More

    ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಭದ್ರತೆ ನಾಮ್ ಕೇ ವಾಸ್ತೆ

    ಶಿವಮೊಗ್ಗ: ಹಲವು ಬಾರಿ ಉಗ್ರರ ಸ್ಲೀಪರ್ ಸೆಲ್ ಎನಿಸಿರುವ ಶಿವಮೊಗ್ಗದಲ್ಲಿ ನ.5ರಂದು ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಕಂಡುಬಂದ ಎರಡು ಬಾಕ್ಸ್‌ಗಳು ಭದ್ರತೆಯ ಲೋಪವನ್ನು ಎತ್ತಿಹಿಡಿದಿವೆ. ಆ ಪೆಟ್ಟಿಗೆಗಳಲ್ಲಿ ಸ್ಫೋಟಕ ಇರಲಿಲ್ಲವಾದ್ದರಿಂದ ಅದೃಷ್ಟವಶಾತ್ ಅನಾಹುತವೊಂದು ತಪ್ಪಿದಂತಾಗಿದೆ.

    ಆದರೆ ಇಡೀ ಪ್ರಕರಣ ರೈಲ್ವೆ ನಿಲ್ದಾಣ ಸುರಕ್ಷೆಯ ಲೋಪಕ್ಕೆ ಕೈಗನ್ನಡಿಯಾಗಿದೆ. ನಿಲ್ದಾಣ ಎದುರಿನ ವಾಹನ ನಿಲುಗಡೆ ಪ್ರದೇಶದಲ್ಲಿ ಆತಂಕ ಮೂಡಿಸಿದ ಬಾಕ್ಸ್ ಮಧ್ಯಾಹ್ನ 12.30ರಿಂದ ತಡರಾತ್ರಿ 3.30ರವರೆಗೂ ಇತ್ತು ಎಂಬುದೇ ನಾಗರಿಕರಲ್ಲಿ ಭಯ ಮೂಡಿಸಿದೆ.
    ಅಷ್ಟು ಸುದೀರ್ಘ ಅವಧಿಯಲ್ಲಿ ಏನಾದರೂ ಅನಾಹುತ ಸಂಭವಿಸಿದ್ದರೆ, ಪ್ರಾಣಹಾನಿ ಉಂಟಾಗಿದ್ದರೆ ಅದಕ್ಕೆ ಯಾರು ಹೊಣೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ. ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಪೊಲೀಸ್ ಮಹಾನಿರ್ದೇಶಕರನ್ನು ಸಂಪರ್ಕಿಸಿ, ಬಳಿಕ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸುವ ವೇಳೆಗೆ ಸಂಜೆಯಾಗಿತ್ತು. ಕಾರ್ಯಾಚರಣೆ ಮುಗಿಯುವ ವೇಳೆಗೆ ಬೆಳಗಿನ ಜಾವ. ಒಂದು ವೇಳೆ ಬಾಕ್ಸ್‌ನಲ್ಲಿ ಸ್ಫೋಟಕ ಇಲ್ಲವೇ ಅಪಾಯಕಾರಿ ವಸ್ತುಗಳಿದ್ದರೆ ಪ್ರಾಣಹಾನಿಯಾಗುವ ಸಂಭವವಿತ್ತು.
    ಇದುವರೆಗೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳು ನಡೆದಾಗ, ಇಲ್ಲವೇ ಬಾಂಬ್ ಭೀತಿ ಎದುರಾದಾಗ ಮಾತ್ರ ಶ್ವಾನದಳದವರು ಒಮ್ಮೆ ರೈಲ್ವೆ ನಿಲ್ದಾಣಕ್ಕೆ ತೆರಳಿ ಪರಿಶೀಲಿಸುತ್ತಿದ್ದರು. ಇದೇನು ಪ್ರತಿನಿತ್ಯದ ಭದ್ರತೆಯಾಗಿರಲಿಲ್ಲ. ತುಂಗಾ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆದ ಬಳಿಕವೂ ನಿಲ್ದಾಣದ ಸುರಕ್ಷತೆಯನ್ನು ಕಡೆಗಣಿಸಲಾಯಿತೇ ಎಂಬ ಪ್ರಶ್ನೆ ಎದುರಾಗಿದೆ.
    ಇದ್ದೂ ಇಲ್ಲದಂತಿರುವ ಸಿಸಿ ಕ್ಯಾಮರಾ!: ರೈಲ್ವೆ ನಿಲ್ದಾಣದೊಳಗೆ 21 ಸಿಸಿ ಕ್ಯಾಮರಾಗಳಿವೆ. ಅಲ್ಲಿ ಪ್ರತಿದಿನ ಪ್ರಯಾಣಿಕರ ಮೇಲೆ ನಿಗಾ ಇರಿಸುವ ವ್ಯವಸ್ಥೆಯಿಲ್ಲ. ಮೆಟಲ್ ಡಿಕ್ಟೇಟರ್ ಇದ್ದರೂ ಅದನ್ನು ತಪ್ಪಿಸಿಕೊಂಡು ನಿಲ್ದಾಣದ ಒಳಗೆ ಹೋಗುವ, ಹೊರಗೆ ಬರುವ ಮಾರ್ಗಗಳಿವೆ. ಇನ್ನು ರೈಲ್ವೆ ನಿಲ್ದಾಣದ ಹೊರಭಾಗದಲ್ಲಿರುವುದು ಬೆರಳೆಣಿಕೆಯಷ್ಟು ಸಿಸಿ ಕ್ಯಾಮರಾಗಳು ಮಾತ್ರ. ಅದರ ಗುಣಮಟ್ಟ ಅಷ್ಟಕ್ಕಷ್ಟೇ ಎಂದು ರೈಲ್ವೆ ಇಲಾಖೆ ಸಿಬ್ಬಂದಿಯೇ ಹೇಳುತ್ತಾರೆ. ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಿಸಿ ಕ್ಯಾಮರಾಗಳಿಲ್ಲ.
    ಹಲವು ಮಾರ್ಗಗಳಿವೆ: ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಬಂದು ನಗರದೊಳಕ್ಕೆ ತೆರಳಲು ಕೆಇಬಿ ವೃತ್ತಕ್ಕೆ ಬರಬೇಕೆಂದಿಲ್ಲ. ಗೂಡ್ಸ್‌ಶೆಡ್ ಮೂಲಕವೂ ನಗರದೊಳಕ್ಕೆ ಬರಬಹುದು. ವಿನಾಯಕ ನಗರ ರಸ್ತೆ ಮೂಲಕವೂ ಸಿಸಿ ಕ್ಯಾಮರಾಗಳ ಕಣ್ತಪ್ಪಿಸಿ ನಗರದೊಳಕ್ಕೆ ಬರಬಹುದು. ಹೀಗಾಗಿ ರೈಲ್ವೆ ನಿಲ್ದಾಣದಲ್ಲಿ ಸುರಕ್ಷತೆಗೆ ಇನ್ನಷ್ಟು ಒತ್ತು ನೀಡಬೇಕಾಗಿದ್ದು ಅನಿವಾರ್ಯ. ಕಳೆದ ಕೆಲವು ವರ್ಷಗಳಿಂದ ಶಿವಮೊಗ್ಗದಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ನಿಲ್ದಾಣದಲ್ಲಿ ಆಧುನಿಕ ಭದ್ರತೆಯ ಅವಶ್ಯವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts