More

    ಪೌರ ಕಾರ್ಮಿಕರ ಮನೆಗಳಿಗೆ ಹಕ್ಕುಪತ್ರ: ಈಶ್ವರಪ್ಪ ಭರವಸೆ

    ಶಿವಮೊಗ್ಗ: ನಗರದ ಮಾರ್ನಮಿಬೈಲು ಮತ್ತು ಹೊಸಮನೆಯಲ್ಲಿ ಪೌರ ಕಾರ್ಮಿಕರು ವಾಸಿಸುತ್ತಿರುವ ಮನೆಗಳ ಸಕ್ರಮಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಒಟ್ಟು 120 ಮನೆಗಳಿಗೆ ಹಕ್ಕುಪತ್ರ ದೊರೆಯಲಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದರು.
    ನಗರ ಪಾಲಿಕೆಯಿಂದ ಶುಕ್ರವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾರ್ನಮಿಬೈಲು ಹಾಗೂ ಹೊಸಮನೆಯಲ್ಲಿ ಪೌರ ಕಾರ್ಮಿಕರು ವಾಸಿಸುತ್ತಿರುವ ಜಾಗದ ಸರ್ವೇ ನಡೆಸುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
    ಸಿದ್ದೇಶ್ವರ ನಗರದಲ್ಲಿ 4.5 ಕೋಟಿ ರೂ. ವೆಚ್ಚದಲ್ಲಿ ಪೌರ ಕಾರ್ಮಿಕರಿಗಾಗಿ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಇಂತಹದೊಂದು ಪ್ರಯತ್ನ ರಾಜ್ಯದಲ್ಲಿ ನಡೆದಿರುವುದು ಇದೇ ಮೊದಲು. ಕೆಲ ದಿನಗಳಲ್ಲೇ ಸಮುದಾಯ ಭವನ ಪೂರ್ಣಗೊಳ್ಳಲಿದೆ. ಪೌರ ಕಾರ್ಮಿಕರು ಶುಭ ಸಮಾರಂಭಗಳನ್ನು ನಡೆಸಲು ಅತ್ಯಂತ ಕಡಿಮೆ ಬಾಡಿಗೆಯಲ್ಲಿ ಇಲ್ಲಿ ಅವಕಾಶ ದೊರೆಯಲಿದೆ ಎಂದರು.
    ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ 6.09 ಗುಂಟೆ ಜಮೀನಿನಲ್ಲಿ ಒಟ್ಟು 168 ಮನೆಗಳ ನಿರ್ಮಾಣ ಕಾರ್ಯ ಶೇ.60ರಷ್ಟು ಮುಗಿದಿದೆ. ಪ್ರತಿ ಮನೆಗೆ 8.25 ಲಕ್ಷ ರೂ. ವೆಚ್ಚವಾಗಲಿದೆ. ಫಲಾನುಭವಿಗಳು 1.50 ಲಕ್ಷ ರೂ. ಪಾವತಿಸಬೇಕು. ಆದರೆ ಇದುವರೆಗೆ ಯಾರೂ ಹಣ ಪಾವತಿಸಿಲ್ಲ. 1.50 ಲಕ್ಷ ರೂ.ನ್ನು ಪಾಲಿಕೆಯ 24.10 ಅನುದಾನದಲ್ಲಿ ಭರಿಸಬಹುದೆಂದು ತಿಳಿಸಿದ್ದೀರಿ. ಈ ರೀತಿ ಹಣ ಭರಿಸಿ ಸಂಪೂರ್ಣವಾಗಿ ತಮಗೆ ಉಚಿತವಾಗಿ ಮನೆಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಈಶ್ವರಪ್ಪ ಭರವಸೆ ನೀಡಿದರು.
    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ್, ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಮಾರಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದಪ್ಪ, ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts