More

    ಶಾಂತಿ ಕದಡಿದರೆ ಸುಮ್ಮನಿರಲ್ಲ: ಆರ್‌ಎಸ್‌ಎಸ್‌ಗೆ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ

    ಚನ್ನಪಟ್ಟಣ: ರಾಮನಗರ ಜಿಲ್ಲೆ ಸರ್ವ ಜನರೂ ಶಾಂತಿಯಿಂದ ಬದುಕುತ್ತಿರುವ ಪುಣ್ಯಭೂಮಿ ಈ ನೆಲದಲ್ಲಿ ಕರಾವಳಿ ಭಾಗದಲ್ಲಿ ಧರ್ಮ ಧರ್ಮಗಳ ನಡುವೆ ಬೆಂಕಿಹಚ್ಚಿ ಜೀವನ ನಡೆಸುತ್ತಿರುವ ಕಲ್ಲಡ್ಕ ಪ್ರಭಾಕರ ಭಟ್‌ರಂಥ ದೇಶದ್ರೋಹಿ ಬಂದು ಶಾಂತಿ ಕದಡಿದರೆ ಸುಮ್ಮನಿರಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅಬ್ಬರಿಸಿದರು.

    ನಗರದ ಪೆಟ್ಟಾ ಶಾಲಾ ಆವರಣದಲ್ಲಿ ಪೌರತ್ವ ಮಸೂದೆ ಕಾಯ್ದೆ ವಿರೋಧಿಸಿ ನಾಗರಿಕ ವೇದಿಕೆ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಕಲ್ಲಡ್ಕ ಪ್ರಭಾಕರ್ ವಿರುದ್ಧ ಭಾಷಣದುದ್ದಕ್ಕೂ ಆಕ್ರೋಶ ವ್ಯಕ್ತಪಡಿಸಿದ ಅವರು, ಈ ವ್ಯಕ್ತಿ ಇಲ್ಲದಿದ್ದರೆ ಕರಾವಳಿ ಭಾಗ ಪ್ರಮುಖ ವಾಣಿಜ್ಯ ನಗರಿಯಾಗಿ ಅಭಿವೃದ್ಧಿ ಹೊಂದುತಿತ್ತು. ಕೋಮುವಾದಿ ಚಟುವಟಿಕೆಯಿಂದ ಆ ಭಾಗದ ಅಭಿವೃದ್ಧಿಗೆ ಕಲ್ಲುಹಾಕಿದ ವ್ಯಕ್ತಿ ಇಂದು ಸರ್ವಜನಾಂಗದ ಶಾಂತಿಯ ತೋಟವಾಗಿರುವ ನಮ್ಮ ಜಿಲ್ಲೆಗೆ ಬೆಂಕಿ ಹಚ್ಚಲು ಬರುತ್ತಿದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

    ಈತನ ಜೊತೆಗೆ ಮೆಗಾಸಿಟಿ ಮೂಲಕ ಸಾವಿರಾರು ಜನತೆಗೆ ವಂಚನೆ ಮಾಡಿದ ಲೂಟಿಕೋರ ಕೂಡ ಪಥಸಂಚಲನ ಹೆಸರಿನ ಮೂಲಕ ಚಡ್ಡಿ ಹಾಕಿದ್ದಾನೆ. ಈ ಇಬ್ಬರ ಆಟ ಈ ನೆಲದಲ್ಲಿ ನಡೆಯಲು ಬಿಡುವುದಾದರೆ ಇಲ್ಲಿ ನಾವುಗಳು ಏಕೆ ಇರಬೇಕು ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೆಸರು ಹೇಳದೆ ಟಾಂಗ್ ನೀಡಿದರು.

    ರಾಮನಗರದ ಆರ್‌ಎಸ್‌ಎಸ್ ಪಥ ಸಂಚಲನ ಹಾಗೂ ಕನಕಪುರ ಯೇಸು ಪ್ರತಿಮೆ ವಿಚಾರವಾಗಿ ನಡೆದ ಹೋರಾಟದಲ್ಲಿ ನಮ್ಮ ಜಿಲ್ಲೆಯ ಸ್ಥಳೀಯರು ಭಾಗವಹಿಸಿರಲಿಲ್ಲ. ರಾಜ್ಯದ ಹಲವು ಕಡೆಗಳಿಂದ ಬಂದಿದ್ದ ಆರ್‌ಎಸ್‌ಎಸ್ ಬಾಡಿಗೆ ಬಂಟರು ಭಾಗವಹಿಸಿದ್ದರು. ನಮ್ಮ ಜಿಲ್ಲೆಯೊಳಕ್ಕೆ ಆರ್‌ಎಸ್‌ಎಸ್ ಚಡ್ಡಿಗಳನ್ನು ಬಿಟ್ಟುಕೊಳ್ಳುವುದಿಲ್ಲ ಎಂದು ಗುಡುಗಿದರು. ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮತ್ತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಲಿಂಗೇಶ್ ಕುಮಾರ್, ಜೆಡಿಎಸ್ ನಗರ ಅಧ್ಯಕ್ಷ ರಾಂಪುರ ರಾಜಣ್ಣ ಉಪಸ್ಥಿತರಿದ್ದರು.

    ದೇಶಭಕ್ತರು ಯಾರೆಂದು ಅರ್ಥ ಮಾಡಿಕೊಳ್ಳಿ: ಈ ದೇಶ ಆರ್‌ಎಸ್‌ಎಸ್, ವಿಎಚ್‌ಪಿ ಸ್ವತ್ತಲ್ಲ, ಬಿಜೆಪಿಯವರು ಕೇಸರಿ ಧ್ವಜ ಹಿಡಿದು ಓಡಾಡುತ್ತಾರೆ, ಆದರೆ ಈ ದೇಶದ ಮುಸ್ಲಿಮರು ತ್ರಿವರ್ಣ ಧ್ವಜ ಹಿಡಿದು ಹೋರಾಡುತ್ತಾರೆ, ನಿಜವಾದ ದೇಶಭಕ್ತರು ಯಾರು ಎಂದು ಜನತೆ ಅರ್ಥಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

    ನಗರದ ಡ್ಯೂಂಲೈಟ್ ಬಳಿಯ ಪೆಟ್ಟಾ ಶಾಲಾ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಪೌರತ್ವ ಮಸೂದೆ ಸೇರಿ ಜಾರಿ ಮಾಡಿರುವ ಕೆಲ ಕಾನೂನುಗಳು ಮುಸ್ಲಿಮರಿಗೆ ಮಾತ್ರ ತೊಂದರೆಯಾಗುತ್ತದೆ ಎಂಬ ಭಾವನೆ ಇದೆ. ಆದರೆ ಆ ಭಾವನೆಯನ್ನು ಮೊದಲು ತೊಡೆದು ಹಾಕಬೇಕು. ಎಲ್ಲಾ ಧರ್ಮದವರು ಸಾಮರಸ್ಯದಿಂದ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಕೇಂದ್ರಸರ್ಕಾರ ಜನತೆಯ ನೆಮ್ಮದಿ ಹಾಳು ಮಾಡುವ ಹಾಗೂ ಜನತೆ ಸಾಗರದಂತೆ ಬೀದಿಗೆ ಬಂದು ಹೋರಾಡುವ ಕಾನೂನುಗಳನ್ನು ಹೇರಲು ಮುಂದಾಗುತ್ತಿದೆ ಎಂದು ಆರೋಪಿಸಿದರು.

    ನೆಹರು ಕಾಲದಲ್ಲಿ ಅಮಿತ್ ಷಾ ಹುಟ್ಟೇ ಇರಲಿಲ್ಲ, ಆದರೆ, ಆತ ನೆಹರು ಬಗ್ಗೆ ಮಾತನಾಡುತ್ತಾರೆ. ದೇಶಕ್ಕೆ ಮುಸ್ಲಿಂ ಸಮುದಾಯ ನೀಡಿರುವ ಕೊಡುಗೆಗಳನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು. ಅನಂತಕುಮಾರ್ ಹೆಗಡೆ ಸೇರಿ ಬಿಜೆಪಿಯ ಕೆಲ ಸಮಾಜಘಾತುಕ ನಾಯಕರು ಈ ದೇಶದ ಸಂವಿಧಾನ ಹಾಗೂ ಈ ದೇಶದ ಶಕ್ತಿಯಾದ ಮಹಾತ್ಮಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಈ ದೇಶದ ಸಂವಿಧಾನವನ್ನು ಹುಡುಗಾಟಿಕೆಗಾಗಿ ಬರೆದಿಲ್ಲ, ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ದೇವೇಗೌಡರು ಸೇರಿ ಹಲವರು ಪ್ರಧಾನಿಯಾಗಿದ್ದ ವೇಳೆ ಒಂದು ಭಯೋತ್ಪಾದಕ ಸನ್ನಿವೇಶಗಳಿರಲಿಲ್ಲ. ಇವತ್ತು ಏಕೆ ಇಂತಹ ಸನ್ನಿವೇಶ ಎದುರಾಗಿದೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಸರ್ಕಾರಿ ಒಡೆತನದ ಕಂಪನಿಗಳನ್ನು ಕೇಂದ್ರ ಸರ್ಕಾರ ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ದೇಶವನ್ನು ದಿವಾಳಿ ಮಾಡಲು ಹೊರಟಿರುವ ಈ ಸರ್ಕಾರದ ವಿರುದ್ಧ ಎರಡನೇ ಸ್ವಾತಂತ್ರ್ಯ ಸಂಗ್ರಾಮದಂತೆ ಜನತೆ ಹೋರಾಟಕ್ಕೆ ಸಿದ್ಧವಾಗಬೇಕು. ಕೇವಲ ಮುಸ್ಲಿಮರಷ್ಟೇ ಅಲ್ಲ, ದೇಶದ ಪ್ರತಿಯೊಬ್ಬರೂ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆನೀಡಿದರು.

    ಪ್ರತಿಭಟನಾ ಸಮಾವೇಶದಲ್ಲಿ ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ, ಜಿಪಂ ಸದಸ್ಯರಾದ ವೀಣಾಚಂದ್ರು, ಗಂಗಾಧರ್, ಹೋರಾಟಗಾರ್ತಿ ಅಮೂಲ್ಯ, ಮಹಿಳಾ ಮುಖಂಡರಾದ ಕಾವೇರಮ್ಮ, ಪಾರ್ವತಮ್ಮ, ಕೆ,ಟಿ.ಲಕ್ಷ್ಮಮ್ಮ, ಕೋಕಿಲಾರಾಣಿ, ಕಾಂಗ್ರೆಸ್ ಮುಖಂಡರಾದ ಶರತ್ ಚಂದ್ರು, ಮುಖಂಡರಾದ ವಾಸಿಲ್ ಆಲಿಖಾನ್ ವಕೀಲರ ಸಂಘದ ಅಧ್ಯಕ್ಷ ಗಿರೀಶ್, ಜೆಡಿಎಸ್ ಅಧ್ಯಕ್ಷ ಎಚ್,ಸಿ.ಜಯಮತ್ತು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts