More

    ನೆಹರು ಕ್ರೀಡಾಂಗಣದ ಅವ್ಯವಸ್ಥೆ, ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ

    ಶಿವಮೊಗ್ಗ: ನೆಹರು ಕ್ರೀಡಾಂಗಣದಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಸಹ್ಯಾದ್ರಿ ಸ್ನೇಹ ಸಂಘ ಮತ್ತು ಸ್ಟೇಡಿಯಂ ಗೆಳೆಯರ ಬಳಗದ ಪದಾಧಿಕಾರಿಗಳು ಬುಧವಾರ ಕ್ರೀಡಾಂಗಣದ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
    ಕ್ರೀಡಾಂಗಣದಲ್ಲಿ ಮೂಲಸೌಲಭ್ಯದ ಕೊರತೆಯಿದ್ದು ಇಡೀ ಕ್ರೀಡಾಂಗಣ ಕಸ ಕಡ್ಡಿಗಳಿಂದ ತುಂಬಿದೆ. ಕಳೆದೆರಡು ವರ್ಷಗಳಿಂದ ವಿವಿಧ ಕಾಮಗಾರಿಗಳ ನೆಪದಲ್ಲಿ ಕ್ರೀಡಾಪಟುಗಳಿಗೆ ಮತ್ತು ವಾಯುವಿಹಾರಕ್ಕೆ ಬರುವವರಿಗೆ ಗುತ್ತಿಗೆದಾರರಿಂದ ತೊಂದರೆಯಾಗುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ನೆಹರು ಒಳಾಂಗಣ ಹಾಗೂ ಹೊರಾಂಗಣ ಮುಖ್ಯದ್ವಾರದ ಬಳಿ ಕಟ್ಟಡ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿ ಸಂಬಂಧಿತ ವಾಹನಗಳು ಓಡಾಡುತ್ತಿರುವುದರಿಂದ ಇಡೀ ಕ್ರೀಡಾಂಗಣ ಧೂಳುಮಯವಾಗಿದೆ. ಶೌಚ ಗೃಹದ ಕಟ್ಟಡ ನೆಲೆಸಮಗೊಳಿಸಿದ್ದು ಕ್ರೀಡಾಪಟುಗಳು ಪರದಾಡುವಂತಾಗಿದೆ. ಕೋಟ್ಯಂತರ ರೂ. ದುಂದು ವೆಚ್ಚವಾಗಿದೆ. ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಹಲವರು ಬಿದ್ದು ಗಾಯಗೊಂಡಿದ್ದು ಇಡೀ ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗಿದೆ ಎಂದು ದೂರಿದರು.
    ಸಹ್ಯಾದ್ರಿ ಸ್ನೇಹಸಂಘದ ಅಧ್ಯಕ್ಷ ಡಾ. ಸತೀಶ್‌ಕುಮಾರ್ ಶೆಟ್ಟಿ ಮಾತನಾಡಿ, ಅಂತಾರಾಷ್ಟ್ರಿಯ ಹಾಕಿ ಕ್ರೀಡಾಂಗಣಕ್ಕೆಂದು 33 ಕೋಟಿ ರೂ. ವೆಚ್ಚದಲ್ಲಿ ಅವೈಜ್ಞಾನಿಕ 2 ಅಂತಸ್ಥಿತ ಅಂಕಣ ಮಾಡಲು ಹೊರಟಾಗ ತೀವ್ರ ವಿರೋಧವಾದ ಹಿನ್ನೆಲೆಯಲ್ಲಿ ಆ ಹಣವನ್ನು ಅನವಶ್ಯಕ ಕಟ್ಟಡಗಳಿಗೆ ಬಳಸಲಾಗುತ್ತಿದೆ. ಕ್ರೀಡಾಂಗಣವನ್ನು ಬಯಲುಮುಕ್ತಗೊಳಿಸಿ ಕಟ್ಟಡಮಯ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
    ಕ್ರೀಡಾಂಗಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹವಿಲ್ಲ. ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಅನಿವಾರ್ಯವಾಗಿ ಕ್ರೀಡಾಂಗಣಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಪ್ರಮುಖರಾದ ಜೈ ಪ್ರಕಾಶ್ ಕಳ್ಳಿ, ರಾಜೇಶ್ ಕಾಮತ್, ದಿವಾಕರ್ ಶೆಟ್ಟಿ, ಪ್ರದೀಪ್ ವಿ.ಯಲಿ, ತಿಮ್ಮಪ್ಪ ಸೇರಿದಂತೆ ಸ್ಟೇಡಿಯಂ ಗೆಳೆಯರ ಬಳಗ ಮತ್ತು ಸಹ್ಯಾದ್ರಿ ಸ್ನೇಹಸಂಘದ ಸದಸ್ಯರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts