More

    ಷೇರುಪೇಟೆಯಲ್ಲಿ ಬ್ಲಡ್​ಬಾತ್: 1,100 ಅಂಶ ಕುಸಿತ ಸೆನ್ಸೆಕ್ಸ್​- ಒಂದೇ ಸಲಕ್ಕೆ 5 ಲಕ್ಷ ಕೋಟಿ ರೂಪಾಯಿ ನಷ್ಟ

    ಮುಂಬೈ: ಜಾಗತಿಕ ಮಟ್ಟದಲ್ಲಿ ವಿವಿಧ ಷೇರುಪೇಟೆಗಳಲ್ಲಿ ಚೀನಾದ ಕೊರೊನಾ ವೈರಸ್ ಸೋಂಕಿನ ಆತಂಕ ಕಾಡಿ ಭಾರಿ ಪ್ರಮಾಣ ಷೇರು ಮಾರಾಟ ನಡೆದ ಪರಿಣಾಮ, ಭಾರತೀಯ ಷೇರುಪೇಟೆಯ ಮೇಲೂ ಆಗಿದೆ. ಶುಕ್ರವಾರ ದಿನದ ವಹಿವಾಟು ಆರಂಭವಾಗುತ್ತಿದ್ದಂತೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 1,100ಕ್ಕೂ ಹೆಚ್ಚು ಅಂಶ ಕುಸಿತ ಕಂಡಿದೆ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಕೂಡ 329ಕ್ಕೂ ಹೆಚ್ಚು ಅಂಶ ಕುಸಿದಿದೆ. ಪರಿಣಾಮ ಹೂಡಿಕೆದಾರರು ಒಂದೇ ಸಲಕ್ಕೆ 5 ಲಕ್ಷ ಕೋಟಿ ರೂಪಾಯಿಗೂ ಅಧಿಕ ನಷ್ಟ ಅನುಭವಿಸಿದ್ದಾರೆ.

    ಸೆನ್ಸೆಕ್ಸ್​ ದಿನದ ವಹಿವಾಟು ಆರಂಭದಲ್ಲಿ ಶೇಕಡ 2.77 ಅಂದರೆ 1,100.27 ಅಂಶ ಕುಸಿದು 38,645.39ರಲ್ಲಿ ವಹಿವಾಟು ಶುರುಮಾಡಿಕೊಂಡಿದೆ. ಇದೇ ರೀತಿ ನಿಫ್ಟಿ ಶೇಕಡ 2.83 ಅಂದರೆ 329.50 ಅಂಶ ಕುಸಿದು 11,303.80ಯಲ್ಲಿ ವಹಿವಾಟು ಆರಂಭಿಸಿದೆ.

    ಸೆನ್ಸೆಕ್ಸ್​ನ 30 ಷೇರುಗಳ ಪಟ್ಟಿಯಲ್ಲಿ ಎಲ್ಲವೂ ಕೆಂಪು ಬಣ್ಣಕ್ಕೆ ತಿರುಗಿದ್ದು, ಟಾಟಾ ಸ್ಟೀಲ್​, ಟೆಕ್ ಮಹಿಂದ್ರಾ, ಇನ್​ಫೋಸಿಸ್​, ಮಹಿಂದ್ರಾ ಆ್ಯಂಡ್ ಮಹಿಂದ್ರಾ, ಬಜಾಜ್ ಫಿನಾನ್ಸ್​, ಎಚ್​ಸಿಎಲ್ ಟೆಕ್​, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಭಾರಿ ನಷ್ಟ ಅನುಭವಿಸಿವೆ.

    ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್​ 143.30 ಅಂಶ ಅಥವಾ 0.36% ಕುಸಿದು 39,745.66ರಲ್ಲೂ ನಿಫ್ಟಿ ಶೇಕಡ 0.39 ಅಥವಾ 45.20 ಅಂಶ ಕುಸಿದು 11,633.30ಯಲ್ಲಿ ವಹಿವಾಟು ಮುಗಿಸಿದ್ದವು. ನೆಟ್ ಬೇಸಿಸ್​ ಮೇಲೆ ಹೇಳುವುದಾದರೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ 3,127.36 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

    ಇನ್ನು, ಶಾಂಘೈ, ಹಾಂಕಾಂಗ್​, ಸಿಯೋಲ್, ಟೋಕಿಯೋ ಷೇರುಪೇಟೆಗಳು ಶುಕ್ರವಾರದ ಬೆಳಗ್ಗಿನ ವಹಿವಾಟಿನಲ್ಲಿ ಶೇಕಡ 4 ಕುಸಿತ ಕಂಡಿವೆ. ವಾಲ್​​ಸ್ಟ್ರೀಟ್​ ನಲ್ಲಿ ಡೌ ಜೋನ್ಸ್​ ಇಂಡಸ್ಟ್ಟಿಯಲ್​ ಅವರೇಜ್​ 1,190.95 ಅಂಶ ಕುಸಿತ ಕಂಡು, ಆ ಪೇಟೆಯ ಇತಿಹಾಸದಲ್ಲಿ ಒಂದೇ ದಿನದಲ್ಲಿ ಗರಿಷ್ಠ ಇಳಿಕೆಯನ್ನು ದಾಖಲಿಸಿದೆ. ವಾರದಲ್ಲಿ ಈ ಇಳಿಕೆ ಪ್ರಮಾಣ 3,225.77 ಅಂಶ ಅಥವಾ ಶೇಕಡ 11.1 ಆಗಿದೆ. ಇದೇ ರೀತಿ, S&P 500 ಕೂಡ ಶೇಕಡ 12 ಕುಸಿತ ಅಂದರೆ ವಾರದ ಹಿಂದೆ ಸಾರ್ವಕಾಲಿಕ ಗರಿಷ್ಠ ಮಟ್ಟದ ಇಳಿಕೆಯನ್ನು ದಾಖಲಿಸಿ ನಷ್ಟ ಅನುಭವಿಸಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts