More

    28ರಿಂದ ಮೂರು ದಿನ ಕಲಾ ದಸರಾ; ಸಮಿತಿ ಅಧ್ಯಕ್ಷ ನಾಗರಾಜ್ ಕಂಕಾರಿ

    ಶಿವಮೊಗ್ಗ: ಮಹಾನಗರ ಪಾಲಿಕೆಯಿಂದ ದಸರಾ ಮಹೋತ್ಸವ ಅಂಗವಾಗಿ ಸೆ.28ರಿಂದ 30ರವರೆಗೆ ಕುವೆಂಪು ರಂಗಮಂದಿರ ಮತ್ತು ಫ್ರೀಡಂ ಪಾರ್ಕ್‌ನಲ್ಲಿ ಕಲಾ ದಸರಾ ಆಯೋಜಿಸಲಾಗಿದೆ ಎಂದು ಕಲಾ ದಸರಾ ಸಮಿತಿ ಅಧ್ಯಕ್ಷ ತಿಳಿಸಿದರು.
    ಸೆ.28ರಂದು ಬೆಳಗ್ಗೆ 10ಕ್ಕೆ ಕುವೆಂಪು ರಂಗಮಂದಿರದಲ್ಲಿ ಡಿಸಿ ಡಾ. ಆರ್.ಸೆಲ್ವಮಣಿ ಅವರು ಛಾಯಾಚಿತ್ರ ಪ್ರದರ್ಶನ ಮತ್ತು ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್ ಅವರು ಚಿತ್ರಕಲಾ ಪ್ರದರ್ಶನ, ಚಿತ್ರಸಂತೆ ಉದ್ಘಾಟಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಕಳೆದೆರಡು ವರ್ಷ ಕರೊನಾ ಕಾರಣದಿಂದ ದಸರಾ ಹಬ್ಬವನ್ನು ಅದ್ಧೂರಿಯಿಂದ ಆಚರಿಸಲು ಸಾಧ್ಯವಾಗಲಿಲ್ಲ. ಮೈಸೂರು ಬಿಟ್ಟರೆ ರಾಜ್ಯದಲ್ಲಿ ಶಿವಮೊಗ್ಗದಲ್ಲಿ ನಾಡಹಬ್ಬವನ್ನು ವೈಭವದಿಂದ ಆಚರಿಸಲಾಗುತ್ತಿದೆ. ಈ ಬಾರಿ 14 ದಸರಾ ಆಚರಣೆಗಳನ್ನು ಹಮ್ಮಿಕೊಂಡಿದ್ದು ಮೂರು ದಿನ ಕಲೆಗೆ ಸಂಬಂಧಿಸಿದ ಪ್ರದರ್ಶನಗಳನ್ನು ಮಾತ್ರ ನಡೆಸಲಾಗುತ್ತಿದೆ ಎಂದರು.
    28ರಂದು ಸಂಜೆ 4ರಿಂದ ಕವಿಗೋಷ್ಠಿ, 5.30ರಿಂದ ದಸರಾ ಮತ್ತು ಸಂಸ್ಕೃತಿ, ಸರ್ವೋದಯ ಮತ್ತು ವಿಶ್ವಮಾನವ ವಿಷಯ ಕುರಿತು ವಿಚಾರ ಸಂಕಿರಣ ನಡೆಸಲಾಗುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಪುಸಕ್ತ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಬಂಜಿಗೆರೆ ಜಯಪ್ರಕಾಶ್, ಕರ್ನಾಟಕ ಸಂಘದ ಮಾಜಿ ಅಧ್ಯಕ್ಷೆ ವಿಜಯಾ ಶ್ರೀಧರ್ ವಿಚಾರಣ ಸಂಕಿರಣ ಉದ್ಘಾಟಿಸುವರು. ರಾತ್ರಿ 7ಕ್ಕೆ ಹಾಸ್ಯ ಕಲಾವಿದರಾದ ಎಂ.ಎಸ್.ನರಸಿಂಹಮೂರ್ತಿ, ವೈ.ವಿ.ಗುಂಡುರಾವ್, ಇಂಧುಮತಿ ಸಾಲಿಮಠ, ಉಮೇಶ್ ಗೌಡ, ಮಿಮಿಕ್ರಿ ಗೋಪಿ ಅವರಿಂದ ಹರಟೆ ಕಾರ್ಯಕ್ರಮವಿದೆ. ಬಳಿಕ ಕಿರುಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.
    29ರಂದು ಸಂಜೆ 4ಕ್ಕೆ ಕಲಾ ದಸರಾ ಜಾಥಾ ವಿನೋಬನಗರ ಕರಿಯಣ್ಣ ಬಿಲ್ಡಿಂಗ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಡೊಳ್ಳು ಕುಣಿತ, ವೀರಗಾಸೆ, ನಗಾರಿ, ತಮಟೆ, ದೇವಿ ವೇಷಧಾರಿಗಳೊಂದಿಗೆ ವಿವಿಧ ವಾದ್ಯಮೇಳಗಳು ನಡೆಯಲಿವೆ. ಸಂಜೆ 6ಕ್ಕೆ ನಗರದ ವಿವಿಧ ಕಲಾವಿಧರಿಂದ ಜಾನಪದ ನೃತ್ಯ ಗೀತೆಗಳ ಸಂಗಮವಿದ್ದು ಎಂಎಲ್‌ಸಿ ಡಿ.ಎಸ್.ಅರುಣ್ ಮತ್ತು ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್ ಉದ್ಘಾಟಿಸುವರು. ಮೇಯರ್ ಸುನೀತಾ ಅಣ್ಣಪ್ಪ ಅಧ್ಯಕ್ಷತೆ ವಹಿಸುವರು. ಸಮಿತಿ ಸದಸ್ಯರು ಉಪಸ್ಥಿತರಿರುವರು ಎಂದು ಹೇಳಿದರು.
    ರಾಜ್ಯಮಟ್ಟದ ಜಾನಪದ ಸ್ಪರ್ಧೆ:
    ಸೆ.30ರಂದು ರಾಜ್ಯಮಟ್ಟದ ಜಾನಪದ ಸ್ಪರ್ಧೆ ನಡೆಯಲಿವೆ. ಜಾನಪದ ನೃತ್ಯಗಳೊಂದಿಗೆ ವಾದ್ಯಗಳ ಕಲರವ, ಸಮೂಜ ಜಾನಪದ ನೃತ್ಯವಿದ್ದು ರಾಮನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಕಲಾವಿದರು ಪಾಲ್ಗೊಳ್ಳುವರು. ಈ ಕಾರ್ಯಕ್ರಮವನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಉದ್ಘಾಟಿಸುವರು. ಮೇಯರ್ ಸುನೀತಾ ಅಣ್ಣಪ್ಪ ಅಧ್ಯಕ್ಷತೆ ವಹಿಸುವರು ಎಂದು ಸಮಿತಿ ಅಧ್ಯಕ್ಷ ನಾಗರಾಜ್ ಕಂಕಾರಿ ತಿಳಿಸಿದರು. ನೋಂದಣಿಗೆ (9844090378 ಅಥವಾ 9945381119) ಸಂಪರ್ಕಿಸಬಹುದು ಎಂದರು.
    ಸಮಿತಿ ಸದಸ್ಯರಾದ ಎಸ್.ಶಿವಕುಮಾರ್, ಕಲ್ಪನಾ ರಮೇಶ್, ಶಶಿಧರ್, ನಳಿನಿ, ನೀಲಮ್ಮ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts