More

    ಸಮಯ ಪ್ರಜ್ಞೆಯಿದ್ದಲ್ಲಿ ಯಶಸ್ಸು: ಪದ್ಮಶ್ರೀ ಡಾ.ಮಾತಾ ಬಿ. ಮಂಜಮ್ಮ ಜೋಗತಿ ಅಭಿಪ್ರಾಯ

    ಮಂಗಳೂರು: ನಾವು ಮಾಡುವ ಕೆಲಸವೇ ನಮ್ಮನ್ನು ಗುರುತಿಸಿಕೊಳ್ಳುತ್ತದೆ. ನಮ್ಮಲ್ಲಿ ಸಮಯ ಪ್ರಜ್ಞೆ ಅಗತ್ಯವಾಗಿ ಇರಬೇಕು. ಸಮಯದ ಕುರಿತು ಗೌರವ ಇಲ್ಲದವರು ಉದ್ಧಾರವಾಗುವುದಿಲ್ಲ ಎಂದು ಪದ್ಮಶ್ರೀ ಡಾ.ಮಾತಾ ಬಿ. ಮಂಜಮ್ಮ ಜೋಗತಿ ಹೇಳಿದರು.

    ಸ್ವಸ್ತಿಕ ನ್ಯಾಷನಲ್ ಸ್ಕೂಲ್, ಕೆನರಾ ಹೈಸ್ಕೂಲ್ ಅಸೋಸಿಯೇಶನ್, ಅನಿರ್ವೇದ ಮಾನಸಿಕ ಆರೋಗ್ಯ ಸಂಪನ್ಮೂಲ ಕೇಂದ್ರ ಮತ್ತು ರೋಟರಿ ಮಂಗಳೂರು ಡೌನ್ ಟೌನ್ ಸಹಯೋಗದಲ್ಲಿ ಮಾನಸಿಕ ಸ್ವಾಸ್ಥ್ಯ ಸಮುದಾಯದ ಕಡೆಗೆ ಸರಣಿ-7ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ನಾನು ಬಳ್ಳಾರಿಯವಳು 10ನೇ ತರಗತಿವರೆಗೆ ಕಲಿತಿದ್ದೇನೆ. ಅದರಲ್ಲೂ ಎಸ್ಸೆಸ್ಸೆಲ್ಸಿಯ ವಿಜ್ಞಾನ, ಗಣಿತದಲ್ಲಿ ಅನುತೀರ್ಣ ಆಗಿದ್ದೇನೆ. ರಾಜ್ಯದಲ್ಲಿರುವ ನೂರಾರು ಕಾಲೇಜುಗಳಲ್ಲಿ ಸಾಕಷ್ಟು ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಿದ್ದೇನೆ. ನನ್ನನ್ನು ಈ ಹಂತಕ್ಕೆ ಬೆಳೆಸಿದ್ದು ನನ್ನ ಕಲೆ ಮಾತ್ರ. ರಾಜ್ಯದ 15 ವಿವಿಗಳಲ್ಲಿ ನನ್ನ ಪಠ್ಯವನ್ನು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಯಾರು ಕೂಡ ಯಾರನ್ನು ಗುರುತಿಸಿಕೊಳ್ಳುವುದಿಲ್ಲ. ನಮ್ಮ ಕುರಿತು ಸಮಾಜ ಅನುಕಂಪ ತೋರಿಸುವ ಬದಲು ಉದ್ಯೋಗದ ಮೂಲಕ ನಮಗೆ ಅವಕಾಶ ನೀಡಲಿ ಎಂದರು.

    ಮಾಜಿ ಮೇಯರ್ ಕದ್ರಿ ದಿವಾಕರ್ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನು ಗೌರವಿಸುವುದನ್ನು ಕಲಿಯಬೇಕು. ಇಂತಹವರು ಅಧಿಕಾರಿ ವರ್ಗದಲ್ಲಿ ಉನ್ನತ ಸ್ಥಾನಕ್ಕೇರಿದರೆ ಅವರ ಕುರಿತಾದ ಸಮಾಜದಲ್ಲಿರುವ ಕೀಳರಿಮೆ ತನ್ನಿಂದ ತಾನೇ ಇಳಿದು ಹೋಗುತ್ತದೆ ಎಂದರು.

    ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಆರ್. ಜೈನ್ ಮಾತನಾಡಿ, ದೈಹಿಕ ಆರೋಗ್ಯದ ಕುರಿತಾಗಿ ನಮ್ಮ ಕಾಳಜಿ ಹೆಚ್ಚಿರುತ್ತದೆ ಆದರೆ ಮಾನಸಿಕ ಕಾಯಿಲೆಗಳ ಕುರಿತು ನಮ್ಮಲ್ಲಿ ಪ್ರಾಮುಖ್ಯತೆ ನೀಡುತ್ತಿಲ್ಲ. ಈಗಿನ ತಾಂತ್ರಿಕ ಬದಲಾವಣೆಗಳು ನಮ್ಮ ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುತ್ತಿದೆ ಎಂದರು.

    ಮಂಗಳೂರು ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನ ಗೌರವ ಕಾರ್ಯದರ್ಶಿ ಎಂ.ರಂಗನಾಥ ಭಟ್, ರೋಟರಿ ಮಂಗಳೂರು ಡೌನ್‌ಟೌನ್‌ನ ಕಾರ‌್ಯದರ್ಶಿ ಉಮೇಶ್ ಗಟ್ಟಿ, ಅನಿರ್ವೇದ ಮಾನಸಿಕ ಆರೋಗ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕರಾದ ಡಾ.ಕೆ.ಟಿ. ಶ್ವೇತಾ, ಖಜಾಂಚಿ ಶೃತಿ ಕೆ.ಟಿ, ಸಿಎಚ್‌ಎಸ್‌ಎನ ಅಧ್ಯಕ್ಷ ವಾಸುದೇವ ಕಾಮತ್, ಸ್ವಸ್ತಿಕ ನ್ಯಾಷನಲ್ ಸ್ಕೂಲ್‌ನ ಪ್ರಿನ್ಸಿಪಾಲ್ ಡಾ.ಮಾಲಿನಿ ಎನ್. ಹೆಬ್ಬಾರ್ ಉಪಸ್ಥಿತರಿದ್ದರು. ಪದ್ಮಶ್ರೀ ಡಾ.ಮಾತಾ ಬಿ ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಲಾಯಿತು. ಪದ್ಮಶ್ರೀ ಡಾ.ಮಾತಾ ಬಿ ಮಂಜಮ್ಮ ಜೋಗತಿ ಅವರ ಜೀವನ ಕತೆ ಆಧರಿಸಿದ ಮಾತಾ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಿತು.

    ನಾವು ಮಹಿಳೆಯರಿಗಿಂತ ಉತ್ತಮವಾಗಿ ಅಡುಗೆ ಮಾಡುತ್ತೇವೆ. ಅವರಿಗಿಂತ ಹೆಚ್ಚಾಗಿ ಕೆಲಸ ಮಾಡಬಲ್ಲೆವು ಆದರೆ ನಮಗೆ ಅವಕಾಶ ನೀಡುವ ಮನೋಭಾವವನ್ನು ಸಮಾಜದವರು ಇಟ್ಟುಕೊಳ್ಳಲಿ. ನಮಗೆ ಇಂತಹದ್ದೇ ಉದ್ಯೋಗ ಕೊಡಿ ಎಂದು ಕೇಳ್ತಾ ಇಲ್ಲ. ವಿದ್ಯಾವಂತರಿಗೆ ಪಿಎ ಸೇರಿದಂತೆ ಸಣ್ಣಪುಟ್ಟ ಕೆಲಸ ಕೊಡಿ. ಅವಿದ್ಯಾವಂತರಿಗೆ ಪಾರ್ಕ್ ಗುಡಿಸುವ ಕೆಲಸವನ್ನಾದರೂ ನೀಡಿ. ಕೆಲಸದಲ್ಲಿ ಶ್ರದ್ಧೆ, ಭಕ್ತಿಯಿಂದ ಮಾಡುವ ಮನಸ್ಸು ನಮ್ಮಲ್ಲಿರುತ್ತದೆ.
    – ಡಾ.ಮಾತಾ ಬಿ ಮಂಜಮ್ಮ ಜೋಗತಿ, ಪದ್ಮಶ್ರೀ ಪುರಸ್ಕೃತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts