More

    ದ.ಕ.ದಲ್ಲಿ ಕರೊನಾ ಜಾಗ್ರತೆ ಬಿಗು

    ಮಂಗಳೂರು: ಗಡಿನಾಡು ಕಾಸರಗೋಡಿನಲ್ಲಿ ಕರೊನಾ ಸೋಂಕು ಪಾಸಿಟಿವ್ ಪ್ರಕರಣ ಪತ್ತೆ ಹಾಗೂ ಕರ್ನಾಟಕದ ಇತರ ಕಡೆಗಳಲ್ಲಿ ರೋಗ ದೃಢಪಟ್ಟ ಪ್ರಕರಣಗಳು ಅಧಿಕಗೊಂಡ ಹಿನ್ನೆಲೆಯಲ್ಲಿ ರೋಗ ವ್ಯಾಪಿಸುವುದನ್ನು ತಡೆಯಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಮಂಗಳವಾರ ಮತ್ತಷ್ಟು ಬಿಗು ಕ್ರಮಗಳನ್ನು ಕೈಗೊಂಡಿದೆ.
    ದ.ಕ. ಜಿಲ್ಲಾಡಳಿತ ಜಿಲ್ಲಾದ್ಯಂತ ಸಿಆರ್‌ಪಿಸಿ ಸೆ.144 (3)ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ನಿರ್ಬಂಧ ವಿಧಿಸಿದೆ.
    ಸಾರ್ವಜನಿಕರು ಗುಂಪಾಗಿ ಸೇರುವುದು ಮತ್ತು ಹೆಚ್ಚು ಓಡಾಟ ನಡೆಸುವುದನ್ನು ತಡೆಯಲು ಹಿಂದಿಗಿಂತಲೂ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಂಗಳವಾರ ನಗರದಲ್ಲಿ ಮೈಸೂರು ವಿಭಾಗ ಮಟ್ಟದ ಆರೋಗ್ಯ ಅಧಿಕಾರಿಗಳ ಸಭೆ ನಡೆಸಿ ತೆರಳಿದ ಬಳಿಕ ಸಾಯಂಕಾಲ ಮತ್ತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಹೊಸ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ. ಕೇರಳ-ಕರ್ನಾಟಕ ಗಡಿಯ ತಲಪಾಡಿಯಲ್ಲಿ ಮಂಗಳವಾರ ಆರೋಗ್ಯ ಕಾರ್ಯಕರ್ತರು ಜನರ ಆರೋಗ್ಯ ತಪಾಸಣೆ ಆರಂಭಿಸಿದ್ದಾರೆ.

    ವಿನಾಯಿತಿ ಇಲ್ಲ: ಎಲ್ಲ ಧಾರ್ಮಿಕ ಧರ್ಮಗುರುಗಳನ್ನು ಸಂಪರ್ಕಿಸಿ ಕರೊನಾ ಬಗ್ಗೆ ಜನಜಾಗೃತಿಗೆ ಕೋರಲು ತೀರ್ಮಾನಿಸಲಾಗಿದೆ. ಜಿಲ್ಲೆಯಲ್ಲಿ ಯಕ್ಷಗಾನ ಕಾರ್ಯಕ್ರಮ ಮುಂದೂಡಲು ಸೂಚಿಸಲಾಗಿದೆ. ಉತ್ಸವ ಜಾತ್ರೆಗಳಲ್ಲಿ ದೇವಸ್ಥಾನ ಸಿಬ್ಬಂದಿಗೆ ಮಾತ್ರ ಭಾಗವಹಿಸಲು ಅವಕಾಶ. ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತೀರ್ಮಾನಿಸಲಾಗಿದೆ. ಸರ್ಕಾರದ ಆದೇಶದ ಬಳಿಕ ಜಾತ್ರೆ, ಯಕ್ಷಗಾನ ಸಹಿತ ಕೆಲವು ವಿಚಾರಗಳಲ್ಲಿ ಈ ಹಿಂದೆ ದಕ್ಷಿಣ ಕನ್ನಡದಲ್ಲಿ ಸ್ವಲ್ಪ ರಿಯಾಯಿತಿ ಒದಗಿಸಲಾಗಿತ್ತು. ಅಧಿಕಾರಿಗಳ ತಂಡ ವಿದೇಶದಿಂದ ಆಗಮಿಸಿದವರ ಮನೆಗಳಿಗೆ ತೆರಳಿ ನಿಗದಿತ ಅವಧಿಯ ತನಕ ಅವರು ಮನೆಯಲ್ಲಿಯೇ ಇರುವಂತೆ ಸೂಚಿಸಲಿದೆ ಮತ್ತು ಅವರ ಆರೋಗ್ಯದ ಸ್ಥಿತಿಗತಿ ಬಗ್ಗೆೆ ನೀಗಾ ಇಡಲಿದೆ.

    ಎಲ್ಲರ ಕ್ವಾರಂಟೈನ್: ಕರೊನಾ ಪಾಸಿಟಿವ್ ಕಂಡುಬಂದ ಕಾಸರಗೋಡು ವ್ಯಕ್ತಿ ಪ್ರಯಾಣಿಸಿದ ವಿಮಾನದಲ್ಲಿ ಜಿಲ್ಲೆಗೆ ಆಗಮಿಸಿದ ಎಲ್ಲ ಪ್ರಯಾಣಿಕರನ್ನು ಸಂಪರ್ಕಿಸಲಾಗಿದ್ದು, ಅವರಿಗೆ ಮನೆಯಲ್ಲಿಯೇ ಇರುವಂತೆ (ಕ್ವಾರಂಟೈನ್) ಸೂಚಿಸಲಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡ ಈ ವಿಮಾನದಲ್ಲಿ ಆಗಮಿಸಿದ ಎಲ್ಲ ಮನೆಗಳಿಗೆ ತೆರಳಿ ಅವರ ಆರೋಗ್ಯ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ. ಭಾರತ ಸರ್ಕಾರದ ಕಳೆದ ಮಾ.16 ರಂದು ನೀಡಿದ ನಿರ್ದೇಶನದಂತೆ ಯುಎಇ, ಕತಾರ್, ಒಮಾನ್, ಕುವೈತ್ ದೇಶಗಳಿಂದ ಆಗಮಿಸುವ ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ 14 ದಿನ ಮನೆಯಲ್ಲೇ ಇರುವುದನ್ನು ಖಚಿತಪಡಿಸಲಾಗುವುದು. ಈ ಬಗ್ಗೆ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರು ಹಾಗೂ ಅವರ ಕುಟುಂಬ ಸದಸ್ಯರು ಸಹಕರಿಸುವಂತೆ ಜಿಲ್ಲಾಡಳಿತ ಕೋರಿದೆ.

    ದೇವಸ್ಥಾನಗಳಲ್ಲಿ ಸೇವೆ ಇಲ್ಲ: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ, ಸೇವೆಗೆ ಅವಕಾಶ ಇಲ್ಲ, ವಿಶೇಷ ಪೂಜೆ ಹೋಮ ಹವನಕ್ಕೆ ಕೂಡಾ ಅವಕಾಶ ನೀಡಲಾಗುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ ಸಭೆಯಲ್ಲಿ ತಿಳಿಸಿದರು.
    ಈ ನಿಯಮ ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಎಲ್ಲ ದೇವಾಲಯಗಳಿಗೂ ಅನ್ವಯಿಸಲಾಗುತ್ತಿದ್ದು, ಇಂದಿನಿಂದಲೇ ಜಾರಿಗೆ ಬರಲಿದೆ. ಅದೇ ರೀತಿ ಜನರು ದೇವರ ದರ್ಶನ ಮಾಡಿ ತೆರಳಬೇಕು ಹೊರತು, ದೇವಸ್ಥಾನದ ಛತ್ರಗಳಲ್ಲಿ ಉಳಿದುಕೊಳ್ಳದಂತೆಯೂ ಸೂಚನೆ ನೀಡಲಾಗಿದೆ. ದೇವಸ್ಥಾನ ಮಾತ್ರವಲ್ಲ, ಮಂದಿರ ಮಸೀದಿಯಲ್ಲೂ ಜನರು ಸ್ವಯಂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ ಎಂದರು.

    ಮಂಗ್ಳೂರಲ್ಲಿ ಕೊರೊನಾ ಲ್ಯಾಬ್: ಕೊರೊನಾ ಶಂಕಿತರ ಗಂಟಲ ದ್ರವ ಪರೀಕ್ಷಿಸುವ ಪ್ರಯೋಗಾಲಯವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಆರಂಭಿಸಲು ಸರ್ಕಾರ ಒಪ್ಪಿದ್ದು, ಶೀಘ್ರ ಕಾರ್ಯಾರಂಭ ಮಾಡಲಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀನಿವಾಸಲು ತಿಳಿಸಿದರು.
    ಕರೊನ ಸೋಂಕು ದೃಢಪಡಿಸಲು ಹಾಗೂ ಚಿಕಿತ್ಸೆ ಒದಗಿಸಲು ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ನಿಗದಿಪಡಿಸಿರುವ ಪ್ರತ್ಯೇಕ ಐಸೊಲೇಟೆಡ್ ವಾರ್ಡ್‌ಗಳಿಗೆ ಮಂಗಳವಾರ ಭೇಟಿ ನೀಡಿದರು.

    ಬಳಿಕ ಡಿಎಂಒ ಕಚೇರಿಯಲ್ಲಿ ಸಭೆ ನಡೆಸಿದ ಸಚಿವರು, ಕರೊನಾ ಸೋಂಕು ತಡೆಗೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲು ಸರ್ಕಾರ ಸಿದ್ಧವಿದ್ದು, ಮುತುವರ್ಜಿ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಹಿರಿಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲೆಯಲ್ಲಿ ಕರೊನಾ ಶಂಕಿತರ ಮೇಲೆ ನಿಗಾ ವಹಿಸಲು ವೆನ್‌ಲಾಕ್‌ನಲ್ಲಿ 10 ಕೊಠಡಿ, ತಾಲೂಕುಮಟ್ಟದ ಸಂಸ್ಥೆಗಳಲ್ಲಿ 167 ನಿಗಾ ಕೊಠಡಿಗಳು ಲಭ್ಯವಿದೆ. ಪ್ರತ್ಯೇಕತೆಗೆ ಸಂಬಂಧಿಸಿ ವೆನ್ಲಾಕ್‌ನಲ್ಲಿ 6, ತಾಲೂಕುಮಟ್ಟದ ಸಂಸ್ಥೆಗಳಲ್ಲಿ 120 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 130 ಕೊಠಡಿಗಳು ಲಭ್ಯ ಎಂದವರು ಸುದ್ದಿಗಾರರಿಗೆ ವಿವರ ನೀಡಿದರು. ವಿದೇಶ ಪ್ರಯಾಣ ಮುಗಿಸಿ ಆಗಮಿಸುವವರು ಕರೊನಾ ಆತಂಕದಿಂದ ಮಾನಸಿಕವಾಗಿ ಕುಗ್ಗಿದ್ದಾರೆ. ಇಂತವರಲ್ಲಿ ವಿಶ್ವಾಸ, ಭರವಸೆ ತುಂಬಲು ಆಪ್ತ ಸಮಾಲೋಚಕರ ನೆರವು ಪಡೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ತಿಳಿಸಿದರು. ನಿವಾಸಿ ವೈದ್ಯಾಧಿಕಾರಿ ಡಾ.ಜೂಲಿಯಾನ ಸಲ್ದಾನ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಜೇಶ್, ಡಾ.ಸಿಕಂದರ್ ಪಾಶಾ ಸಹಿತ ವಿವಿಧ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts