More

    ಮೆಗ್ಗಾನ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಅದಲು-ಬದಲು ಫಜೀತಿ

    ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ನವಜಾತ ಗಂಡು ಶಿಶುಗಳು ಅದಲು ಬದಲು ಆಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಅನಾರೋಗ್ಯದಿಂದ ಮೃತಪಟ್ಟ ಶಿಶುವನ್ನು ಬೇರೆ ಪಾಲಕರಿಗೆ ಹಸ್ತಾಂತರಿಸಿ ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿಕೊಂಡಿದ್ದಾರೆ.
    ಉತ್ತರ ಕರ್ನಾಟಕದ ಪೊಲೀಸ್ ಪೇದೆಯೊಬ್ಬರು ಸಾಗರದಲ್ಲಿ ಮದುವೆಯಾಗಿದ್ದು, ಅವರ ಪತ್ನಿ ಐದು ದಿನಗಳ ಹಿಂದಷ್ಟೇ ಗಂಡು ಶಿಶುವಿಗೆ ಜನ್ಮ ನೀಡಿದ್ದರು. 2.400 ಕೆಜಿ ತೂಕವಿದ್ದ ಶಿಶುವಿಗೆ ಆರೋಗ್ಯ ಸಮಸ್ಯೆ ಉಲ್ಬಣವಾಗಿದ್ದರಿಂದ ಮೆಗ್ಗಾನ್ ಆಸ್ಪತ್ರೆಯ ಐಸಿಯುಗೆ ದಾಖಲಿಸಿದ್ದರು.
    ಇದೇ ವೇಳೆ ನ.2ರಂದು ಹೊನ್ನಾಳ್ಳಿ ತಾಲೂಕಿನ ಸಾಸ್ವೆಹಳ್ಳಿ ಸಮೀಪದ ಹಳ್ಳಿಯೊಂದರ ಮಹಿಳೆಗೆ ಜನಿಸಿದ್ದ ಗಂಡು ಶಿಶುವನ್ನು ಗುರುವಾರ ರಾತ್ರಿ ಮೆಗ್ಗಾನ್ ಆಸ್ಪತ್ರೆಯ ಐಸಿಯುವಿಗೆ ಕರೆತಂದಿದ್ದರು. 1.500 ಕೆಜಿ ತೂಕವಿದ್ದ ಶಿಶು ಚಿಕಿತ್ಸೆ ಫಲಿಸದೇ ಮೃತಪಟ್ಟಿತ್ತು.
    ಒಂದೇ ಹೆಸರಿದ್ದ ಕಾರಣಕ್ಕೆ ಗೊಂದಲ:
    ಆಸ್ಪತ್ರೆಗೆ ದಾಖಲಿಸುವಾಗ ತಾಯಂದಿರು ಹೆಸರು ಒಂದೇ ಆಗಿತ್ತು. ಇದು ಐಸಿಯುವಿನಲ್ಲಿದ್ದ ಸಿಬ್ಬಂದಿ ಗಮನಕ್ಕೆ ಬಂದಿರಲಿಲ್ಲ. ಸಾಸ್ವೇಹಳ್ಳಿ ಸಮೀಪದ ಮಹಿಳೆಗೆ ಜನಿಸಿದ್ದ ಶಿಶು ಚಿಕಿತ್ಸೆ ಫಲಿಸದೇ ತಡರಾತ್ರಿ ಮೃತಪಟ್ಟಿತ್ತು. ಸಿಬ್ಬಂದಿ ತಾಯಿ ಹೆಸರು ಕೂಗಿದಾಗ ಅಲ್ಲೇ ಇದ್ದ ಸಾಗರದಿಂದ ಬಂದಿದ್ದ ಮಹಿಳೆ ಹೋಗಿದ್ದರು. ಕೂಲಂಕಶವಾಗಿ ಪರಿಶೀಲಸದೇ ತರಾತುರಿಯಲ್ಲಿ ಸಾಗರದ ಮಹಿಳೆಗೆ ನಿಮ್ಮ ಶಿಶು ಅಸುನೀಗಿದೆ ಎಂದು ಹೇಳಿ ಮೃತದೇಹವನ್ನು ಹಸ್ತಾಂತರಿಸುವ ಪ್ರಕ್ರಿಯೆ ಮುಗಿಸಿ ಮನೆಗೆ ಕಳುಹಿಸಿದ್ದರು.
    ಅಂತ್ಯಕ್ರಿಯೆ ಬಳಿಕ ಮತ್ತೆ ಬಂತು ಕರೆ:
    ಸಾಗರದಲ್ಲಿ ಮೃತ ಶಿಶುವಿನ ಅಂತ್ಯಕ್ರಿಯೆ ನೆರವೇರಿಸಿ ಮನೆಗೆ ವಾಪಸ್ ಆಗುವ ವೇಳೆ ಮೆಗ್ಗಾನ್ ಆಸ್ಪತ್ರೆಯಿಂದ ದೂರವಾಣಿ ಕರೆ ಮಾಡುವ ಸಿಬ್ಬಂದಿ ನಿಮ್ಮ ಶಿಶು ಬದುಕಿದೆ. ಮೃತ ಶಿಶುವನ್ನು ನೀವಿರುವ ಸ್ಥಳಕ್ಕೆ ಆಂಬುಲೆನ್ಸ್ ಕಳುಹಿಸುತ್ತೇವೆ. ವಾಪಸ್ ತೆಗೆದುಕೊಂಡು ಬರುವಂತೆ ಹೇಳಿದ್ದರು. ಆದರೆ ಶಿಶುವಿನ ಅಂತ್ಯಕ್ರಿಯೆ ಮಾಡಿರುವುದಾಗಿ ಹೇಳಿದಾಗ ಆಸ್ಪತ್ರೆ ಸಿಬ್ಬಂದಿ ಗೊಂದಲಕ್ಕೀಡಾಗಿದ್ದಾರೆ. ಈ ನಡುವೆ ಮಗು ಬದುಕಿದೆ ಎಂಬ ಸುದ್ದಿ ಕೇಳಿ ಸಾಗರದಿಂದ ಪಾಲಕರು ಓಡೋಡಿ ಬಂದಿದ್ದಾರೆ.
    ಮೃತ ಮಗುವಿನ ಸಂಬಂಧಿಕರ ಆಕ್ರೋಶ:
    ಆಸ್ಪತ್ರೆಯಲ್ಲಿ ಬದುಕಿದ್ದ ಶಿಶು ನಿಮ್ಮದ್ದಲ್ಲ. ನಿಮ್ಮ ಮಗು ಮೃತಪಟ್ಟಿದೆ. ತಾಯಂದಿರ ಒಂದೇ ಹೆಸರಿದ್ದ ಕಾರಣಕ್ಕೆ ಗೊಂದಲದಿಂದ ಶಿಶು ಅದಲು-ಬದಲಾಗಿದೆ ಎಂದು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಮೃತ ಶಿಶುವಿನ ಕಡೆಯವರು ದೊಡ್ಡಪೇಟೆ ಠಾಣೆವರೆಗೆ ಬಂದು ದೂರು ನೀಡಲು ಮುಂದಾಗಿದ್ದರು. ಕೊನೆಗೆ ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಶ್ರೀಧರ್ ಮಧ್ಯಪ್ರವೇಶಿಸಿ ಮೃತ ಶಿಶುವಿನ ಕಡೆಯವರನ್ನು ಸಮಾಧಾನ ಪಡಿಸಿ ಮನೆಗೆ ಕಳುಹಿಸಿದ್ದಾರೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts