More

    ಶಿವಮೊಗ್ಗ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾನಲ್ಲ: ಬೇಳೂರು ಗೋಪಾಲಕೃಷ್ಣ

    ಶಿವಮೊಗ್ಗ: ಶಿವಮೊಗ್ಗ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾನಲ್ಲ ಎಂದು ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಸ್ಪಷ್ಟಪಡಿಸಿದರು.

    ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನನಗೆ ಪಕ್ಷ ನಿಗಮ ಮಂಡಳಿ ಸ್ಥಾನಮಾನ ನೀಡಿ ಗೌರವಿಸಿದೆ. ಪ್ರೀತಿಯಿಂದ ಜನ ಆಶೀರ್ವಾದ ಮಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಯ್ಕೆ ಮಾಡಿದ ಯಾರೇ ಅಭ್ಯರ್ಥಿಯಾದರೂ ಅವರ ಗೆಲುವಿಗಾಗಿ ನಾವೆಲ್ಲರೂ ಸೇರಿ ಪ್ರಯತ್ನ ಮಾಡುತ್ತೇವೆ ಎಂದರು.
    ಅಗತ್ಯವಿದ್ದಲ್ಲಿ ಅರಣ್ಯ ಕೈಗಾರಿಕೆಗಳನ್ನು ಆರಂಭಿಸಲು ಚಿಂತನೆ ನಡೆಸಲಾಗುವುದು. ನಿಗಮಗಳನ್ನು ಗಂಜಿ ಕೇಂದ್ರ ಎಂಬುದನ್ನು ನಾನು ಒಪ್ಪಲಾರೆ. 20 ತಿಂಗಳು ಮಾತ್ರ ಒಬ್ಬರಿಗೆ ಮಂತ್ರಿಗಿರಿ ಕೊಡಬೇಕು ಎಂಬ ಯಾವುದೇ ಹೇಳಿಕೆಯನ್ನು ನಾನು ಸಮರ್ಥಿಸುವುದಿಲ್ಲ. ನನಗೆ ಯಾವುದೇ ಅಸಮಾಧಾನವಿಲ್ಲ ಎಂದರು.
    ಸಂಸದ ಡಿ.ಕೆ.ಸುರೇಶ್ ಹೇಳಿಕೆ ಅವರ ವೈಯುಕ್ತಿಕವಾಗಿದ್ದು ಆ ಹೇಳಿಕೆಗೆ ನನ್ನ ಸಹಮತವಿಲ್ಲ. ಈ ವಿಚಾರದಲ್ಲಿ ನಮ್ಮ ರಾಷ್ಟ್ರೀಯ ನಾಯಕರು ಏನು ಹೇಳುತ್ತಾರೊ ಅದಕ್ಕೆ ನಾವು ಬದ್ಧರಾಗಿದ್ದೇವೆ. ಬಿಜೆಪಿ ಸಂಸದ ಅನಂತ್‌ಕುಮಾರ್ ಹೆಗಡೆ ಸಂವಿಧಾನವನ್ನು ಬದಲಿಸುವ ಮಾತನಾಡಿದ್ದರು. ಶಾಸಕ ಬಸನಗೌಡ ಯತ್ನಾಳ್ ಪಕ್ಷದ ನಾಯಕರ ಮೇಲೆ 40 ಸಾವಿರ ಕೋಟಿ ರೂ. ಭ್ರಷ್ಟಾಚಾರ ಆರೋಪ ಮಾಡಿದ್ದರು. ಬಿಜೆಪಿ ಅವರಿಬ್ಬರನ್ನು ಪಕ್ಷದಿಂದ ಹೊರಕ್ಕೆ ಹಾಕಿಲ್ಲ ಏಕೆ? ಅವರಿಗೇನಾದರೂ ನೈತಿಕತೆ ಇದ್ದರೆ ಮೊದಲು ಪಕ್ಷದಿಂದ ಅವರಿಬ್ಬರನ್ನು ಉಚ್ಛಾಟಿಸಲಿ ಎಂದು ಸವಾಲು ಹಾಕಿದರು.
    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಾಯ್ತಿಪ್ಪಿ ನಿನ್ನೆ ರಾಜ್ಯಸಭೆಯಲ್ಲಿ ಬಿಜೆಪಿಗೆ 400 ಸ್ಥಾನ ಎಂದು ಹೇಳಿದ್ದಾರೆ. ಅದನ್ನು ದೊಡ್ಡದ್ದು ಮಾಡುವುದು ಬೇಡ. ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಸಿಕ್ಕಿರುವುದು ಸ್ವಾಗತಾರ್ಹ. ಅಯೋಧ್ಯೆ ರಾಮಮಂದಿರ ನಿರ್ಮಾಣದ ಹೋರಾಟ ಮಾಡಿದ್ದು ಅಡ್ವಾಣಿ. ಆದರೆ ಕಿರೀಟ ಪಡೆದಿದ್ದು ಬೇರೆಯವರು ಎಂದು ಪ್ರಧಾನಿ ನರೇಂದ್ರ ಮೋದಿ ಹೆಸರೇಳದೆ ಟಾಂಗ್ ನೀಡಿದರು.

    ಕೇಂದ್ರದ ವಿರುದ್ಧ ಪ್ರತಿಭಟನೆಗೆ ಜೈ
    ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುವುದರಲ್ಲಿ ತಾರತಮ್ಯ ಮಾಡುತ್ತಿರುವುದನ್ನು ಖಂಡಿಸುತ್ತೇನೆ. ಈ ಸಂಬಂಧ ಪಕ್ಷ ನಡೆಸುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿದರೆ ಅಭಿವೃದ್ಧಿ ಮಾಡುವುದು ಹೇಗೆ ಎಂದು ಬೇಳೂರು ಪ್ರಶ್ನಿಸಿದರು. ಕೇಂದ್ರ ಸರ್ಕಾರ ಅವರ ಕೈಯಿಂದ ಹಣ ಕೊಡುವುದು ಬೇಡ. ರಾಜ್ಯದ ಪಾಲನ್ನು ಕೊಡಲಿ. ಈ ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts