More

    ವಲಸೆ ಕಾರ್ಮಿಕರಿಗೆ ವಸತಿ

    ಹರೀಶ್ ಮೋಟುಕಾನ ಮಂಗಳೂರು
    ಕೈಗಾರಿಕೆ, ಕಟ್ಟಡ ನಿರ್ಮಾಣ ಮೊದಲಾದ ಉದ್ಯೋಗ ಅರಸಿ ಹೊರರಾಜ್ಯ ಹಾಗೂ ಜಿಲ್ಲೆಗಳಿಂದ ಮಂಗಳೂರಿಗೆ ಬರುವ ಕಾರ್ಮಿಕರಿಗೆ ಸೂಕ್ತ ವಸತಿ ವ್ಯವಸ್ಥೆ ಸರ್ಕಾರದ ವತಿಯಿಂದ ಮಾಡಿಕೊಡಲು ನಿರ್ಧರಿಸಲಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

    ನಗರದ ಜಪ್ಪಿನಮೊಗರು ಬಳಿ ಇರುವ ಎರಡು ಎಕರೆ ನಿವೇಶನದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದ್ದು, ಇದು ಕೇಂದ್ರ ಸರ್ಕಾರದ ಯೋಜನೆ ಮೂಲಕ ಸಾಕಾರಗೊಳ್ಳಲಿದೆ. ರಾಜ್ಯದಲ್ಲೇ ಮೊದಲ ಬಾರಿ ಮಂಗಳೂರಿನಲ್ಲಿ ವಲಸೆ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಯೋಜನೆ ಇದಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಪ್ರಸ್ತುತ ವಲಸೆ ಕಾರ್ಮಿಕರು ನಗರದ ವಿವಿಧ ಕಡೆ ಬಾಡಿಗೆ ಮನೆಗಳಲ್ಲಿ ವಾಸವಿದ್ದಾರೆ. ಕೆಲವರು ಬೀದಿ ಬದಿ ಟೆಂಟ್ ಹಾಕಿ ವಾಸ ಮಾಡುತ್ತಿದ್ದಾರೆ. ಇನ್ನು ಕೆಲವರು ಬಸ್, ರೈಲ್ವೆ ನಿಲ್ದಾಣಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇಂಥವರಿಗೆ ಸೂಕ್ತ ವಸತಿ ವ್ಯವಸ್ಥೆ ನೀಡುವುದು ಸರ್ಕಾರದ ಉದ್ದೇಶ.

    ಲಾಕ್‌ಡೌನ್‌ನಲ್ಲಿ ಪರದಾಟ: ಕಳೆದ ಲಾಕ್‌ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲೆಯಲ್ಲಿ ಎಷ್ಟು ವಲಸೆ ಕಾರ್ಮಿಕರು ಇದ್ದಾರೆ ಎಂಬ ಮಾಹಿತಿ ಜಿಲ್ಲಾಡಳಿತದಲ್ಲಿ ಇರಲಿಲ್ಲ. ಆ ಸಂದರ್ಭ ಅವರಿಗೆ ಊಟ, ವಸತಿ, ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಸವಾಲಾಗಿತ್ತು. ವಸತಿ ವ್ಯವಸ್ಥೆ ಕಲ್ಪಿಸಿದಾಗ ಅವರ ಬಗ್ಗೆ ನಿಖರ ಮಾಹಿತಿಯೂ ಲಭ್ಯವಾಗಲಿದೆ.

    ನೂತನ ವಸತಿ ಯೋಜನೆ ವ್ಯವಸ್ಥೆಯಲ್ಲಿ ಯಾವ ವಲಸೆ ಕಾರ್ಮಿಕರು ಇರಬೇಕು ಎಂಬುದನ್ನು ಜಿಲ್ಲಾಡಳಿತವೇ ಅಂತಿಮಗೊಳಿಸಲಿದೆ. ಕಾರ್ಮಿಕರ ಆಯ್ಕೆ ಜಿಲ್ಲಾಡಳಿತದ ಹೊಣೆ. ಕಟ್ಟಡವನ್ನು ಸರ್ಕಾರವೇ ನಿರ್ಮಿಸಿಕೊಡಲಿದೆ. ತಾತ್ಕಾಲಿಕ ನೆಲೆಯಲ್ಲಿ ಕಾರ್ಮಿಕರು ಇದನ್ನು ಬಳಕೆ ಮಾಡಲಿದ್ದಾರೆ. ಅವರಿಂದ ಕನಿಷ್ಠ ನಿರ್ವಹಣಾ ಮೊತ್ತ ಪಡೆಯುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಈ ಬಗ್ಗೆ ಅಂತಿಮ ತೀರ್ಮಾನ ಇನ್ನಷ್ಟೇ ಆಗಬೇಕು. ಈ ವ್ಯವಸ್ಥೆಯಲ್ಲಿ ಹೊರರಾಜ್ಯದ ಕಾರ್ಮಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ.

    50 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರು: ಕರೊನಾ ಲಾಕ್‌ಡೌನ್ ಸಮಯದಲ್ಲಿ ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ನೀಡಿದ ವಲಸೆ ಕಾರ್ಮಿಕರ ವರದಿಯ ಪ್ರಕಾರ ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಜಾರ್ಖಂಡ್, ಪಶ್ಚಿಮ ಬಂಗಾಲ, ತಮಿಳುನಾಡು ಮೊದಲಾದ ರಾಜ್ಯಗಳ 50 ಸಾವಿರಕ್ಕೂ ಅಧಿಕ ಕಾರ್ಮಿಕರು ಮಂಗಳೂರು ಸಹಿತ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೆಲಸ ಮಾಡುತ್ತಿದ್ದರು. ಬಾಗಲಕೋಟೆ, ಗದಗ, ವಿಜಯಪುರ ಸಹಿತ ರಾಜ್ಯದ 25 ಜಿಲ್ಲೆಗಳ 20 ಸಾವಿರಕ್ಕೂ ಅಧಿಕ ಮಂದಿ ಜಿಲ್ಲೆಯಲ್ಲಿ ಕಾರ್ಮಿಕರಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದರು. ಈ ಪೈಕಿ ಬಹುತೇಕ ಮಂದಿ ಈಗಾಗಲೇ ತಮ್ಮ ರಾಜ್ಯ ಹಾಗೂ ಜಿಲ್ಲೆಗಳಿಗೆ ಹೋದವರು ಹಿಂತಿರುಗಿ ಬಂದಿದ್ದರೆ, ಇನ್ನು ಕೆಲವರು ಅವರವರ ಊರುಗಳಲ್ಲೇ ನೆಲೆಸಿದ್ದಾರೆ.

    ಕೇಂದ್ರ ಹಾಗೂ ರಾಜ್ಯ ಸರ್ಕಾರ ವಲಸೆ ಕಾರ್ಮಿಕರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಿ ಕೊಡಲು ಯೋಜನೆ ಹಮ್ಮಿಕೊಂಡಿದೆ. ಮಂಗಳೂರು ಭಾಗದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಅಧಿಕವಿರುವ ಕಾರಣದಿಂದ ಜಪ್ಪಿನಮೊಗರು ಬಳಿ ವಸತಿ ಕಟ್ಟಡ ನಿರ್ಮಾಣ ಮಾಡುವ ಚಿಂತನೆ ಇದೆ. ಮುಖ್ಯಮಂತ್ರಿ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ನವದೆಹಲಿಗೆ ತೆರಳಿ ಕೆಲವು ದಿನ ಅಲ್ಲೇ ಇದ್ದು ಅದರ ಫಾಲೋಅಪ್ ಮಾಡಲಾಗುವುದು.
    ವೇದವ್ಯಾಸ ಕಾಮತ್ ಶಾಸಕರು, ಮಂಗಳೂರು ದಕ್ಷಿಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts