More

    ನೋಂದಾಯಿತರಿಗೆ ಆ.12ರೊಳಗೆ ದ್ವಿತೀಯ ಪಿಯು ಪ್ರ್ಯಾಕ್ಟಿಕಲ್ ಎಕ್ಸಾಂ

     ಭರತ್ ಶೆಟ್ಟಿಗಾರ್, ಮಂಗಳೂರು

    ಮಂಗಳೂರು: ದ್ವಿತೀಯ ಪಿಯುಸಿ ಇಲಾಖೆ ಘೋಷಿಸಿದ ಫಲಿತಾಂಶ ತೃಪ್ತಿಕರವಿಲ್ಲದೆ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳಿಗೆ ಆ.19ರಿಂದ ಪರೀಕ್ಷೆ ನಡೆಸಲು ಇಲಾಖೆ ನಿರ್ಧರಿಸಿದ್ದು, ಪ್ರಾಯೋಗಿಕ ಪರೀಕ್ಷೆ ಅಗತ್ಯವಿರುವ ವಿಷಯಗಳಿಗೆ ಆ.12ರೊಳಗೆ ಕಾಲೇಜು ಹಂತದಲ್ಲೇ ಪರೀಕ್ಷೆ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

    ಫಲಿತಾಂಶ ತಿರಸ್ಕರಿಸಿ ವಿಷಯವಾರು ಪರೀಕ್ಷೆಗೆ ನೋಂದಾಯಿಸಿರುವ ಹೊಸ ವಿದ್ಯಾರ್ಥಿಗಳು(ರೆಗ್ಯುಲರ್) ಮಾತ್ರವೇ ಈ ಪ್ರಾಯೋಗಿಕ ಪರೀಕ್ಷೆ ಹಾಜರಾಗಲು ಅವಕಾಶ. ಅದರಲ್ಲೂ ಪ್ರಾಯೋಗಿಕ ಪರೀಕ್ಷಾ ಅಂಕ ಹಿಂದಿನ ಘೋಷಿತ ಫಲಿತಾಂಶದ್ದೇ ಸಾಕು ಎನ್ನುವವರು ಪರೀಕ್ಷೆಯಿಂದ ಹೊರಗುಳಿಯಬಹುದು. ಪುನರಾವರ್ತಿತ ಅಭ್ಯರ್ಥಿಗಳಿಗೆ ಈಗಾಗಲೇ ಘೋಷಿತ ಫಲಿತಾಂಶದಲ್ಲಿ ನೀಡಿರುವ ಪ್ರಾಯೋಗಿಕ ಅಂಕವೇ ಅಂತಿಮ, ಮತ್ತೆ ಪರೀಕ್ಷೆ ಬರೆಯುವ ಅವಕಾಶವಿಲ್ಲ.

    *ಪ್ರಾಕ್ಟಿಕಲ್‌ನಲ್ಲಿ ಕಡಿಮೆ ಅಂಕ: ವಿಜ್ಞಾನ ವಿಭಾಗದ ವಿವಿಧ ವಿಷಯಗಳು, ವಾಣಿಜ್ಯ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ಆಯ್ಕೆ ಮಾಡಿದವರು, ಫ್ರೆಂಚ್ ಭಾಷೆ, ಆಟೋಮೊಬೈಲ್ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ. ಫ್ರೆಂಚ್‌ಗೆ 20 ಅಂಕ, ಇತರ ವಿಷಯಗಳಲ್ಲಿ ಪ್ರ್ಯಾಕ್ಟಿಕಲ್‌ಗೆ 30 ಅಂಕ ಈ ಹಿಂದಿನಂತೆ ನಿಗದಿಪಡಿಸಲಾಗಿದೆ. ಘೋಷಿತ ಫಲಿತಾಂಶ ಪ್ರಥಮ ಪಿಯು ಅಂಕದ ಆಧಾರದಲ್ಲಿ ನೀಡಿರುವುದರಿಂದ ಬಹಳಷ್ಟು ವಿದ್ಯಾರ್ಥಿಗಳು ಪ್ರ್ಯಾಕ್ಟಿಕಲ್‌ನಲ್ಲಿ ಕಡಿಮೆ ಅಂಕ ಪಡೆದಿದ್ದಾರೆ. ಶೇ.ನೂರು ಅಂಕ ಪಡೆಯುವ ಅವಕಾಶ ಇರುವುದರಿಂದ ಪರೀಕ್ಷೆ ಬರೆದು ಅಂಕವನ್ನು ಉತ್ತಮಪಡಿಸಿಕೊಳ್ಳುವ ಚಿಂತನೆ ವಿದ್ಯಾರ್ಥಿಗಳದ್ದು ಎನ್ನುತ್ತಾರೆ ಮಂಗಳೂರಿನ ಕಿಟ್ಟೆಲ್ ಮೆಮೋರಿಯಲ್ ಪಪೂ ಕಾಲೇಜು ಪ್ರಾಂಶುಪಾಲ ವಿಠಲ್.

    14ರೊಳಗೆ ಫಲಿತಾಂಶ ಬೆಂಗಳೂರಿಗೆ: ಈ ಹಿಂದೆ ವಿವಿಧ ಅಕ್ಕಪಕ್ಕದ ಕಾಲೇಜುಗಳಲ್ಲಿ ಪರೀಕ್ಷೆ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಕಾಲೇಜು ಹಂತದಲ್ಲೇ ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಕಾಲೇಜಿನಲ್ಲಿ ವಿಷಯಕ್ಕೆ ಸಂಬಂಧಿಸಿದ ಪ್ರಾಧ್ಯಾಪಕರು ಇಲ್ಲದಿದ್ದರೆ ಹತ್ತಿರದ ಕಾಲೇಜಿನ ಉಪನ್ಯಾಸಕರನ್ನು ನಿಯೋಜಿಸಬಹುದು. ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಕೇಂದ್ರ ಕಚೇರಿ ಗಣಕ ಶಾಖೆಯಲ್ಲಿ ದಾಖಲಿಸಬೇಕು. ಆದುದರಿಂದ ಪರೀಕ್ಷೆಯ ಅಂಕ ಪಟ್ಟಿ ಹಾಗೂ ಉತ್ತರ ಪತ್ರಿಕೆಗಳನ್ನು ಆ.13ರೊಳಗೆ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಕಳುಹಿಸಿ, ಅಲ್ಲಿಂದ ಆ.14ರೊಳಗೆ ಬೆಂಗಳೂರಿನ ಪಪೂ ಶಿಕ್ಷಣ ಇಲಾಖೆಗೆ ತಲುಪಿಸುವಂತೆ ಸೂಚನೆ ನೀಡಲಾಗಿದೆ.

    ಪ್ರ್ಯಾಕ್ಟಿಕಲ್ ಅಗತ್ಯವಿರುವ ವಿಷಯಗಳಿಗೆ ಕಾಲೇಜು ಮಟ್ಟದಲ್ಲೇ ಪ್ರಾಯೋಗಿಕ ಪರೀಕ್ಷೆ ನಡೆಸಲು ಇಲಾಖೆ ಸೂಚನೆ ನೀಡಿದೆ. ವಿಜ್ಞಾನ ವಿಭಾಗ ಮತ್ತು ಕಂಪ್ಯೂಟರ್ ಸೈನ್ಸ್ ಆಯ್ಕೆ ಮಾಡಿರುವ ಕಾಮರ್ಸ್ ವಿದ್ಯಾರ್ಥಿಗಳೂ ಪರೀಕ್ಷೆಗೆ ಹಾಜರಾಗಬೇಕಿದೆ. ಮಾಹಿತಿಗೆ ವಿದ್ಯಾರ್ಥಿಗಳು ತಮ್ಮ ಕಾಲೇಜು ಕಚೇರಿಯನ್ನು ಸಂಪರ್ಕಿಸಬಹುದು.

    ಮ್ಯಾರಿಯೇಟ್ ಮಸ್ಕರೇನಸ್
    ದ.ಕ ಜಿಲ್ಲೆ, ಪಪೂ ಇಲಾಖೆ ಉಪನಿರ್ದೇಶಕಿ (ಪ್ರಭಾರ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts