More

    ದೇವ ಮಂದಿರವಾಯ್ತು ಶಂಕರನಾರಾಯಣ ಠಾಣೆ

    ಶಂಕರನಾರಾಯಣ: ಪೊಲೀಸ್ ಠಾಣೆಗಳೆಂದರೆ ಸದಾ ಕೇಸು, ಗಲಾಟೆ ಮತ್ತಿತರ ರಗಳೆಗಳೇ ಹೆಚ್ಚು. ಆದರೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಸೋಮವಾರ ವಿಶೇಷ ಸಂಭ್ರಮವಿತ್ತು. ಠಾಣೆ ಆವರಣದಲ್ಲಿ ಗಣಪತಿ ಪೂಜೆ, ಯಕ್ಷಗಾನ ಬಯಲಾಟ, ಅನ್ನಸಂತರ್ಪಣೆ ನಡೆದು ಕಾನೂನು ಪಾಲನಾ ಕೇಂದ್ರ ದೇವ ಮಂದಿರದ ಸ್ವರೂಪ ಪಡೆದಿತ್ತು.
    ಶಂಕರನಾರಾಯಣ ಕ್ರೋಡ ಶ್ರಿ ಶಂಕರನಾರಾಯಣ ದೇವಸ್ಥಾನದ ಮನ್ಮಾಹಾರಥೋತ್ಸವ ಪ್ರಯುಕ್ತ ಠಾಣೆಯಲ್ಲಿ ಹಿಂದಿನಿಂದಲೂ ಕಟ್ಟೆ ಪೂಜೆ ಸಹಿತ ಪೂಜಾ ವಿಧಿಗಳು ನಡೆಯುತ್ತಿವೆ. ಇತ್ತೀಚಿನ ಕೆಲವು ವರ್ಷಗಳಿಂದ ಗಣಪತಿ ಪೂಜೆ, ಯಕ್ಷಗಾನ ಬಯಲಾಟ, ಅನ್ನಸಂತರ್ಪಣೆ ನಡೆಸಲಾಗುತ್ತಿದ್ದು, ಪೊಲೀಸರೊಂದಿಗೆ ಸಾರ್ವಜನಿಕರೂ ಪಾಲ್ಗೊಳ್ಳುತ್ತಿದ್ದಾರೆ.

    ದೇವಳದಲ್ಲಿ ಪ್ರತಿವರ್ಷ ಜ.16ರಂದು ಮನ್ಮಹಾರಥೋತ್ಸವ ನಡೆಯುತ್ತಿದ್ದು, ಈ ವರ್ಷ ಜ.17ರಂದು ನಡೆಯುತ್ತದೆ. ಆ ಪ್ರಯುಕ್ತ ಕೆಲವು ದಿನಗಳ ತನಕ ಹಗಲು, ರಾತ್ರಿ ಉತ್ಸವಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಶಂಕರನಾರಾಯಣ ಠಾಣೆ ಮುಂದಿರುವ ಕಟ್ಟೆಯಲ್ಲಿ ದೇವರ ಮೂರ್ತಿ ಇರಿಸಿ ಪೂಜೆಯಾಗುತ್ತದೆ. 4 ವರ್ಷಗಳಿಂದ ಕಟ್ಟೆಪೂಜೆ ದಿನ ಠಾಣೆ ಎದುರು ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಿಂದ ಯಕ್ಷಗಾನ ಸೇವೆಯೂ ನಡೆಯುತ್ತದೆ.

    ಬೆಳಗ್ಗೆ ಗಣಪತಿ ಪೂಜೆ, ಗಣಹೋಮ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಉತ್ಸವದಲ್ಲಿ ಆಗಮಿಸುವ ದೇವರಿಗೆ ಠಾಣೆ ಎದುರು ಕಟ್ಟೆಪೂಜೆ, ಕಾಲಮಿತಿ ಯಕ್ಷಗಾನ ಬಯಲಾಟ ನಡೆಯುತ್ತಿದೆ. ಶಂಕರನಾರಾಯಣ ಠಾಣೆ ಉಪನಿರೀಕ್ಷಕ ಶ್ರೀಧರ ನಾಯ್ಕ, ಸಿಬ್ಬಂದಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

    ಜನಮೆಚ್ಚುಗೆ: ಸೋಮವಾರ ಸುಮಾರು 300 ಮಂದಿಗೆ ಅನ್ನಸಂತರ್ಪಣೆ ನಡೆಯಿತು. ಪೊಲೀಸರು ಎಲ್ಲರನ್ನೂ ಆತ್ಮೀಯತೆಯಿಂದ ಉಪಚರಿಸಿ, ಪ್ರಸಾದ ನೀಡಿ, ಅನ್ನಪ್ರಸಾದ ಪಡೆಯುವಂತೆ ವಿನಂತಿಸುತ್ತಿದ್ದರು. ಕಾರ್ಯಕ್ರಮಕ್ಕೆ ಸುಮಾರು 80 ಸಾವಿರ ರೂ. ಖರ್ಚಾಗುತ್ತಿದ್ದು, ಸಾರ್ವಜನಿಕರಿಂದ ದೇಣಿಗೆ ಸ್ವೀಕರಿಸದೆ ಪೊಲೀಸರೇ ಭರಿಸಿದ್ದಾರೆ. ಇಂತಹ ಕಾರ್ಯಕ್ರಮಗಳ ಮೂಲಕ ಠಾಣೆ ಸಿಬ್ಬಂದಿ ಜನಸಾಮಾನ್ಯರ ಜತೆ ಬೆರೆಯಲು ಅವಕಾಶ ಒದಗಿಸಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು. ಜನಸ್ನೇಹಿ ಪೊಲೀಸ್ ಪರಿಕಲ್ಪನೆಗೆ ಪೂರಕ ಕಾರ್ಯಕ್ರಮ ಇದಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts