More

    ಸರ್ವೀಸ್ ರಸ್ತೆ ಮರಣ ಗುಂಡಿ

    ಮಂಗಳೂರು: ಕೂಳೂರು ಸರ್ವೀಸ್ ರಸ್ತೆಯಲ್ಲಿ ಬೃಹತ್ ಹೊಂಡಗಳು ಬಿದ್ದು ವಾಹನ ಸಂಚಾರ ಪ್ರಯಾಸವಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ರಸ್ತೆಯದು ಇದೇ ದುಸ್ಥಿತಿ. ಶಾಶ್ವತ ಪರಿಹಾರ ಕಲ್ಪಿಸಬೇಕಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಣ್ಣು ಮುಚ್ಚಿ ಕುಳಿತಿದೆ.

    ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿ ತೋಡಿನಂತಾಗಿದೆ. ಕೆಲವು ಗುಂಡಿಗಳಲ್ಲಿ 2 ಅಡಿಗಳಷ್ಟು ನೀರು ತುಂಬಿಕೊಂಡಿದೆ. ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡು ಹೋಗುತ್ತಿರುವುದು ಸಾಮಾನ್ಯ. ಕಾರುಗಳ ಅಡಿ ಭಾಗ ನೆಲಕ್ಕೆ ತಾಗುತ್ತಿದೆ. ನೀರು ತುಂಬಿರುವಾಗ ಗುಂಡಿಗಳ ಆಳ ಗೊತ್ತಾಗದೆ ಅಪಘಾತಗಳು ನಡೆಯುತ್ತಿವೆ.
    ಬೇಸಿಗೆಯಲ್ಲಿ ರಸ್ತೆಯನ್ನು ಮಣ್ಣು ಹಾಕಿ ಮುಚ್ಚಲಾಗುತ್ತದೆ. ಆಗ ವಾಹನಗಳು ಸಾಗುವಾಗ ಧೂಳಿನ ಸಿಂಚನವಾಗುತಿತ್ತು. ಮಳೆಗೆ ಮಣ್ಣು ಕೆಸರಾಗಿ ನೀರಿನೊಂದಿಗೆ ಕೊಚ್ಚಿ ಹೋಗಿದೆ. ಇದೀಗ ಬೃಹತ್ ಹೊಂಡಗಳಲ್ಲಿ ನೀರು ತುಂಬಿಕೊಂಡಿದೆ. ಈ ರಸ್ತೆಯಲ್ಲಿ ಪ್ರತಿ ನಿತ್ಯ ಲಾರಿ, ಟ್ಯಾಂಕರ್‌ಗಳ ಸಹಿತ ಸಾವಿರಾರು ವಾಹನಗಳು ಸಂಚರಿಸುತ್ತವೆ. ಪಂಪ್‌ವೆಲ್ ಸರ್ವಿಸ್ ರಸ್ತೆ ದುಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಪಾಲಿಕೆಯೇ ಸರಿಪಡಿಸಲು ಮುಂದಾಗಿದೆ.

    ಜನಪ್ರತಿನಿಧಿಗಳ ಮೌನ: ರಾತ್ರಿ ವೇಳೆ ಬೈಕ್ ಅಥವಾ ಇತರೇ ಸಣ್ಣ ವಾಹನದವರು ವೇಗವಾಗಿ ಈ ರಸ್ತೆಯಲ್ಲಿ ಬಂದರೆ ದುರಂತ ಸಂಭವಿಸುವುದು ನಿಶ್ಚಿತ. ಕಳೆದ ನಾಲ್ಕು ವರ್ಷಗಳಿಂದ ಈ ರಸ್ತೆಯ ದುಸ್ಥಿತಿ ಸುಧಾರಿಸಿಲ್ಲ. ಇಕ್ಕಟ್ಟಾದ ಈ ರಸ್ತೆಯಲ್ಲಿ ಪಾದಚಾರಿಗಳು ನಡೆದಾಡಲು ಸಾಧ್ಯವೇ ಇಲ್ಲದಂತಾಗಿದೆ. ಸಾರ್ವಜನಿಕರು ಇಷ್ಟೊಂದು ಸಮಸ್ಯೆ ಎದುರಿಸುತ್ತಿದ್ದು, ಕನಿಷ್ಠ ಡಾಂಬರೀಕರಣವನ್ನೂ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಕೊಟ್ಟಾರಚೌಕಿ ಸರ್ವಿಸ್ ರಸ್ತೆ ಮಾದರಿಯಲ್ಲಿ ಕೂಳೂರು ಸರ್ವಿಸ್ ರಸ್ತೆಯನ್ನು ಸುಧಾರಣೆ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಧಿಕಾರಿ ಹಾಗೂ ಮಹಾನಗರಪಾಲಿಕೆಗೆ ಸಾರ್ವಜನಿಕರು ಮನವಿ ನೀಡಿ ಸರ್ವಿಸ್ ರಸ್ತೆಯ ಅವ್ಯವಸ್ಥೆಯನ್ನು ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಸಮಸ್ಯೆ ಅರಿವಿದ್ದರೂ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ ಎಂದು ದೂರಿದ್ದಾರೆ.

    ಹೆದ್ದಾರಿಯಲ್ಲೂ ಮರಣ ಗುಂಡಿ: ಕೂಳೂರು ಸೇತುವೆಯಿಂದ ಸುರತ್ಕಲ್ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗುಂಡಿಗಳು ಬಾಯ್ದೆರೆದು ನಿಂತಿವೆ. ಇದು ವಾಹನ ಅಪಘಾತಕ್ಕೆ ಕಾರಣವಾಗುತ್ತಿದೆ. ವಾಹನಗಳು ನಿಧಾನವಾಗಿ ಚಲಿಸುವುದರಿಂದ ಆಗಾಗ ವಾಹನ ದಟ್ಟಣೆ ಉಂಟಾಗುತ್ತಿದೆ. ಮಳೆ ಬರುವಾಗ ಬೃಹತ್ ಹೊಂಡಗಳಲ್ಲಿ ನೀರು ನಿಂತಿರುವುದರಿಂದ ವಾಹನ ಚಾಲಕರ ಅರಿವಿಗೆ ಬರುವುದಿಲ್ಲ. ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೆ ಕಂಟಕವಾಗಿದೆ. ವರ್ಷದಲ್ಲಿ ನಾಲ್ಕೈದು ತಿಂಗಳು ಮಾತ್ರ ಇಲ್ಲಿ ರಸ್ತೆ ಸುಸ್ಥಿತಿಯಲ್ಲಿರುತ್ತದೆ. ಮಳೆಗಾಲದಲ್ಲಿ ಪ್ರತಿ ವರ್ಷ ದುಸ್ಥಿತಿ ಮರುಕಳಿಸುತ್ತದೆ. ಟೋಲ್ ಸ್ವೀಕರಿಸುವಾಗ ರಸ್ತೆಯನ್ನೂ ಸರಿಪಡಿಸಿಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಇಲ್ಲಿ ಪ್ರತಿದಿನ ಸಂಚರಿಸುವ ಸಂತೋಷ್‌ಕೃಷ್ಣ ತಿಳಿಸಿದ್ದಾರೆ.

    ಕೂಳೂರು, ಪಂಪ್‌ವೆಲ್, ಕೊಟ್ಟಾರ, ಕುಂಟಿಕಾನ ಮೊದಲಾದ ಕಡೆಗಳಲ್ಲಿ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ಸಮರ್ಪಕವಾಗಿ ಹರಿದು ಹೋಗಲು ಚರಂಡಿ ಶುಚಿಗೊಳಿಸುತ್ತಿಲ್ಲ. ಕಸ, ಮಣ್ಣು ತುಂಬಿಕೊಂಡು ಮಳೆ ನೀರು ರಸ್ತೆಯ ಮೇಲೆಯೆ ಹರಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಲ್ಲವನ್ನೂ ಗಮನಿಸಿಯೂ ಮೌನ ವಹಿಸಿದೆ. ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ.
    ಜಿ.ಕೆ.ಭಟ್, ಸಾಮಾಜಿಕ ಕಾರ್ಯಕರ್ತ

    ಸರ್ವಿಸ್ ರಸ್ತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿರುವುದು ಗಮನಕ್ಕೆ ಬಂದಿದೆ. ದುರಸ್ತಿಗೆ ಬೇಕಾದ ಕ್ರಮ ಅನುಸರಿಸಲಾಗುತ್ತಿದೆ. ಮಳೆ ಕಡಿಮೆಯಾದ ತಕ್ಷಣ ಸರಿಪಡಿಸಲಾಗುವುದು. ಸರ್ವಿಸ್ ರಸ್ತೆಗಳ ಸಮಸ್ಯೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು.
    ಶಿಶು ಮೋಹನ್ ಯೋಜನಾ ನಿರ್ದೇಶಕ ರಾ.ಹೆದ್ದಾರಿ ಪ್ರಾಧಿಕಾರ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts