More

    ಮುಸ್ಲಿಂ ಮಹಿಳೆಯರು ರಸ್ತೆಗೆ ಇಳಿದು ಪ್ರತಿಭಟನೆ ಮಾಡುತ್ತಿರುವುದು ಒಳ್ಳೆಯದು, ಸಿಎಎ ಕಾಯ್ದೆ ಅವರಲ್ಲಿ ಅರಿವು ಮೂಡಿಸಿದೆ: ಬಿಜೆಪಿ ನಾಯಕಿ ಸುಮಿತ್ರಾ ಮಹಾಜನ್​

    ಇಂಧೋರ್​: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವುದು ಒಳ್ಳೆಯದು ಎಂದು ಲೋಕಸಭಾ ಮಾಜಿ ಸ್ಪೀಕರ್​, ಬಿಜೆಪಿ ಹಿರಿಯ ನಾಯಕಿ ಸುಮಿತ್ರಾ ಮಹಾಜನ್​ ಹೇಳಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಎ ವಿರೋಧಿಸಿ ಹೆಚ್ಚಿನ ಮಹಿಳೆಯರು ಪ್ರತಿಭಟನೆಯನ್ನೇನೋ ಮಾಡುತ್ತಿದ್ದಾರೆ. ಅವರು ಹೋರಾಟ ಮಾಡುತ್ತಿರುವುದು ಒಳ್ಳೆಯದು. ಆದರೆ ಅವರಲ್ಲಿ ಎಷ್ಟು ಜನರಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಸರಿಯಾದ ಅರಿವು ಇದೆ? ಕಾಯ್ದೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದಾರಾ ಎಂಬುದು ಮುಖ್ಯ ಎಂದರು.

    ದೇಶದ ಯಾವುದೇ ಭಾಗ ಇರಬಹುದು. ದೆಹಲಿಯಾಗಲೀ, ಇಂಧೋರ್​ ಆಗಲಿ ಸಿಎಎ ವಿರುದ್ಧ ಎಲ್ಲೇ ಧರಣಿ, ಪ್ರತಿಭಟನೆ ನಡೆಯುತ್ತಿರಲಿ. ಅದರಲ್ಲಿ ಮುಸ್ಲಿಂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ತಮಗೇನಾದರೂ ಅನ್ಯಾಯವಾದರೆ ರಸ್ತೆಗಿಳಿದು ಹೋರಾಟ ನಡೆಸಬಹುದು, ನಮ್ಮ ಅಭಿಪ್ರಾಯಗಳನ್ನೂ ವ್ಯಕ್ತಪಡಿಸಬಹುದು ಎಂಬ ಅರಿವನ್ನು ಮುಸ್ಲಿಂ ಮಹಿಳೆಯರು ಸಿಎಎಯಿಂದ ಪಡೆದುಕೊಂಡಂತೆ ಆಯಿತು ಎಂದು ಹೇಳಿದರು.

    ಮಹಿಳೆಯರು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು ಎಂದು ನಾನು ಯಾವಾಗಲೂ ಬಯಸುತ್ತೇನೆ. ಮುಸ್ಲಿಂ ಮಹಿಳೆಯರಿಗೆ ಮನೆಯಿಂದ ಹೊರಬರುವುದೇ ಕಷ್ಟವಾಗಿತ್ತು. ಅದರಲ್ಲೂ ಪ್ರತಿಭಟನೆ ಮಾಡುವುದೆಲ್ಲ ದೂರದ ಮಾತಾಗಿತ್ತು. ಅಂಥದ್ದರಲ್ಲಿ ಈಗವರು ಹೊರಬಂದು ಜಿಂದಾಬಾದ್​-ಮುರ್ದಾಬಾದ್ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಅವರ ಸಮುದಾಯಕ್ಕೆ ಕೃತಜ್ಞತೆಗಳನ್ನು ಹೇಳಲೇಬೇಕು ಎಂದರು.

    ಮುಸ್ಲಿಂ ಮಹಿಳೆಯರು ಪಾಲ್ಗೊಂಡಿರುವ ಪ್ರತಿಭಟನೆ ಈ ದೇಶಕ್ಕೆ ಒಳ್ಳೆಯ ಫಲಿತಾಂಶವನ್ನೇ ನೀಡಲಿ. ಅವರಲ್ಲಿ ಈಗ ಮೂಡಿದ ಅರಿವು ಹೀಗೇ ಮುಂದುವರಿಯಲಿ ಎಂದು ಆಶಿಸುತ್ತೇನೆ ಎಂದು ಸುಮಿತ್ರಾ ಮಹಾಜನ್​ ಹೇಳಿದರು.
    ಅಷ್ಟೇ ಅಲ್ಲದೆ, ಪ್ರತಿಭಟನಾಕಾರರಿಗೆ ಸಿಎಎ ಬಗ್ಗೆ ಸಂಪೂರ್ಣವಾಗಿ ವಿವರಣೆ ನೀಡಲು ತಾವು ಸಿದ್ಧರಿರುವುದಾಗಿ ತಿಳಿಸಿದರು.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts