More

    ನ.12ರಂದು ರಾಷ್ಟ್ರೀಯ ಲೋಕ ಅದಾಲತ್

    ಶಿವಮೊಗ್ಗ: ಉಭಯ ಕಕ್ಷಿದಾರರ ಸಮಯ, ಹಣ ಮತ್ತು ಸ್ನೇಹ-ಸಂಬಂಧ ಉಳಿಸುವ ಮೂಲಕ ರಾಜೀ ಸಂಧಾನ ಆಗಬಹುದಾದ ಪ್ರಕರಣಗಳನ್ನು ಇತ್ಯರ್ಥಪಡಿಸುವ ರಾಷ್ಟ್ರೀಯ ಲೋಕ ಅದಾಲತ್ ನ.12ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ತಿಳಿಸಿದರು.
    ತ್ರೈಮಾಸಿಕಕ್ಕೊಮ್ಮೆ ಲೋಕ ಅದಾಲತ್‌ಗಳನ್ನು ಹಮ್ಮಿಕೊಳ್ಳುತ್ತಿದ್ದು ನವದೆಹಲಿಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬೆಂಗಳೂರಿನ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಪ್ರಸಕ್ತ 4ನೇ ಅದಾಲತ್ ನಡೆಸಲಾಗುತ್ತಿದೆ. ಶುಕ್ರವಾರ(ಆ.21)ರವರೆಗೆ 5,785 ರಾಜೀಸಂಧಾನ ಆಗಬಹುದಾದ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಲೋಕ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಸಿವಿಲ್, ವೈವಾಹಿಕ(ವಿಚ್ಚೇದನ ಹೊರತುಪಡಿಸಿ), ಮೋಟಾರು ಪರಿಹಾರ, ಚೆಕ್‌ಬೌನ್ಸ್, ರಾಜೀಯಾಗಬಹುದಾದ ಕ್ರಿಮಿನಲ್ ಕೇಸ್, ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು, ವಿಭಜನೆ ಹಾಗೂ ಇತರೆ ಪ್ರಕರಣಗಳನ್ನು ಗುರುತಿಸಿ ಉಭಯ ಕಕ್ಷಿದಾರರನ್ನು ಕರೆಯಿಸಿ ಅವರ ಒಪ್ಪಿಗೆ ಪ್ರಕಾರ ರಾಜೀ ಸಂಧಾನದ ಮೂಲಕ ಇತ್ಯರ್ಥ ಮಾಡಲಾಗುವುದು ಎಂದು ಹೇಳಿದರು.
    ಬ್ಯಾಂಕ್‌ಗಳಿಗೆ ಸಂಬಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣ, ವಿದ್ಯುಚ್ಚಕ್ತಿ, ಜಲಮಂಡಳಿ ಹಾಗೂ ನ್ಯಾಯಾಲಯಕ್ಕೆ ಬರಬಹುದಾದಂತಹ ಇತರೆ ಯಾವುದೇ ಪ್ರಕರಣಗಳನ್ನು ಪೂರ್ವ ವ್ಯಾಜ್ಯ ಪ್ರಕರಣಗಳೆಂದು ಪರಿಗಣಿಸಿ ಅವುಗಳಲ್ಲಿ ಸಹ ಉಭಯ ಕಕ್ಷಿದಾರರ ಸಮಕ್ಷಮದಲ್ಲಿ ರಾಜೀ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸಿ ಅವಾರ್ಡ್ ಪಾಸ್ ಮಾಡಲಾಗುವುದು ಎಂದರು.
    ಈ ಅವಾರ್ಡ್ ನ್ಯಾಯಾಲಯದಲ್ಲಿ ಮಾಡಬಹುದಾದ ಡಿಕ್ರಿ ಇದ್ದಂತೆ ಆಗುತ್ತಿದ್ದು, ಅಂತಹ ಅವಾರ್ಡ್‌ಗಳನ್ನು ಸಂಬಂಧಪಟ್ಟ ಸಿವಿಲ್ ನ್ಯಾಯಾಲಯಗಳಲ್ಲಿ ಅಮಲ್ ಬಜಾವಣೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಇದರಿಂದ ಕಕ್ಷಿದಾರರಿಗೆ ನ್ಯಾಯಾಲಯದ ಖರ್ಚು ಹಾಗೂ ಅವರ ಅಮೂಲ್ಯ ಸಮಯ ಉಳಿತಾಯವಾಗುತ್ತದೆ. ಅಲ್ಲದೇ ಶೀಘ್ರವಾಗಿ ನ್ಯಾಯದಾನವಾಗುತ್ತದೆ. ನ.10ರವರೆಗೆ ರಾಜೀ ಸಂಧಾನ ಆಗಬಹುದಾದ ಪ್ರಕರಣಗಳನ್ನು ಗುರುತಿಸಲು ಅವಕಾಶವಿದೆ ಎಂದು ಹೇಳಿದರು.
    3ನೇ ಲೋಕ ಅದಾಲತ್‌ನಲ್ಲಿ 26,637 ಪ್ರಕರಣ ಇತ್ಯರ್ಥಪಡಿಸಲಾಗಿತ್ತು. ಇಲ್ಲಿ ಇತ್ಯರ್ಥವಾಗುವ ಪ್ರಕರಣಗಳು ಅಂತಿಮವಾಗಿದ್ದು, ಮೇಲ್ಮನವಿಗೆ ಅವಕಾಶವಿಲ್ಲ. ಉಭಯ ಕಕ್ಷಿದಾರರ ನಡುವಿನ ಸಂಬಂಧ ಸಹ ಸೌಹಾರ್ಧಯುತವಾಗಿದ್ದು, ಕೋರ್ಟ್ ಕಲಾಪ ಮತ್ತು ಕಕ್ಷಿದಾರರ ಸಮಯ ಉಳಿತಾಯದೊಂದಿಗೆ ಸಂಪೂರ್ಣ ಶುಲ್ಕ ವಾಪಸ್ ನೀಡುವುದರಿಂದ ಹಣ ಉಳಿತಾಯ ಕೂಡ ಆಗುತ್ತದೆ. ಆದ್ದರಿಂದ ಜನರು ಲೋಕ ಅದಾಲತ್‌ನ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯಕರ್ಶಿ ರಾಜಣ್ಣ ಸಂಕಣ್ಣನವರ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts