More

    ಇಂಜೆಕ್ಷನ್ ಮಾರೋದು, ಮಸಾಲೆ ದೋಸೆ ತಿನ್ನೋದೇ ತೇಜಸ್ವಿ ಸೂರ್ಯ ಕೆಲಸ!

    ಬೆಂಗಳೂರು: ತೇಜಸ್ವಿ ಸೂರ್ಯ ಒಳ್ಳೆಯ ಸಂಸದ ಆಗಲೇ ಇಲ್ಲ. ಬಿಜೆಪಿಯ ಯುವ ಮೋರ್ಚಾವನ್ನೇ ಹಾಳು ಮಾಡಿದ ಕೀರ್ತಿ ತೇಜಸ್ವಿ ಸೂರ್ಯನಿಗೆ ಸಲ್ಲಬೇಕು. ಆತನಿಗೆ ಮಸಾಲೆ ದೋಸೆ ತಿನ್ನೋದು, ಇಂಜೆಕ್ಷನ್ ಮಾರೋದು ಇಷ್ಟೇ ಕೆಲಸ ಎಂದು ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಟೀಕಾಪ್ರಹಾರ ನಡೆಸಿದ್ದಾರೆ.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗುರು ರಾಘವೇಂದ್ರ ಬ್ಯಾಂಕ್ ಅನ್ನು ಯಾವುದಾದರೂ ಬ್ಯಾಂಕ್ ಜತೆ ವಿಲೀನ ಮಾಡಿ ಬಡವರನ್ನು ಕಾಪಾಡಬಹುದಿತ್ತು. ಇದನ್ನು ಪ್ರಶ್ನಿಸಿದರೆ ಆರ್‌ಬಿಐ ಅನುಮತಿ ನೀಡಿಲ್ಲ ಎಂದು ಹೇಳುತ್ತಾರೆ. ಆದರೆ ಬೇರೆ ರಾಜ್ಯಗಳಲ್ಲಿ ಈ ಕೆಲಸ ಆಗಿದೆ. ಇಲ್ಲಿನ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಬಡವರನ್ನು ಕಾಪಾಡುವ ಬದ್ಧತೆ ಇಲ್ಲ ಎಂದರು.
    ಬಸವನಗುಡಿಯಲ್ಲಿ ತೇಜಸ್ವೀ ಸೂರ್ಯ ಮತ್ತು ಶಾಸಕ ರವಿ ಸುಬ್ರಮಣ್ಯ ಸಹಕಾರಿ ಚಿಂತನಾ- ಮಂಥನ ಕಾರ್ಯಕ್ರಮ ನಡೆಸುತ್ತಾರೆ, ಈ ಕಾರ್ಯಕ್ರಮಕ್ಕೆ ಗುರು ರಾಘವೇಂದ್ರ ಸಹಕಾರಿ ಬ್ಯಾಂಕಿನ ಸಂತ್ರಸ್ತರು ಬಂದಿದ್ದರು. ಇವರ ಮೇಲೆ ಹಲ್ಲೆ ನಡೆಸಿ, ಅವರನ್ನೇ ಗೂಂಡಾಗಳು ಎಂದು ಕರೆದಿದ್ದಾರೆ ಎಂದು ಆರೋಪಿಸಿದರು.
    ಕೆಪಿಸಿಸಿ ವಕ್ತಾರ ಶಂಕರ್ ಗುಹಾ ಮಾತನಾಡಿ, ವಿಧಾನ ಸಭೆ ಚುನಾವಣೆ ವೇಳೆ ಠೇವಣಿದಾರರಿಗೆ ಹಣ ಕೊಡಿಸುತ್ತೇನೆ ಎಂದು ಸಂಸದರು ಭರವಸೆ ಹೇಳಿದ್ದರು. ಆದರೆ ಈಗ ಏನೂ ಇಲ್ಲದಂತಾಗಿದೆ. ತೇಜಸ್ವೀ ಸೂರ್ಯ ಅವರದ್ದು ಕೇವಲ ಸುಳ್ಳಿನ ಭರವಸೆ. ಅನ್ಯಾಯಕ್ಕೆ ಒಳಗಾದ ಠೇವಣಿದಾರರನ್ನು ಗೂಂಡಾ ಎಂದು ಕರೆದಿದ್ದಾರೆ. ಇದೇನಾ ಬಿಜೆಪಿ ಸಂಸ್ಕೃತಿ ಎಂದು ಪ್ರಶ್ನಿಸಿದರು.
    ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಈಗ ಬಿಜೆಪಿ ಸರ್ಕಾರವಿದೆ, ಕಾಂಗ್ರೆಸ್ ಸರ್ಕಾರ ಇದ್ದಿದರೆ ಕಲ್ಲು ಹೊಡೆಯಬಹುದಿತ್ತು ಎಂದು ಹೇಳಿದವರು ನೀವು. ಇದು ಅಯೋಗ್ಯತನದ ಪರಮಾವಧಿ. ಸಭೆಯಲ್ಲಿ ಹಿರಿಯ ನಾಗರಿಕರಿಗೆ ಹಲ್ಲೆ ಮಾಡಿದ್ದೀರಲ್ಲ, ಯಾರು ಗೂಂಡಾ ಎಂಬುದು ಇದರಿಂದ ತಿಳಿಯುತ್ತದೆಯಲ್ಲವೇ? ಎಂದು ಪ್ರಶ್ನಿಸಿದರು.
    ವಸಿಷ್ಠ ಸೊಸೈಟಿಯ ಕಥೆಯನ್ನು ಮುಗಿಸಲಾಯಿತು. ರಾಘವೇಂದ್ರ ಮತ್ತು ವಸಿಷ್ಠ ಬ್ಯಾಂಕ್‌ಗಳ ಕಾರ್ಯಕ್ರಮಗಳಲ್ಲಿ ಮದುಮಕ್ಕಳಂತೆ ನೀವು ಮತ್ತು ನಿಮ್ಮ ಚಿಕ್ಕಪ್ಪ ರವಿ ಸುಬ್ರಮಣ್ಯ ಓಡಾಡುತ್ತಾ ಇದ್ದೀರಿ. ಬ್ಯಾಂಕ್ ಮುಳುಗಿ ಹೋದಾಗ ಅದನ್ನು 6 ತಿಂಗಳ ಕಾಲ ನಡೆಸಲು ಅಕ್ರಮ ಮಾಡಿದವರಿಗೆ ಹೇಗೆ ಅವಕಾಶ ನೀಡಲಾಯಿತು. ಅಂದಿನ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಏಕೆ ಆರೋಪಿಗಳನ್ನು ಬಂಧಿಸಲಿಲ್ಲ. ಇಲ್ಲಿ ಯಾರನ್ನು ಕಾಪಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.
    ಶೇ.75ರಷ್ಟು ಜನರಿಗೆ ಡಿಐಸಿಜಿ ಹಣ ಕೊಡಿಸಿದ್ದೇನೆ ಎಂದು ತೇಜಸ್ವಿ ಸೂರ್ಯ ಸುಳ್ಳು ಹೇಳುತ್ತಿದ್ದಾರೆ. ಇದು ಕೇವಲ 46 ಸಾವಿರದಷ್ಟು ನೇರ ಠೇವಣಿದಾರರ ಹಣವಲ್ಲ. ಸುಮಾರು 120 ಸೊಸೈಟಿಗಳು 500 ಕೋಟಿಯಷ್ಟು ಹೂಡಿಕೆ ಮಾಡಿದ್ದವು, ಒಟ್ಟಾರೆ 2 ಲಕ್ಷಕ್ಕೂ ಹೆಚ್ಚು ಜನರ ಅನ್ಯಾಯಕ್ಕೆ ಒಳಗಾಗಿದ್ದಾರೆ. ಇವರಿಗೆಲ್ಲ ಒಂದೇ ಒಂದು ರೂಪಾಯಿ ಸಿಕ್ಕಿಲ್ಲ. ವಸಿಷ್ಠ, ಗುರು ಸಾರ್ವಭೌಮ ಸೊಸೈಟಿಯ ಗ್ರಾಹಕರಿಗೆ ಏನೂ ಸಿಕ್ಕಿಲ್ಲ ಎಂದು ಹೇಳಿದರು.
    ಬಿಜೆಜೆಪಿಯಲ್ಲಿ ಯಾರು ಹೆಚ್ಚು ಸುಳ್ಳು ಹೇಳುತ್ತಾರೆಯೋ ಅವರನ್ನು ಹಂತ, ಹಂತವಾಗಿ ಎತ್ತರದ ಸ್ಥಾನಕ್ಕೆ ಕೂರಿಸಲಾಗುತ್ತದೆ. ತ್ರಿಶೂರ್‌ನಲ್ಲಿ ಕುರುವಣ್ಣೂರು ಬ್ಯಾಂಕ್‌ನಲ್ಲಿ ನಡೆದ ಹಗರಣವನ್ನು ಪ್ರಧಾನಿ ಮೋದಿ ಅಲ್ಲಿನ ಸರ್ಕಾರದ ಮೇಲೆ ಹಾಕಿದರು. ಕರ್ನಾಟಕದಲ್ಲಿ ಹಗರಣ ನಡೆದಿದ್ದು ಬಿಜೆಪಿ ಇದ್ದಾಗ. ಇದರ ಬಗ್ಗೆ ಮಾತನಾಡಿ ಮೋದಿ ಅವರೇ. ಕರ್ನಾಟಕದ ಜನರ ಬಗ್ಗೆ ನಿಮಗೆ ಕಾಳಜಿ ಇಲ್ಲವೇ? ಎಂದು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts