More

    ಭ್ರಷ್ಟಾಚಾರ ನಡೆದಿಲ್ಲವೆಂದು ಚಾಮುಂಡೇಶ್ವರಿ ಮೇಲೆ ಆಣೆ ಮಾಡಲಿ: ಕೆ.ಎಸ್.ಈಶ್ವರಪ್ಪ ಸವಾಲು

    ಶಿವಮೊಗ್ಗ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.
    ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅರ್ಕಾವತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಅವರ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲವೆಂದು ಆಣೆ ಮಾಡಿ ಹೇಳಿಲಿ. ಒಂದು ವೇಳೆ ಭ್ರಷ್ಟಾಚಾರವೇ ನಡೆದಿಲ್ಲ ಎಂದಾದರೆ ಅದು ಸಿದ್ದರಾಮೋತ್ಸವ ಅಲ್ಲ. ಭ್ರಷ್ಟಾಚಾರೋತ್ಸವ ಆಗುತ್ತದೆ ಎಂದರು.
    ಬಿಜೆಪಿ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯ ನೋಡಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಎಲ್ಲ ರೀತಿಯ ಆಟಗಳನ್ನು ಆಡುತ್ತಿದ್ದಾರೆ. ದೇಶದಲ್ಲಿಯೇ ಕಾಂಗ್ರೆಸ್ ನಿರ್ನಾಮವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಅನೇಕ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಉಳಿಸಿಕೊಳ್ಳಬೇಕೆಂಬ ಕಾರಣಕ್ಕೆ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
    ಕೋರ್ ಕಮಿಟಿಯಲ್ಲಿ ಕಾಂಗ್ರೆಸ್ ಅವಧಿಯಲ್ಲಿ ನಡೆದ ಭ್ರಷ್ಟಚಾರದ ಬಗ್ಗೆ ಜನರಿಗೆ ತಿಳಿಸಬೇಕು ಎಂದುಕೊಂಡಿದ್ದೇವೆ. ಅವರ ಅವಧಿಯ ಎಲ್ಲ ಭ್ರಷ್ಟಾಚಾರವನ್ನು ಹೊರಗೆ ತರುತ್ತೇವೆ. ಜತೆಗೆ ನಾವು ಏನ್ ಅಭಿವೃದ್ಧಿ ಮಾಡಿದ್ದೇವೆ ಎಂದು ತಿಳಿಸುತ್ತೇವೆ ಎಂದರು.
    ಕೆಂಪಣ್ಣ ದಾಖಲೆ ಇದ್ದರೆ ಬಿಡುಗಡೆ ಮಾಡಲಿ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಗೌರವವಿದೆ. ಆದರೆ ಅವರು ಕಾಂಗ್ರೆಸ್ ಕೈಗೊಂಬೆ ಆಗಿದ್ದಾರೆ. ಅವರ ಬಳಿ ನೂರಾರು ದಾಖಲೆ ಇದ್ದರೆ ಬಿಡುಗಡೆ ಮಾಡಬೇಕು. ಒಂದು ದಾಖಲೆ ಬಿಡುಗಡೆ ಮಾಡದೇ ಕಾಂಗ್ರೆಸ್ ಏಜೆಂಟ್ ರೀತಿ ಮಾತನಾಡಿದರೆ ಜನರು ಅವರನ್ನು ನಂಬುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರದರೆ ಸಾಲದು. ಅದಕ್ಕೆ ತಕ್ಕಂತೆ ದಾಖಲೆಗಳನ್ನೂ ನೀಡಬೇಕು ಎಂದು ಈಶ್ವರಪ್ಪ ಹೇಳಿದರು. ಕೆಂಪಣ್ಣನಂತಹ ಯಜಮಾನರನ್ನು ಬಿಟ್ಟು ಬಿಡಿ, ಅವರಿಗೆ ವಯಸ್ಸಾಗಿದೆ. ಅವರಿಗೆ ಕೆಟ್ಟ ಹೆಸರು ತರಬೇಡಿ ಎಂದು ಸಿದ್ದರಾಮಯ್ಯಗೆ ಸಲಹೆ ನೀಡಿದರು. ಕೆಂಪಣ್ಣ ಅವರನ್ನು ಮುಂದೆ ಬಿಟ್ಟು ಹಿಂದೆ ನೀವು ಮಾತನಾಡುತ್ತೀರಿ, ನಿಮ್ಮ ಮಾತನ್ನು ಯಾರು ನಂಬುತ್ತಾರೆ. ಒಂದು ದಾಖಲೆಯನ್ನು ಬಿಡುಗಡೆ ಮಾಡಲ್ಲ, ನಿಮ್ಮದು ಕೇವಲ ಪುಕ್ಸಟ್ಟೆ ಮಾತು ಎಂದರು.
    ಜನೋತ್ಸವದಲ್ಲಿ ಅಭಿವೃದ್ಧಿ ಮನವರಿಕೆ: ಜನೋತ್ಸವ ಕಾರ್ಯಕ್ರಮದಲ್ಲಿ ನಮ್ಮ ಅವಧಿಯಲ್ಲಿ ಆದ ಅಭಿವೃದ್ಧಿಯ ಬಗ್ಗೆ ಜನತೆಗೆ ತಿಳಿಸುತ್ತೇವೆ. ಕಾಂಗ್ರೆಸ್ ಮಾತನ್ನು ಯಾರು ನಂಬಲ್ಲ. ಆದರೂ ನೀವು ಭಂಡತನದಿಂದ ಆರೋಪ ಮಾಡುತ್ತಿದ್ದೀರಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಯಾರು ನಂಬುವುದಿಲ್ಲ. ಶಿವಕುಮಾರ್ ಇದು ಶೇ.40 ಸರ್ಕಾರ ಅಂತಾರೆ. ಹಾಗಿದ್ದರೆ ನೀವು ಯಾಕೆ ತಿಹಾರ್ ಜೈಲಿಗೆ ಹೋಗಿದ್ದಿರಿ ?, ನಿಮ್ಮನ್ನು ಪುಕ್ಸಟ್ಟೆ ತಿಹಾರ್ ಜೈಲಿಗೆ ಕಳುಹಿಸಿದ್ದರಾ?, ಈಗ ನೀವು ಸತ್ಯಹರಿಶ್ಚಂದ್ರನಂತೆ ಮಾತನಾಡುತ್ತಿದ್ದೀರಿ ಎಂದು ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts