More

    36 ಕಡೆ ಕ್ಯಾಮರಾ ಕಣ್ಣು, 50 ವಾಚ್ ಟವರ್, ಶಿವಮೊಗ್ಗದಲ್ಲಿ ಕಟ್ಟೆಚ್ಚರ

    ಶಿವಮೊಗ್ಗ: ಎರಡು ವರ್ಷಗಳ ಬಳಿಕ ಶಿವಮೊಗ್ಗದಲ್ಲಿ ಅದ್ದೂರಿಯಿಂದ ಗಣೇಶೋತ್ಸವ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಸ್ವಾತಂತ್ರೃ ಅಮೃತ ಮಹೋತ್ಸವದ ಅಂಗವಾಗಿ ಉಂಟಾದ ವೀರ ಸಾವರ್ಕರ್ ಫ್ಲೆಕ್ಸ್ ತೆರವು ಮತ್ತು ಯುವಕನಿಗೆ ಚಾಕು ಇರಿತ ಪ್ರಕರಣದಿಂದ ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶ ಹೊರತುಪಡಿಸಿ ತುಂಗಾ ನದಿ, ಚಾನಲ್‌ಗಳ ಬಳಿಯೂ ಕಟ್ಟೆಚ್ಚರ ವಹಿಸಲಾಗುತ್ತಿದೆ.
    ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲೂ ಈ ಬಾರಿ ಸಂಭ್ರಮದ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಪೆಂಡಾಲ್ ನಿರ್ಮಾಣ, ಗಣಪತಿ ಮೂರ್ತಿಗಳ ಬುಕ್ಕಿಂಗ್ ಸೇರಿದಂತೆ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಅಹಿತಕರ ಘಟನೆಗಳು ಸಂಭವಿಸುವ ಸ್ಥಳಗಳನ್ನು ಪತ್ತೆ ಮಾಡಿರುವ ಮಹಾನಗರ ಪಾಲಿಕೆ 36 ಕಡೆಗಳಲ್ಲಿ ತಾತ್ಕಾಲಿಕವಾಗಿ ಸಿಸಿ ಕ್ಯಾಮರಾ ಅಳವಡಿಸುತ್ತಿದೆ. ಪೊಲೀಸ್ ಇಲಾಖೆ ಅಳವಡಿಸಿರುವ ಕ್ಯಾಮರಾಗಳು ಒಳಗೊಂಡಂತೆ ನೂರಾರು ಕ್ಯಾಮರಾಗಳು ನಿಗಾ ಇರಿಸಲಿವೆ.
    ಸೆಪ್ಟೆಂಬರ್ 9ರಂದು ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಬಳಿಕ ಹಿಂದು ಮಹಾಸಭಾ ಗಣಪತಿ ಮೆರವಣಿಗೆ ಹೊರಡಲಿದೆ. ನಗರದಲ್ಲಿ 350ಕ್ಕೂ ಅಧಿಕ ಸಾರ್ವಜನಿಕ ಗಣಪತಿಗಳ ಪ್ರತಿಷ್ಠಾಪನೆಗೊಂಡರೂ ಹಿಂದು ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ವಿಶೇಷ ಮಹತ್ವವಿದೆ. ಹಾಗಾಗಿ ಮೆರವಣಿಗೆ ಸಾಗುವ 50 ಕಡೆ ವಾಚ್ ಟವರ್ ಪಾಲಿಕೆಯಿಂದ ನಿರ್ಮಾಣಗೊಳ್ಳಲಿವೆ. ಪೊಲೀಸರು ವಾಚ್ ಟವರ್‌ಗಳ ಮೂಲಕ ಮೆರವಣಿಗೆಯ ಪೂರ್ಣ ಚಿತ್ರೀಕರಣ ಮಾಡಲಿದ್ದಾರೆ. ಕಿಡಿಗೇಡಿಗಳು ಬಾಲ ಬಿಚ್ಚಿದರೆ ಕಾನೂನು ಕ್ರಮಕ್ಕೆ ಸಜ್ಜಾಗಿದ್ದಾರೆ.
    ಅವಕಾಶ್ಯಕತೆ ಬಿದ್ದರೆ ಮತ್ತಷ್ಟು ಸೌಲಭ್ಯ: ಈಗಾಗಲೇ ಅಮೀರ್ ಅಹಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಗೋಪಿ ವೃತ್ತ, ರಾಮಣ್ಣ ಶ್ರೇಷ್ಠಿ ಪಾರ್ಕ್ ಸೇರಿದಂತೆ ಪ್ರಮುಖ ವೃತ್ತ, ಬೀದಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಚಿಸಿದಂತೆ ಈಗಾಗಲೇ ಪಾಲಿಕೆಯಿಂದ ಕ್ಯಾಮರಾ ಮತ್ತು ವಾಚ್ ಟವರ್ ನಿರ್ಮಾಣ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆಗೆ ಅವಶ್ಯಕತೆಗಳಿದ್ದರೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
    ರಾರಾಜಿಸಲಿವೆ ಭಾವಚಿತ್ರ, ಭಗವಾಧ್ವಜ: ನಗರದ ಪ್ರತಿ ಪೆಂಡಾಲ್‌ನಲ್ಲೂ ಈ ಬಾರಿ ಸ್ವಾತಂತ್ರೃ ಹೋರಾಟಗಾರರಾದ ಬಾಲಗಂಗಾಧರ್ ತಿಲಕ್ ಮತ್ತು ವೀರ ಸಾವರ್ಕರ್ ಭಾವಚಿತ್ರಗಳು ಮತ್ತು ತಲಾ ಎರಡೆರಡು ಭಗವಾಧ್ವಜಗಳು ರಾರಾಜಿಸಲಿವೆ. ಈಗಾಗಲೇ ನಗರದ ಎಲ್ಲ ಗಣಪತಿ ಪೆಂಡಾಲ್ಗಳಿಗೆ ಭಗವಾಧ್ವಜ, ವೀರ ಸಾವರ್ಕರ್ ಮತ್ತು ಗಂಗಾಧರ ತಿಲಕ್ ಭಾವಚಿತ್ರಗಳನ್ನು ವಿತರಿಸಲಾಗಿದೆ. ಹಾಗಾಗಿ ಶಿವಮೊಗ್ಗದಲ್ಲಿ ಈ ಬಾರಿ ಗಣೇಶೋತ್ಸವದಲ್ಲಿ ವೀರ ಸಾವರ್ಕರ್ ಭಾವಚಿತ್ರದ ಹವಾ ರಂಗೇರಿಸಲಿದೆ.
    ಸೈನ್ಸ್ ಮೈದಾನಕ್ಕೆ ಮೂರ್ತಿಗಳ ಲಗ್ಗೆ: ಗಣಪತಿ ಹಬ್ಬಕ್ಕೆ ಮೂರ್ನಾಲ್ಕು ದಿನ ಬಾಕಿ ಇರುವಂತೆಯೇ ವಿವಿಧೆಡೆಯಿಂದ ಗಣೇಶನ ಮೂರ್ತಿಗಳನ್ನು ಬಿ.ಎಚ್.ರಸ್ತೆಯ ಸೈನ್ಸ್ ಮೈದಾನದಲ್ಲಿ ಇರಿಸಲಾಗಿದೆ. ಏಳೆಂಟು ಇಂಚಿನಿಂದ ನಾಲ್ಕೂವರೆ ಅಡಿವರೆಗಿನ ಮೂರ್ತಿಗಳು ಗಮನ ಸೆಳೆದವು. ಶಿವಮೊಗ್ಗ ನಗರ ಮಾತ್ರವಲ್ಲದೆ ಗ್ರಾಮೀಣ ಭಾಗದಿಂದಲೂ ಬಂದ್ ಗಣಪತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts