ವಾಂಸ, ಮರಾಠಿ ಸಾಹಿತಿ ಡಾ. ರಾಮಚಂದ್ರ ಚಿಂತಾಮಣಿ ಢೇರಿ ಛತ್ರಪತಿ ಶಿವಾಜಿ ಚರಿತ್ರೆ ಕುರಿತಾಗಿ ‘ಶಿಖರ ಸಿಂಗಣಾಪುರಚ ಶಂಭು ಮಹಾರಾಜ್’ ಎಂಬ ಸಂಶೋಧನಾತ್ಮಕ ಪುಸ್ತಕ ಬರೆದಿದ್ದಾರೆ. ಮರಾಠಿಯಲ್ಲಿರುವ ಈ ಪುಸ್ತಕವನ್ನು ಸರಜೂ ಕಾಟ್ಕರ್ ‘ಶಿವಾಜಿ ಮೂಲ ಕನ್ನಡ ನೆಲ’ ಹೆಸರಿನಲ್ಲಿ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಈ ಪುಸ್ತಕ ಹಾಗೂ ಮೂಲ ಮರಾಠಿ ಪುಸ್ತಕದ ಪ್ರಕಾರ ಶಿವಾಜಿ ಓರ್ವ ಕನ್ನಡಿಗ. ಶಿವಾಜಿ ಪೂರ್ವಜರು ಈಗಿನ ಗದಗ ಜಿಲ್ಲೆಯ ಗದಗ ತಾಲೂಕಿನ ಸೊರಟೂರು ಗ್ರಾಮದವರು. ಸೊರಟೂರಿನ ‘ಬಳಿಯಪ್ಪ’ ಎಂಬಾತ ಶಿವಾಜಿ ಕುಟುಂಬದ ಮೂಲಪುರುಷ ಎಂಬುದಾಗಿ ತಿಳಿದುಬರುತ್ತದೆ.

    ಮಹಾರಾಷ್ಟ್ರಕ್ಕೆ ವಲಸೆ: ಬಳಿಯಪ್ಪ ಪಶುಪಾಲಕ ವೃತ್ತಿ ಮಾಡುವ ವರಾಗಿದ್ದರು. ಆ ಸಂದರ್ಭದಲ್ಲಿ ಭೀಕರ ಬರಗಾಲ ಬಂದ ಹಿನ್ನೆಲೆ ಯಲ್ಲಿ ಜೀವನ ನಿರ್ವಹಣೆಗಾಗಿ ಮಹಾರಾಷ್ಟ್ರದ ‘ಮಣ್’ ಪ್ರದೇಶಕ್ಕೆ ಗುಳೆ ಹೋದರು. ಬಳಿಕ ಅವರು ಗದಗ ಜಿಲ್ಲೆಗೆ ಮರಳದೇ ಅಲ್ಲಿಯೇ ನೆಲೆಸಿದರು. ಬಳಿಯಪ್ಪ ಅವರ 7ನೇ ಅಥವಾ 8ನೇ ತಲೆಮಾರಿ ನವರೇ ಶಿವಾಜಿ ಮಾಹಾರಾಜ್ ಎಂಬ ಉಲ್ಲೇಖ ಲಭ್ಯವಿದೆ.

    ಪರಾಕ್ರಮದ ಹಾದಿ: 1674ರ ಸಂದರ್ಭದಲ್ಲಿ ವೀರಯೋದ್ಧಾ ಆಗಿ ಹಿಂದೂ ಸಾಮ್ರಾಜ್ಯ ವಿಸ್ತರಿಸಿದ ಶಿವಾಜಿ ‘ಛತ್ರಪತಿ’ ಆದ. ದೆಹಲಿಯಿಂದ ತಂಜಾವೂರುವರೆಗೆ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದ, ಅಷ್ಟರಲ್ಲೇ ದೇಶದ 3,331 ಕೋಟೆಗಳನ್ನು ಕೈವಶ ಮಾಡಿಕೊಂಡಿದ್ದ. ಔರಂಗಜೇಬ್​ನಂಥ ಪರಾಕ್ರಮಿಯೊಂದಿಗೆ ಹೋರಾಟ ನಡೆಸುವ ಮೂಲಕ ತನ್ನ ಪರಾಕ್ರಮ ಮೆರೆದಿದ್ದ.

    ಪಟ್ಟಾಭಿಷೇಕ: ತನ್ನ ಪರಾಕ್ರಮದ ಮೂಲಕ ಹಿಂದೂ ಸಾಮ್ರಾಜ್ಯ ಕಟ್ಟಿದ ಶಿವಾಜಿಗೆ ಪಟ್ಟಾಭಿಷೇಕ ಮಾಡಲು ತಯಾರಿ ನಡೆಯಿತು. ಆದರೆ, ಆತನ ರಾಜ್ಯದಲ್ಲಿರುವ ಪುರೋಹಿತರು, ಶಿವಾಜಿ ಕ್ಷತ್ರಿಯನಲ್ಲದ ಹಿನ್ನೆಲೆಯಲ್ಲಿ ಹಾಗೂ ಕೆಳವರ್ಗದವನಾಗಿದ್ದರಿಂದ ಅಂದಿನ ಶಾಸ್ತ್ರದ ಪ್ರಕಾರ ಪಟ್ಟಾಭಿಷೇಕ ಮಾಡಲು ಒಪ್ಪುವುದಿಲ್ಲ. ಹೀಗಾಗಿ ಶಿವಾಜಿಯು ಕಾಶಿಯಲ್ಲಿದ್ದ ಖ್ಯಾತ ಪುರೋಹಿತ ನಾಗಾ ಭಟ್ಟ ಎಂಬುವರನ್ನು ಕರೆಯಿಸಿ, ಅವರಿಗೆ ಅಪಾರ ಪ್ರಮಾಣದಲ್ಲಿ ಧನ-ಕನಕ ಕೊಟ್ಟು ತನಗೆ ಪಟ್ಟಾಭಿಷೇಕ ಮಾಡಲು ಕೋರಿಕೊಂಡ. ಕ್ಷತ್ರಿಯನಲ್ಲದಿದ್ದರೂ ಶಿವಾಜಿಯನ್ನು ರಾಜಸ್ಥಾನದ ಸಿಸೋಡಿಯಾ ಮನೆತನದವನೆಂದು ಜನ್ಮ ಜಾತಕದಲ್ಲಿ ಬದಲಿಸಿ ನಾಗಾ ಭಟ್ಟರು ಪಟ್ಟಾಭಿಷೇಕ ಮಾಡಿದರು.

    ತಂದೆ ಬೆಂಗಳೂರಿನ ಗವರ್ನರ್!

    ಶಿವಾಜಿ ತಂದೆ ಶಹಾಜಿ ಕರ್ನಾಟಕದಲ್ಲೇ ನೆಲೆಸಿದ್ದರು. ವಿಜಯಪುರದ ಆದಿಲ್​ಷಾಹಿಗಳ ಆಸ್ಥಾನದಲ್ಲಿದ್ದ ಶಹಾಜಿ, ಅಲ್ಲಿ ಯುದ್ಧ ತರಬೇತಿ ಪಡೆದು, ಪೌರುಷ ಮೆರೆದರು. ಅವರಿಗೆ ಆದಿಲ್​ಷಾಹಿ ದೊರೆ ‘ರಾಜೆ’ ಎಂಬ ಬಿರುದು ನೀಡಿ ಗೌರವಿಸಿದರು. ಅಲ್ಲದೆ, ತಮ್ಮ ಆಳ್ವಿಕೆ ಇರುವ ಬೆಂಗಳೂರಿನಲ್ಲಿ ‘ಗವರ್ನರ್’ ಆಗಿ ನೇಮಿಸಿದರು. ಕೋಲಾರ, ಚಿಕ್ಕಮಗ ಳೂರು, ತುಮಕೂರು, ಶಿವಮೊಗ್ಗದ ಕೆಲ ಪ್ರದೇಶ ಶಹಾಜಿ ವ್ಯಾಪ್ತಿಗೆ ಒಳಪಟ್ಟಿತ್ತು. ತಂದೆ ಬೆಂಗಳೂರಿನಲ್ಲಿ ಇದ್ದುದರಿಂದ ಅನೇಕ ಬಾರಿ ಶಿವಾಜಿ ಇಲ್ಲಿಗೆ ಬಂದಿದ್ದ.

    ತಂದೆ-ಅಣ್ಣನ ಸಮಾಧಿ

    ಶಿವಾಜಿ ತಂದೆ ಶಹಾಜಿ ಹೊದಿಗೆರೆ (ಈಗಿನ ದಾವಣಗೆರೆ ಜಿಲ್ಲೆ) ಎಂಬಲ್ಲಿ ಶಿಕಾರಿಗೆ ಹೋದಾಗ ಕುದುರೆಯಿಂದ ಬಿದ್ದು ಪ್ರಾಣ ಕಳೆದುಕೊಂಡರು. ಅಲ್ಲಿಯೇ ಅವರ ಸಮಾಧಿ ಇದೆ. ಅಲ್ಲದೆ, ಅಣ್ಣ ಸಂಭಾಜಿ ಕೊಪ್ಪಳದ ಕನಕ ಗಿರಿಯಲ್ಲಿ ನಡೆದ ಯುದ್ಧದಲ್ಲಿ ವೀರಮರಣ ಹೊಂದಿದ. ಕನಕಗಿರಿಯಲ್ಲಿ ಸಂಭಾಜಿ ಸಮಾಧಿ ಇದೆ. ಈ ಎರಡೂ ಸಂಗತಿಗಳನ್ನು ನೋಡಿದಾಗ ಶಿವಾಜಿ ಕುಟುಂಬ ಕನ್ನಡನಾಡಿನಲ್ಲೇ ನೆಲೆಸಿತ್ತು ಎನ್ನುವುದು ಸ್ಪಷ್ಟ.

    ಶ್ರೀಶೈಲ ಚನ್ನಮಲ್ಲಿಕಾರ್ಜುನ ಕುಲದೇವರು

    ಶಿವಾಜಿ ಪಟ್ಟಾಭಿಷೇಕದ ಬಳಿಕ ಈ ವಿಚಾರ ತಿಳಿದು ಸಿಸೋಡಿಯಾ ಮನೆತನದವರು, ‘ಶಿವಾಜಿ ನಮ್ಮ ವಂಶಸ್ಥ ಅಲ್ಲ. ನಾವು ಕೃಷ್ಣಭಕ್ತರು. ಶಿವಾಜಿ ಶಿವಭಕ್ತ. ಹಾಗಾಗಿ ಆತ ನಮ್ಮವನಲ್ಲ’ ಎಂದು ಸ್ಪಷ್ಟಪಡಿಸಿದರು. ಹಾಗಾದರೆ, ಶಿವಾಜಿಯ ಕುಲದೇವರು ಯಾರು ಎಂದು ಹುಡುಕಾಡಿದರೆ, ಶ್ರೀಶೈಲದ ಚನ್ನಮಲ್ಲಿಕಾರ್ಜುನ ದೇವರು ಕುಲದೈವ ಎಂದು ತಿಳಿಯುತ್ತದೆ. ಶ್ರೀಶೈಲ ಇರುವುದು ದಕ್ಷಿಣ ದಿಕ್ಕಿನಲ್ಲಿ. ಅದು ಕರ್ನಾಟಕ ಇರುವ ದಿಕ್ಕು. ಹೀಗಾಗಿ ಶಿವಾಜಿ ಕರ್ನಾಟಕದವನು ಎನ್ನಲು ಇನ್ನಷ್ಟು ಸಾಕ್ಷ್ಯಾಧಾರ ನೀಡಲಾಗಿದೆ.

    ಹಿಂದೂ ಸಾಮ್ರಾಜ್ಯ ಪುನರುತ್ಥಾನ

    ಪಟ್ಟಾಭಿಷೇಕದ ಬಳಿಕ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡುತ್ತಿದ್ದ ಶಿವಾಜಿ, 1676ರಲ್ಲಿ ಹಂಪಿಯ ವಿಜಯನಗರಕ್ಕೆ ಬಂದಿದ್ದ. ಹಂಪಿ ವಿರೂಪಾಕ್ಷ ದೇಗುಲಕ್ಕೆ ಬಂದು ದೇವರ ದರ್ಶನ ಪಡೆದು, ಅಲ್ಲಿಯೇ ಕೆಲಕಾಲ ಧ್ಯಾನ ಮಾಡಿದ. ಶಿವಾಜಿ ಮಹಾರಾಜ ತಮ್ಮೂರಿಗೆ ಬಂದಿದ್ದನ್ನು ತಿಳಿದ ಜನರು, ಮಂದಿರಕ್ಕೆ ದೌಡಾಯಿಸಿದರು. ಶಿವಾಜಿ ಬಳಿ ಅವರು, ವಿಜಯನಗರದಲ್ಲೇ ಇರುವಂತೆ ಕೇಳಿಕೊಂಡರು. ಇದನ್ನು ನಿರಾಕರಿಸಿದ ಶಿವಾಜಿ, ‘ಪತನಗೊಂಡ ವಿಜಯನಗರದ ಹಿಂದೂ ಸಾಮ್ರಾಜ್ಯದ ಪುನರುತ್ಥಾನ ಮಾಡುವುದೇ ನನ್ನ ಮುಂದಿನ ಗುರಿ. ಹೀಗಾಗಿ ನಾನು ಇಲ್ಲಿರಲಾರೆ’ ಎಂದ.

    ಶಿವಾಜಿ ಮೂಲ ಕನ್ನಡ ನೆಲ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ವಿಚಾರವಾಗಿ ನಾನು ‘ಶಿವಾಜಿ ಮೂಲ ಕನ್ನಡ ನೆಲ’ ಎಂಬ ಪುಸ್ತಕ ಬರೆದಿದ್ದೇನೆ. ಇದು ಒಂಬತ್ತು ಬಾರಿ ಮುದ್ರಣಗೊಂಡಿದೆ. ಬಳ್ಳಾರಿಯ ಲೋಹಿಯಾ ಪ್ರಕಾಶನದವರು ಇದನ್ನು ಮುದ್ರಿಸಿದ್ದಾರೆ.

    | ಡಾ. ಸರಜೂ ಕಾಟ್ಕರ್ ಹಿರಿಯ ಸಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts