More

    ಅಟಲ್‌ಜಿ ಕೇಂದ್ರ ಸರ್ವರ್ ಡೌನ್, ಸಾರ್ವಜನಿಕ ಸೇವೆ ವಿಳಂಬ

    ಉಡುಪಿ: ಸರ್ವರ್‌ಡೌನ್ ಪರಿಣಾಮ ಉಡುಪಿ ತಾಲೂಕು ಕಚೇರಿಯಲ್ಲಿ ಕಂದಾಯ ಸಂಬಂಧಿತ ಸೇವೆಯಲ್ಲಿ ವಿಳಂಬ ಪ್ರಕ್ರಿಯೆ ಕುರಿತು ಕಲೆವು ದಿನಗಳಿಂದ ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿದೆ. ಜತೆಗೆ ಅಟಲ್‌ಜೀ ಜನಸ್ನೇಹಿ ಕೇಂದ್ರ ಸಾರ್ವಜನಿಕರಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ಅಸಮಾಧಾನವು ಸಾರ್ವಜನಿಕ ವಲಯದಲ್ಲಿದೆ.
    ದಿನವಿಡೀ ಕಾದರೂ ದೂರದ ಊರಿಗಳಿಂದ ಬಂದ ಜನರ ಕೆಲಸ ಆಗುತ್ತಿಲ್ಲ. ಒಂದು ಪ್ರಮಾಣಪತ್ರಕ್ಕಾಗಿ ಬೆಳಗ್ಗೆಯಿಂದ ಸಾಯಂಕಾಲವರೆಗೂ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಕೆಲವೊಮ್ಮೆ 3-4 ದಿನಗಳಾದರೂ ಪ್ರಮಾಣಪತ್ರ ಸಿಗುವುದಿಲ್ಲ. ಸಾರ್ವಜನಿಕರು ಬೆಳಗ್ಗೆ 9 ಗಂಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಪ್ರಸ್ತುತ ಸರ್ವರ್ ಡೌನ್ ಇರುವುದರಿಂದ ದಿನಕ್ಕೆ ನಾಲ್ಕೈದು ಮಂದಿಯ ನೋಂದಣಿ ಮಾತ್ರ ಸಾಧ್ಯವಾಗುತ್ತಿದೆ ಎಂದು ಕಚೇರಿ ಮೂಲಗಳು ತಿಳಿಸಿವೆ.

    ಕಂಪ್ಯೂಟರ್‌ಗಳನ್ನು ಹೆಚ್ಚಿಸಿ: ಈ ಕಚೇರಿಗಳಿಗೆ ಕಂಪ್ಯೂಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಿದರೆ, ಸರ್ವರ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದರಿಂದ ಸಾರ್ವಜನಿಕರು ನಾಲ್ಕೈದು ದಿನಗಳವರೆಗೆ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಈಗಾಗಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ.

    ಪ್ರಮುಖ ಸೇವೆಗಳು ಲಭ್ಯ
    ಕೃಷಿ ಕುಟುಂಬ ಸದಸ್ಯ, ಭೂ ರಹಿತ, ಸಣ್ಣ ಮತ್ತು ಮಾರ್ಜಿನಲ್ ರೈತ, ಕೃಷಿ ಕಾರ್ಮಿಕ, ಜಮೀನು ಹೊಂದಿರುವ ಪ್ರಮಾಣಪತ್ರ, ಸಾಲ ತೀರಿಸುವ ಶಕ್ತಿಯ ಬಗ್ಗೆ ದೃಢೀಕರಣ ಪತ್ರ, ಜಾತಿ-ಆದಾಯ, ಮರು ವಿವಾಹ, ನಿವಾಸ-ವಾಸಸ್ಥಳ, ಟೆನೆನ್ಸಿ ರಹಿತ, ಕೃಷಿಕ, ಜನಸಂಖ್ಯೆ, ಅನುಕಂಪದ ಆದಾಯ ಪ್ರಮಾಣಪತ್ರ, ಜೀವಂತವಿರುವ ಕುಟುಂಬ ಸದಸ್ಯ ಪ್ರಮಾಣಪತ್ರ, ಸರ್ಕಾರಿ ಕೆಲಸದಲ್ಲಿ ಇಲ್ಲದ, ಜೀವಂತ ಪ್ರಮಾಣಪತ್ರ, ನಿರುದ್ಯೋಗ ಪ್ರಮಾಣ ಪತ್ರ ವಿಧವಾ ಪ್ರಮಾಣಪತ್ರಕ್ಕಾಗಿ ಜನರು ಅಟಲ್‌ಜಿ ಕೇಂದ್ರಗಳಿಗೆ ಓಡಾಡುತ್ತಿದ್ದಾರೆ.

    ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ಜನ
    ವಿದ್ಯಾರ್ಥಿ ವೇತನಕ್ಕೆ ಜಾತಿ, ಆದಾಯ ಪ್ರಮಾಣಪತ್ರ, ಮದುವೆಗಾಗಿ ಸಾಲ ತೆಗೆಯಲು ಅಗತ್ಯವಿರುವ ಪಹಣಿ ಸೇರಿದಂತೆ ಇತರ ದಾಖಲೆಗಳನ್ನು ನಿಗದಿತ ಸಮಯದೊಳಗೆ ಸಲ್ಲಿಸಬೇಕಾಗಿದೆ. ಹೀಗಾಗಿ ಕಾದು ಪ್ರಮಾಣಪತ್ರ ಪಡೆಯುತ್ತಾರೆ. ಕೆಲವರು ಬೆಳಗ್ಗೆಯಿಂದ ನಿಂತು ಸಾಲು ತಪ್ಪುತ್ತದೆ ಎನ್ನುವ ಭಯದಿಂದ ಊಟಕ್ಕೂ ಹೋಗದೆ ನಿಲ್ಲುವುದು ಸಾಮಾನ್ಯವಾಗಿದೆ. ಅಟಲ್‌ಜಿ ಸ್ನೇಹ ಕೇಂದ್ರದಲ್ಲಿ ಸೂಕ್ತ ಸಮಯದಲ್ಲಿ ದಾಖಲೆಗಳು ಸಿಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಕೆಲಸಗಳಿಗೆ ತೊಡಕುಂಟಾಗುತ್ತಿದೆ ಎಂದು ಕೆಲವು ಪಾಲಕರು ಆರೋಪಿಸಿದ್ದಾರೆ. ವೃದ್ಧರಿಗೆ ಅಶಕ್ತರಿಗೆ ಕುಳಿತುಕೊಳ್ಳಲು ಒಂದು ವ್ಯವಸ್ಥೆಯನ್ನು ಸರಿಯಾಗಿ ಮಾಡಿಲ್ಲ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.

    ಅಟಲ್‌ಜಿ ಕೇಂದ್ರದಲ್ಲಿ ಸರ್ವರ್‌ಡೌನ್ ಸಮಸ್ಯೆ ಎಲ್ಲ ಕಡೆಗಳಲ್ಲಿಯೂ ಇದೆ. ಇದರಿಂದ ಒಮ್ಮೊಮ್ಮೆ ಸೇವೆ ವಿಳಂಬವಾಗುತ್ತಿದೆ. ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ದಾಖಲಾತಿ, ಪ್ರಮಾಣಪತ್ರಗಳನ್ನು ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗಿದೆ.
    ಪ್ರದೀಪ್ ಕುರ್ಡೇಕರ್, ಉಡುಪಿ, ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts