More

    ಶಿರಾ ಕೋಟೆ ಭೇದಿಸಲು ಬಿಜೆಪಿ ಸಜ್ಜು: ಡಾ.ಸಿ.ಎಂ.ರಾಜೇಶ್​ಗೌಡ ಅಧಿಕೃತವಾಗಿ ಬಿಜೆಪಿ ಸೇರ್ಪಡೆ 

    ಬೆಂಗಳೂರು/ತುಮಕೂರು: ಶಿರಾ ಉಪಸಮರ ಕದನ ರೋಚಕವಾಗುತ್ತಿದೆ. ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಪುತ್ರ ಡಾ.ಸಿ.ಎಂ.ರಾಜೇಶ್​ಗೌಡ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದು, ಶಿರಾ ಕೋಟೆ ಭೇದಿಸುವ ಪ್ರಯತ್ನದಲ್ಲಿ ಬಿಜೆಪಿ ಮೊದಲ ಯಶ ಕಂಡಿದೆ.

    ಮೂರು ಬಾರಿ ಸಂಸದರಾಗಿದ್ದ ಮೂಡಲಗಿರಿಯಪ್ಪ ಅವರ ಪುತ್ರ, ಡಾ.ರಾಜೇಶ್​ಗೌಡ ಅವರ ಜತೆೆ ನಾದೂರು ಹಾಗೂ ಮದಲೂರು ಜಿಪಂ ಸದಸ್ಯೆಯರ ಪತಿಯರು ಬಿಜೆಪಿ ಸೇರ್ಪಡೆಯಾಗಿದ್ದು, ಅವರನ್ನು ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಪಕ್ಷದ ಬಾವುಟ ನೀಡುವ ಮೂಲಕ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ತಾಪಂ ಸದಸ್ಯರು, ನಗರಸಭಾ ಮಾಜಿ ಸದಸ್ಯರು ಸೇರಿ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು. ಸ್ಥಳದಲ್ಲಿಯೇ ಪ್ರಾಥಮಿಕ ಸದಸ್ಯತ್ವ ನೀಡಲಾಯಿತು.

    ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಡಾ.ರಾಜೇಶ್ ಗೌಡ, ದೇಶದಲ್ಲಿ ಕಟ್ಟಕಡೆಯ ಪ್ರಜೆಗೂ ಒಳ್ಳೆ ಜೀವನ ಸಿಗಲು ಉತ್ತಮ ರಾಜಕೀಯ ವೇದಿಕೆ ಅಗತ್ಯ. ನಾನೊಬ್ಬ ವೈದ್ಯ, ಇದುವರೆಗೆ ಯಾವುದೇ ಪಕ್ಷ ಸೇರಿರಲಿಲ್ಲ. ನಾನು ಮೊದಲಿಂದಲೂ ಬಿಜೆಪಿ ಬೆಂಬಲಿಸುತ್ತಿದ್ದೆ. ಇವತ್ತು ಬಿಜೆಪಿ ಸೇರುತ್ತಿರುವುದು ಸಂತಸ ತಂದಿದೆ ಎಂದರು. ನನ್ನ ತಂದೆ ಮೂಡಲಗಿರಿಯಪ್ಪ ಮೂರು ಬಾರಿ ಸಂಸದ, ಒಮ್ಮೆ ಶಿರಾ ಕ್ಷೇತ್ರದ ಶಾಸಕರಾಗಿದ್ದರು. ನನಗೂ ರಾಜಕೀಯಕ್ಕೆ ಬರುವಂತೆ ಕ್ಷೇತ್ರದ ಜನತೆಯ ಒತ್ತಾಯವಿತ್ತು. ನಾನು ಪಕ್ಷ ಸೇರಿದರೆ ಅದು ಬಿಜೆಪಿಯೇ ಆಗಿರಬೇಕು ಅಂದುಕೊಂಡಿದ್ದೆ. ಶಿರಾ ಕ್ಷೇತ್ರದಲ್ಲಿ ನಾವೆಲ್ಲ ಬಿಜೆಪಿ ವಿಜಯ ಪತಾಕೆ ಹಾರಿಸುತ್ತೇವೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳಲ್ಲಿ ನಾನು ಸಂಪೂರ್ಣ ತೊಡಗಿಸಿಕೊಳ್ಳುವೆ ಎಂದು ರಾಜೇಶ್​ಗೌಡ ತಿಳಿಸಿದರು.

    ಟಿಕೆಟ್ ಪಕ್ಷಕ್ಕೆ ಬಿಟ್ಟದ್ದು: ಇವತ್ತು ಕಾರ್ಯಕರ್ತನಾಗಿ ಸೇರ್ಪಡೆ ಆಗಿದ್ದೇನೆ. ಟಿಕೆಟ್ ವಿಚಾರದಲ್ಲಿ ಪಕ್ಷ ತೀರ್ಮಾನ ಮಾಡಲಿದೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನಾನು ನಾಯಕತ್ವಕ್ಕೆ ಮೆಚ್ಚಿ ಸೇರ್ಪಡೆ ಆಗಿದ್ದೇನೆ ಎಂದು ಡಾ.ಸಿ.ಎಂ.ರಾಜೇಶ್​ಗೌಡ ಹೇಳಿದರು. ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿದ್ದ ಬಿಜೆಪಿಗೆ ರಾಜೇಶ್​ಗೌಡ ಅಭ್ಯರ್ಥಿ ಆಗುವುದು ನಿಚ್ಚಳವೆನಿಸಿದೆ. ಪಕ್ಷದ ವರಿಷ್ಠರ ಭರವಸೆ ಹಿನ್ನೆಲೆಯಲ್ಲೇ ರಾಜೇಶ್​ಗೌಡ ಬಿಜೆಪಿ ಸೇರಿದ್ದಾರೆ ಎನ್ನಲಾಗಿದೆ.

    ಭರ್ಜರಿ ಆಪರೇಷನ್ ಕಮಲ: ಶಿರಾ ಕ್ಷೇತ್ರ ಗೆಲ್ಲಲು ಬಿಜೆಪಿ ಭರ್ಜರಿ ರಣತಂತ್ರ ರೂಪಿಸಿದೆ. ನಾದೂರು ಕ್ಷೇತ್ರದ ಜೆಡಿಎಸ್ ಜಿಪಂ ಸದಸ್ಯೆ ಗಿರಿಜಮ್ಮ, ಮದಲೂರು ಕ್ಷೇತ್ರದ ಕಾಂಗ್ರೆಸ್ ಜಿಪಂ ಸದಸ್ಯೆ ಲಕ್ಷ್ಮೀದೇವಿ ಆಪರೇಷನ್ ಕಮಲಕ್ಕೊಳಗಾಗಿದ್ದು ಅವರ ಪರವಾಗಿ ಪತಿಯಂದಿರಾದ ಶ್ರೀರಂಗಪ್ಪ ಯಾದವ್, ನರಸಿಂಹಮೂರ್ತಿ ಬಿಜೆಪಿ ಸೇರ್ಪಡೆಯಾದರು. ತಾಪಂ ಸದಸ್ಯರೂ ಬಿಜೆಪಿ ಸೇರಿದರು.

    ರಾಜೇಶ್ ಗೌಡ ಪಕ್ಷಕ್ಕೆ ಬಂದಿದ್ದು ದೊಡ್ಡ ಬಲ ತಂದಿದೆ. ಇವರು ಶಿರಾ ಟಿಕೆಟ್ ಬಯಸಿ ಪಕ್ಷ ಸೇರಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬಂದಿದ್ದಾರೆ.

    | ಬಿ.ಸುರೇಶ್​ಗೌಡ ಬಿಜೆಪಿ ಜಿಲ್ಲಾಧ್ಯಕ್ಷ

    ಶಿರಾದಲ್ಲಿ ಬಿಜೆಪಿ ಗೆಲುವು ಶತಸಿದ್ಧ. ಇಂದು ಬಹಳಷ್ಟು ಮುಖಂಡರು ಬಿಜೆಪಿ ಸೇರಿದ್ದಾರೆ. ಆ ಮೂಲಕ ಇನ್ನಷ್ಟು ಬಲ ಬಂದಿದ್ದು, ಇವರೆಲ್ಲರ ಶ್ರಮದಿಂದ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ.

    | ನಳಿನ್ ಕುಮಾರ್ ಕಟೀಲ್ ಬಿಜೆಪಿ ಅಧ್ಯಕ್ಷ

    ರಾಜೇಶ್​ಗೌಡ, ಹನುಂತರಾಯಪ್ಪ ಜೆಡಿಎಸ್ ಕಾರ್ಯಕರ್ತರಲ್ಲ: ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ

    ಬೆಂಗಳೂರು: ರಾಜರಾಜೇಶ್ವರಿ ನಗರದ ಮುಖಂಡ ಹನುಮಂತರಾಯಪ್ಪ ನಮ್ಮ ಪಕ್ಷದ ಕಾರ್ಯಕರ್ತರಲ್ಲ. ಬೇಕಾದಾಗ ನಮ್ಮ ಪಕ್ಷಕ್ಕೆ ಬಂದು ಬೇಡವಾದಾಗ ಹೋಗಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. 2008 ರಲ್ಲಿ ಹನುಮಂತರಾಯಪ್ಪ ಅವರಿಗೆ ಟಿಕೆಟ್ ಕೇಳಿದ್ದರು, ಕೊಟ್ಟಿದ್ದೆವು. ಸೋತ ನಂತರ ಕಾಂಗ್ರೆಸ್​ಗೆ ಹೋಗಿದ್ದರು. 2013ರಲ್ಲಿ ಟಿಕೆಟ್ ಕೊಟ್ಟಿರಲಿಲ್ಲ. ಮತ್ತೆ 2018ರಲ್ಲಿ ಬಂದಿದ್ದರು. ಅವರು ಯಾವಾಗ ಬೇಕು ಆವಾಗ ಬಂದು ಹಾಳು ಮಾಡಿ ಹೋಗಿದ್ದಾರೆ. ಅವರಿಗೆ ನಾನೇನೂ ಅಂತಹ ಸಹಾಯವನ್ನೂ ಮಾಡಿಲ್ಲ ಎಂದರು. ಶಿರಾದಲ್ಲಿ ಟಿಕೆಟ್ ಕೇಳಿ, ಈಗ ಬಿಜೆಪಿಗೆ ಅರ್ಜಿ ಹಾಕಿದವರೂ ನಮ್ಮ ಪಕ್ಷದ ಕಾರ್ಯಕರ್ತರಲ್ಲ. ನಾವು ಟಿಕೆಟ್ ಕೊಡುವುದಿಲ್ಲ ಎಂದಾಗ ಬಿಜೆಪಿಗೆ ಅರ್ಜಿ ಹಾಕಿದ್ದಾರೆ ಎಂದು ಡಾ.ರಾಜೇಶ್ ಗೌಡರ ಹೆಸರು ಹೇಳದೆ ಕುಟುಕಿದರು.

    ಶಿರಾದಲ್ಲಿ ಸಿಪಿಐ ಸ್ಪರ್ಧೆ

    ಉಪಚುನಾವಣೆಗೆ ಸಿಪಿಐ ಪಕ್ಷದಿಂದ ಸಂಗಾತಿ ಗಿರೀಶ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್ ತಿಳಿಸಿದರು. ಶಿರಾದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ನಿಂದ ಆಯ್ಕೆಯಾದ ಅಭ್ಯರ್ಥಿಗಳು ಹಣಕ್ಕಾಗಿ ಪಕ್ಷಾಂತರಗೊಂಡು ಜನಪರ ಸೇವೆ ಮಾಡದೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಉಪಚುನಾವಣೆಯಲ್ಲಿ ಸಿಪಿಐ ಸ್ಪರ್ಧಿಸಲಿದೆ ಎಂದರು. ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಕಾಂತರಾಜು, ತಾಲೂಕು ಕಾರ್ಯದರ್ಶಿ ಭೂತರಾಜು, ಸಹ ಕಾರ್ಯದರ್ಶಿ ಶಂಭಣ್ಣ, ದೊಡ್ಡಸೀಬಿ ರಂಗನಾಥಪ್ಪ, ತಾಲೂಕು ಮಂಡಳಿ ಸದಸ್ಯರು, ಜಿಲ್ಲಾ ಮುಖಂಡರು ಇದ್ದರು.

    ಟಿಬಿಜೆ ಒಮ್ಮತದ ಅಭ್ಯರ್ಥಿ

    ಈಗಾಗಲೇ ಶಿರಾ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಎಲ್ಲರೂ ಒಂದೇ ಅಭಿಪ್ರಾಯಕ್ಕೆ ಬಂದಿದ್ದಾರೆ. ಅಲ್ಲಿನವರು ಅಂತಿಮವಾಗಿ ಸೂಚಿಸುವ ಅಭ್ಯರ್ಥಿ ಹೆಸರನ್ನೇ ಹೈಕಮಾಂಡ್​ಗೆ ಶಿಫಾರಸು ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಳಗಾವಿಯಲ್ಲಿ ಹೇಳಿದ್ದಾರೆ. ಟಿ.ಬಿ.ಜಯಚಂದ್ರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದು, ಅವರ ಹೆಸರನ್ನು ಸ್ಥಳೀಯರು, ಜಿಲ್ಲಾ ವರಿಷ್ಠರು ಸೂಚಿಸಿದ್ದು ಅವರೇ ಒಮ್ಮತದ ಅಭ್ಯರ್ಥಿಯಾಗಿ ಹೊರಹೊಮ್ಮಲಿದ್ದಾರೆ. ಔಪಚಾರಿಕವಾಗಿ ಹೈಕಮಾಂಡ್​ಗೆ ಹೆಸರನ್ನು ಕೆಪಿಸಿಸಿ ಶಿಫಾರಸು ಮಾಡಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts