More

    ಆ ಕಾಲಕ್ಕೆ ನಿಶಾ: ವಿನಯ್-ಅದಿತಿ ಚಿತ್ರಕ್ಕೆ ಕಿರುತೆರೆ ನಟಿ ಎಂಟ್ರಿ

    ಬೆಂಗಳೂರು: ಸೀರಿಯಲ್​ಗೂ ಸಿನಿಮಾಕ್ಕೂ ತುಂಬ ಹತ್ತಿರದ ಸಂಬಂಧ. ಅಲ್ಲಿನವರು ಇಲ್ಲಿಗೆ, ಇಲ್ಲಿನವರು ಅಲ್ಲಿಗೆ ಆಗಾಗ ಬಂದು ಹೋಗುತ್ತಿರುತ್ತಾರೆ. ಈಗಾಗಲೇ ಒಂದಷ್ಟು ನಟ-ನಟಿಯರು ಸಿನಿಮಾ, ಸೀರಿಯಲ್ ಎರಡರಲ್ಲೂ ಗುರುತಿಸಿಕೊಂಡಿದ್ದಾರೆ. ಅದೇ ರೀತಿ ‘ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ನಿಶಾ ಇದೀಗ ಧಾರಾವಾಹಿಯ ಜತೆಗೆ ಬೆಳ್ಳಿತೆರೆಯತ್ತಲೂ ಪಯಣ ಬೆಳೆಸಿದ್ದಾರೆ. ಆ ಚೊಚ್ಚಲ ಚಿತ್ರದ ಹೆಸರು ‘ಅಂದೊಂದಿತ್ತು ಕಾಲ’. ಕೀರ್ತಿ ನಿರ್ದೇಶನದಲ್ಲಿ ‘ಅಂದೊಂದಿತ್ತು ಕಾಲ’ ಸಿನಿಮಾ ಇತ್ತೀಚೆಗಷ್ಟೇ ಮುಹೂರ್ತ ಮುಗಿಸಿಕೊಂಡಿದೆ. ವಿನಯ್ ರಾಜಕುಮಾರ್ ನಾಯಕನಾಗಿ ನಟಿಸಲಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿರುವುದು ಈ ಮೊದಲೇ ಸುದ್ದಿಯಾಗಿತ್ತು. ಇದೀಗ ಇದೇ ಚಿತ್ರದ ಮತ್ತೊಂದು ಪಾತ್ರಕ್ಕೆ ನಿಶಾ ಆಯ್ಕೆಯಾಗಿದ್ದಾರೆ.

    ಆ ಕಾಲಕ್ಕೆ ನಿಶಾ: ವಿನಯ್-ಅದಿತಿ ಚಿತ್ರಕ್ಕೆ ಕಿರುತೆರೆ ನಟಿ ಎಂಟ್ರಿ

    ಶೀರ್ಷಿಕೆಯೇ ಹೇಳುವಂತೆ, ‘ಅಂದೊಂದಿತ್ತು ಕಾಲ’ ಸಿನಿಮಾ ಮೂರು ಕಾಲಘಟ್ಟದಲ್ಲಿ ನಡೆಯುವ ಕಥೆ. ಬಾಲ್ಯದ ತುಂಟತನ, ಯೌವನದ ಸೆಳೆತ ಎಲ್ಲವನ್ನೂ ಈ ಸಿನಿಮಾದಲ್ಲಿ ನಿರ್ದೇಶಕರು ತೋರಿಸಲಿದ್ದಾರೆ. ಇದರಲ್ಲಿ ಶಾಲಾ ಭಾಗದಲ್ಲಿ ನಿಶಾ ಕಾಣಿಸಿಕೊಳ್ಳಲಿದ್ದಾರೆ. ‘ಜೀವನದ ಹಲವು ಘಟ್ಟಗಳಲ್ಲಿ ಈ ಸಿನಿಮಾ ಸಾಗಲಿದೆ. 90ರ ಕಾಲಘಟ್ಟದಲ್ಲಿನ ಹುಡುಗಿಯಾಗಿ ನನ್ನನ್ನು ತೋರಿಸಲಿದ್ದಾರೆ’ ಎಂದು ಹೇಳುತ್ತಾರೆ ನಿಶಾ. ‘ಇದು ರೆಗ್ಯುಲರ್ ಶೈಲಿಯ ಸಿನಿಮಾ ಅಲ್ಲ. ಆ ಒಂದು ಕಾರಣಕ್ಕೆ ಈ ಸಿನಿಮಾ ಒಪ್ಪಿಕೊಂಡಿದ್ದೇನೆ. ಪಾತ್ರದ ನೈಜತೆ ಹೇಗಿದೆ ಎಂದರೆ, ನಮ್ಮ ಕಥೆಯೇ ತೆರೆಮೇಲೆ ಬರಲಿದೆ ಎಂಬಷ್ಟರ ಮಟ್ಟಿಗೆ ನೋಡುಗರನ್ನು ಸೆಳೆಯಲಿದೆ. ತೀರ್ಥಹಳ್ಳಿ ಮತ್ತು ಬೆಂಗಳೂರಿನಲ್ಲಿ ನನ್ನ ಪಾಲಿನ ಶೂಟಿಂಗ್ ನಡೆಯಲಿದೆ’ ಎನ್ನುವ ನಿಶಾ, ಸಿನಿಮಾ ಮತ್ತು ಕಿರುತೆರೆ ಎರಡರಲ್ಲಿಯೂ ಮುಂದುವರಿಯುವುದಾಗಿ ಹೇಳಿದ್ದಾರೆ. ವಿನಯ್ ರಾಜಕುಮಾರ್ ಮತ್ತು ಅದಿತಿ ಪ್ರಭುದೇವ ಜತೆ ನಟಿಸುತ್ತಿರುವುದಕ್ಕೂ ಸಂತಸದಲ್ಲಿದ್ದಾರೆ ನಿಶಾ. ಭುವನ್ ಸುರೇಶ್ ಬಂಡವಾಳ ಹೂಡುತ್ತಿರುವ ಈ ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ರಾಘವೇಂದ್ರ ಸಂಗೀತ ನೀಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts