More

    ಕರೊನಾ ತಡೆಗೆ ಮಾರ್ಗಸೂಚಿ ಪಾಲನೆಯೇ ಮದ್ದು

    ಶಿವಮೊಗ್ಗ: ಕರೊನಾ ಓಡಿಸುವ ನಿಟ್ಟಿನಲ್ಲಿ ಭಾರತೀಯರು ಜಾಗೃತರಾಗಬೇಕಿದೆ. ಪ್ರಕೃತಿ ಕಾಪಾಡಿಕೊಂಡು ಸೋಂಕನ್ನು ನಿಯಂತ್ರಿಸಬೇಕಿದೆ ಎಂದು ಆರ್‌ಎಸ್‌ಎಸ್ ಹಿರಿಯ ಸ್ವಯಂಸೇವಕ ಜೀನರಾಜ್ ಜೈನ್ ಅಭಿಪ್ರಾಯಪಟ್ಟರು.
    ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಕರೊನಾ ಸುರಕ್ಷಾ ಪಡೆ ಹಾಗೂ ಸೇವಾ ಭಾರತಿ ಕರ್ನಾಟಕದಿಂದ ಕರೊನಾ ಸೋಂಕಿತರ ಕುಟುಂಬ ಸದಸ್ಯರ ವಾಸ್ತವ್ಯಕ್ಕೆ ಅನುಕೂಲ ಆಗುವ ತೆರೆದ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಸುನಾಮಿ, ಪ್ಲೆಗ್‌ನಿಂದ ಸಾವಿರಾರು ಜನರು ಮೃತಪಟ್ಟಿದ್ದನ್ನು ಕಂಡಿದ್ದೇವೆ. ಅವುಗಳ ಭೀಕರತೆಯನ್ನು ಜಯಿಸಿದ್ದೇವೆ. ಇದೀಗ ಕರೊನಾ ಎದುರಿಸುವ ಸವಾಲು ನಮ್ಮೆಲ್ಲರ ಮುಂದಿದೆ ಎಂದರು.
    ಕರೊನಾ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದೇ ಮದ್ದು. ಅವುಗಳ ಪಾಲನೆ ಜತೆಗೆ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವತ್ತ ಗಮನ ಹರಿಸಬೇಕು. ಇದು ಎಲ್ಲಿವರೆಗೂ ಸಾಧ್ಯವಿಲ್ಲವೋ ಅಲ್ಲಿವರೆಗೂ ಆಪತ್ತು ತಪ್ಪಿದ್ದಲ್ಲ. ಮನೆಗಳಲ್ಲೇ ಸುರಕ್ಷಿತವಾಗಿರುವ ಮೂಲಕ ಕರೊನಾವನ್ನು ಮೆಟ್ಟಿನಿಲ್ಲಬೇಕಿದೆ ಎಂದು ಹೇಳಿದರು.
    ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರಗಳು ಗಮನ ಹರಿಸಿವೆ. ಈ ನಡುವೆ ಅವರನ್ನು ನೋಡಿಕೊಳ್ಳಲು ಬಂದವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅಪವಾದಗಳು ಕೇಳಿಬರುತ್ತಿರುವ ನಡುವೆಯೇ ಸೇವಾ ಭಾರತಿ ಮತ್ತು ಕರೊನಾ ಸುರಕ್ಷಾ ಪಡೆ ಸೋಂಕಿತರ ಕುಟುಂಬ ಸದಸ್ಯ ಉಚಿತ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದೆ ಎಂದರು.
    ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ ಮಾತನಾಡಿ, ಕರೊನಾದಿಂದ ರಾಜ್ಯದೆಲ್ಲೆಡೆ ಭಿನ್ನವಾದ ವಾತಾವರಣ ಸೃಷ್ಟಿಯಾಗಿದೆ. ಕರೊನಾ ಸೋಂಕಿತರು ಒಳಗಡೆ ದಾಖಲಾಗುತ್ತಿದ್ದು, ಹೊರಗಡೆ ಇರುವ ಕುಟುಂಬ ಸದಸ್ಯರು ಅಥವಾ ಸಂಬಂಧಿಕರಿಗೆ ಒಳಗಡೆ ಏನಾಗುತ್ತಿದೆ ಎಂಬ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಹಾಗಾಗಿ ಸೇವಾ ಕೇಂದ್ರ ತೆರೆದಿದ್ದು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
    ಅರ್ಯುವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷ ಎಸ್.ದತ್ತಾತ್ರಿ, ಸೇವಾ ಭಾರತಿ ಕರ್ನಾಟಕದ ಅಧ್ಯಕ್ಷ ರವಿಕಿರಣ್, ಆರ್‌ಎಸ್‌ಎಸ್ ಹಿರಿಯ ಸ್ವಯಂಸೇವಕ ಗಿರೀಶ್ ಕಾರಂತ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ, ಜಿಪಂ ಸದಸ್ಯ ಕೆ.ಇ.ಕಾಂತೇಶ್, ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಸಿಮ್ಸ್ ನಿರ್ದೇಶಕ ಡಾ. ಒ.ಎಸ್.ಸಿದ್ಧಪ್ಪ, ಮೆಗ್ಗಾನ್ ಜಿಲ್ಲಾ ಸರ್ಜನ್ ಡಾ. ಜಿ.ಶ್ರೀನಿವಾಸ್, ವೈದ್ಯಕೀಯ ಅಧೀಕ್ಷಕ ಡಾ. ಎಸ್.ಶ್ರೀಧರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts