More

    ಕೊನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಶಾರುಖ್, ಕರ್ನಾಟಕಕ್ಕೆ ತಪ್ಪಿದ ದೇಶೀಯ ಟಿ20 ಕಿರೀಟ

    ನವದೆಹಲಿ: ಸ್ಫೋಟಕ ಬ್ಯಾಟ್ಸ್‌ಮನ್ ಶಾರುಖ್ ಖಾನ್ (33*ರನ್, 15 ಎಸೆತ, 1 ಬೌಂಡರಿ, 3 ಸಿಕ್ಸರ್) ಕೊನೇ ಎಸೆತದಲ್ಲಿ ಬಾರಿಸಿದ ಸಿಕ್ಸರ್‌ನಿಂದಾಗಿ ಕರ್ನಾಟಕ ತಂಡ ದೇಶೀಯ ಟಿ20 ಚಾಂಪಿಯನ್ ಪಟ್ಟವೇರುವ ಅವಕಾಶ ಕೈಚೆಲ್ಲಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಫೈನಲ್‌ನಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 4 ವಿಕೆಟ್‌ಗಳಿಂದ ಸೋಲು ಅನುಭವಿಸಿ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. ವಿಜಯ್ ಶಂಕರ್ ಸಾರಥ್ಯದ ತಮಿಳುನಾಡು ತಂಡ ಸತತ 2ನೇ ಹಾಗೂ ಒಟ್ಟಾರೆ 3ನೇ ಬಾರಿಗೆ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿತು. ಹಲವು ಪ್ರಮುಖ ಆಟಗಾರರ ಗೈರಿನ ನಡುವೆಯೂ ಮನೀಷ್ ಪಾಂಡೆ ಬಳಗ ಪ್ರಶಸ್ತಿ ಸನಿಹ ತಲುಪಿದ್ದು ಗಮನಾರ್ಹ ನಿರ್ವಹಣೆ ಎನಿಸಿತು.

    ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪ್ರಶಸ್ತಿ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಆರಂಭಿಕ ಆಘಾತದ ನಡುವೆಯೂ 7 ವಿಕೆಟ್‌ಗೆ 151 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. ಇದಕ್ಕೆ ಪ್ರತಿಯಾಗಿ ತಮಿಳುನಾಡು ತಂಡಕ್ಕೆ ಸ್ಪಿನ್ನರ್ ಕೆಸಿ ಕಾರ್ಯಪ್ಪ (23ಕ್ಕೆ 2) ಕಡಿವಾಣ ಹಾಕಿದ್ದರು. ಆದರೆ ಸ್ಲಾಗ್ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದ ಶಾರುಖ್ ಖಾನ್ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. 6 ವಿಕೆಟ್‌ಗೆ 153 ರನ್ ಪೇರಿಸುವ ಮೂಲಕ ತಮಿಳುನಾಡು ತಂಡ ಚಾಂಪಿಯನ್ ಪಟ್ಟವೇರಿತು. ಈ ಮೂಲಕ 2019-20ರ ಸಾಲಿನ ಫೈನಲ್‌ನಲ್ಲಿ ಕರ್ನಾಟಕ ವಿರುದ್ಧ ಕೇವಲ 1 ರನ್‌ನಿಂದ ಸೋಲು ಕಂಡಿದ್ದಕ್ಕೂ ಸೇಡು ತೀರಿಸಿಕೊಂಡಿತು.

    ಆರಂಭಿಕ ಹರಿ ನಿಶಾಂತ್ (23) ತಮಿಳುನಾಡಿಗೆ ಬಿರುಸಿನ ಆರಂಭ ಒದಗಿಸಿದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ನಂತರ ತಮಿಳುನಾಡು ತಂಡ ರನ್‌ಗಾಗಿ ಪರದಾಡುವಂತೆ ಮಾಡಿದ ಕರ್ನಾಟಕದ ಬೌಲರ್‌ಗಳು, ನಿರಂತರ ವಿಕೆಟ್ ಕೂಡ ಕಬಳಿಸಿದ್ದರು. ಇದರಿಂದ ತಮಿಳುನಾಡಿಗೆ ಕೊನೇ 4 ಓವರ್‌ಗಳಲ್ಲಿ 55 ರನ್ ಗಳಿಸುವ ಸವಾಲು ಎದುರಾಗಿತ್ತು. ಎಂಬಿ ದರ್ಶನ್ ಎಸೆದ ಇನಿಂಗ್ಸ್‌ನ 17ನೇ ಓವರ್‌ನಲ್ಲಿ 1 ಸಿಕ್ಸರ್ ಸಹಿತ 19 ರನ್ ಕಸಿದ ಶಾರುಖ್ ತಮಿಳುನಾಡಿಗೆ ಗೆಲುವಿನ ಆಸೆ ಚಿಗುರಿಸಿದರು.

    ಕರ್ನಾಟಕಕ್ಕೆ ಕಿಶೋರ್ ಕಡಿವಾಣ
    ಕರ್ನಾಟಕ ತಂಡ ಪವರ್‌ಪ್ಲೇನಲ್ಲೇ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತ್ತು. ಅನುಭವಿ ಬ್ಯಾಟರ್‌ಗಳಾದ ಮನೀಷ್ ಪಾಂಡೆ (13) ಮತ್ತು ಕರುಣ್ ನಾಯರ್ (18) ಬೇಗನೆ ಡಗೌಟ್ ಸೇರಿದ್ದರಿಂದ ಕರ್ನಾಟಕ ಒತ್ತಡಕ್ಕೆ ಸಿಲುಕಿತು. ಹೊಸ ಚೆಂಡಿನಿಂದಲೇ ದಾಳಿಗಿಳಿದ ಎಡಗೈ ಸ್ಪಿನ್ನರ್ ಸಾಯಿ ಕಿಶೋರ್ 3 ವಿಕೆಟ್ ಕಬಳಿಸಿ ರನ್‌ಗೂ ಕಡಿವಾಣ ಹಾಕಿದರು. ಆಗ ಅಭಿನವ್ ಮನೋಹರ್ (46) ಮತ್ತು ಪ್ರವೀಣ್ ದುಬೆ (33) ತಂಡದ ಮೊತ್ತ ಏರಿಸಲು ಶ್ರಮಿಸಿದರು. ಕೊನೇ ಹಂತದಲ್ಲಿ ಜೆ. ಸುಚಿತ್ (18) ಕೂಡ ಸಿಡಿದರು. ಇದರಿಂದ ಕರ್ನಾಟಕ ಕೊನೇ 3 ಓವರ್‌ಗಳಲ್ಲಿ 42 ರನ್ ಕಸಿದು 150ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಕೊನೇ ಓವರ್ ಥ್ರಿಲ್ಲರ್
    ಕೊನೇ 7 ಎಸೆತಗಳಲ್ಲಿ 22 ರನ್ ಬೇಕಿದ್ದಾಗ ಶಾರುಖ್ ಖಾನ್ ಸಿಕ್ಸರ್ ಸಿಡಿಸಿದರು. ಇದರಿಂದ ಕೊನೇ ಓವರ್‌ನಲ್ಲಿ ತಮಿಳುನಾಡಿಗೆ 16 ರನ್ ಬೇಕಿತ್ತು. ಆಗ ದಾಳಿಗಿಳಿದ ಎಡಗೈ ವೇಗಿ ಪ್ರತೀಕ್ ಜೈನ್‌ರ ಮೊದಲ ಎಸೆತದಲ್ಲೇ ಸಾಯಿ ಕಿಶೋರ್ ಬೌಂಡರಿ ಬಾರಿಸಿದರು. ನಂತರದ 3 ಎಸೆತಗಳಲ್ಲಿ 3 ಸಿಂಗಲ್ಸ್ ಬಿಟ್ಟುಕೊಟ್ಟಿದ್ದಲ್ಲದೆ, 2 ವೈಡ್ ಕೂಡ ಎಸೆದರು. 5ನೇ ಎಸೆತದಲ್ಲಿ ಶಾರುಖ್ 2 ರನ್ ಗಳಿಸಿದರು. ಇದರಿಂದ ಕೊನೇ ಎಸೆತದಲ್ಲಿ ತಮಿಳುನಾಡಿಗೆ 5 ರನ್ ಅಗತ್ಯವಿತ್ತು. ಆಗ ಶಾರುಖ್ ಡೀಪ್ ಸ್ಕ್ವೇರ್-ಲೆಗ್‌ನತ್ತ ಸಿಕ್ಸರ್ ಸಿಡಿಸಿ ಕರ್ನಾಟಕದ ಕೈಯಿಂದ ಗೆಲುವು ಕಸಿದರು.

    ಕರ್ನಾಟಕ: 7 ವಿಕೆಟ್‌ಗೆ 151 (ಮನೀಷ್ ಪಾಂಡೆ 13, ಕರುಣ್ 18, ಬಿಆರ್ ಶರತ್ 16, ಅಭಿನವ್ ಮನೋಹರ್ 46, ಪ್ರವೀಣ್ ದುಬೆ 33, ಜೆ. ಸುಚಿತ್ 18, ಸಾಯಿ ಕಿಶೋರ್ 12ಕ್ಕೆ 3, ಸಂದೀಪ್ ವಾರಿಯರ್ 34ಕ್ಕೆ 1). ತಮಿಳುನಾಡು: 6 ವಿಕೆಟ್‌ಗೆ 153 (ನಿಶಾಂತ್ 23, ಜಗದೀಶನ್ 41, ವಿಜಯ್ ಶಂಕರ್ 18, ಶಾರುಖ್ ಖಾನ್ 33*, ಕೆಸಿ ಕಾರ್ಯಪ್ಪ 23ಕ್ಕೆ 2, ಕರುಣ್ 2ಕ್ಕೆ 1, ಪ್ರತೀಕ್ ಜೈನ್ 34ಕ್ಕೆ 1, ವಿದ್ಯಾಧರ್ 21ಕ್ಕೆ 1). ಪಂದ್ಯಶ್ರೇಷ್ಠ: ಶಾರುಖ್ ಖಾನ್.

    PHOTO: ಕಿರಿಯರ ಕ್ರಿಕೆಟ್ ವಿಶ್ವಕಪ್ ವಿಜೇತ ನಾಯಕ ಉನ್ಮುಕ್ತ್ ಚಂದ್ ವಿವಾಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts