More

    ಗುರುವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 300 ಅಂಶ ಏರಿಕೆ, 11,300ರಲ್ಲಿತ್ತು ನಿಫ್ಟಿ

    ಮುಂಬೈ: ಚೀನಾ ಮೂಲದ ಕೊರೊನಾ ವೈರಸ್​ ಸೋಂಕಿನ ಆತಂಕ ಜಗತ್ತನ್ನುವ್ಯಾಪಿಸಿದ್ದು, ಕಳೆದ ಕೆಲವು ವಾರಗಳಿಂದ ಷೇರುಪೇಟೆ ವಿಪರೀತ ಏರಿಳಿತದೊಂದಿಗೆ ವಹಿವಾಟು ನಡೆಸುತ್ತಿದೆ. ಭಾರತೀಯ ಷೇರುಪೇಟೆಯ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಬೆಳಗ್ಗೆ ವಹಿವಾಟು ಶುರುವಾಗುತ್ತಿದ್ದಂತೆ 300 ಅಂಶ ಏರಿಕೆ ದಾಖಲಿಸಿದರೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 11,300 ತಲುಪಿ ವಹಿವಾಟು ಮುಂದುವರಿಸಿದೆ.

    ಕೊರೊನಾ ವೈರಸ್​ ಸೋಂಕು ತಡೆಗೆ 50 ಶತಕೋಟಿ ಡಾಲರ್ ಹಣವನ್ನು ಬಡ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆ ರಾಷ್ಟ್ರಗಳಿಗೆ ಯಾರಿಗೆ ಅಗತ್ಯ ಇದೆಯೋ ಅವರಿಗೆ ಕೂಡಲೇ ಬಿಡುಗಡೆ ಮಾಡುವುದಾಗಿ ಇಂಟರ್​ನ್ಯಾಷನಲ್ ಮಾನಿಟರಿ ಫಂಡ್​(ಐಎಂಎಫ್) ಬುಧವಾರ ಹೇಳಿತ್ತು. ಇದರ ಬೆನ್ನಲ್ಲೇ ಷೇರುಪೇಟೆಯಲ್ಲೂ ಚೇತರಿಕೆ ಗೋಚರಿಸಿದೆ.

    ಗುರುವಾರ ಬೆಳಗ್ಗೆ ಸೆನ್ಸೆಕ್ಸ್ ಅರ್ಲಿ ಟ್ರೇಡ್​ನಲ್ಲಿ 299 ಅಂಶ ಏರಿಕೆ ದಾಖಲಿಸಿ ಬಳಿಕ 191.75 ಅಂಶ (0.5%) ಲಾಭ ತೋರಿ 38,601.23ರಲ್ಲಿ ವಹಿವಾಟು ಮುಂದುವರಿಸಿತು. ನಿಫ್ಟಿ 49.25 ಅಂಶ (0.44%) ಏರಿಕೆಯೊಂದಿಗೆ 11,300.25ರಲ್ಲಿ ವಹಿವಾಟು ಶುರುಮಾಡಿದೆ.

    ಸೆನ್ಸೆಕ್ಸ್ ಪಟ್ಟಿಯಲ್ಲಿ ಎಚ್​ಯುಎಲ್​, ಎಚ್​ಸಿಎಲ್ ಟೆಕ್, ಟಾಟಾ ಸ್ಟೀಲ್​, ನೆಸ್ಟ್ಲೆ ಇಂಡಿಯಾ, ಟಿಸಿಎಸ್​, ಏಷ್ಯನ್ ಪೇಂಟ್ಸ್​ ಷೇರುಗಳು ಟಾಪ್ ಗೇನರ್ಸ್ ಆಗಿ ಹೊರಹೊಮ್ಮಿವೆ. ಇದೇ ವೇಳೆ ಐಸಿಐಸಿಐ ಬ್ಯಾಂಕ್, ಎಲ್​ಆ್ಯಂಡ್ ಟಿ, ಪವರ್​ಗ್ರಿಡ್ಸ್​, ಎನ್​ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್​ ಕಂಪನಿಗಳ ಷೇರುಗಳು ನಷ್ಟ ಅನುಭವಿಸಿವೆ.

    ಬುಧವಾರದ ವಹಿವಾಟಿನಲ್ಲಿ ಬಿಎಸ್​ಇ ಸೂಚ್ಯಂಕ ಸೆನ್ಸೆಕ್ಸ್​ 214.22 ಅಂಶ ಇಳಿಕೆಯೊಂದಿಗೆ 38,409.48ರಲ್ಲೂ ನಿಫ್ಟಿ 52.30 ಅಂಶ ಇಳಿಕೆಯೊಂದಿಗೆ 11,251ರಲ್ಲೂ ವಹಿವಾಟು ಕೊನೆಗೊಳಿಸಿದ್ದವು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts