More

    ಶುಭ ಕಾರ್ಯದ ಮುಹೂರ್ತಕ್ಕಾಗಿ ಶೋಧ!

    ಗುತ್ತಲ: ಹಲವು ಧಾರ್ವಿುಕ ಸಂಪ್ರದಾಯ, ಆಚರಣೆ ಹಾಗೂ ಕಟ್ಟುಪಾಡುಗಳಿಗೆ ಹೆಸರುವಾಸಿಯಾಗಿರುವ ಗುತ್ತಲದಲ್ಲಿ 2022ರ ಏ. 14ರೊಳಗೆ ಮಾತ್ರ ಶುಭ ಕಾರ್ಯಗಳು. ನಂತರ ಒಂದು ವರ್ಷ ನಿಷೇಧ. ಹೀಗಾಗಿ, ಪಟ್ಟಣದಲ್ಲಿ ಜನರು ವಿವಿಧ ಶುಭ ಕಾರ್ಯಗಳಿಗೆ ಈಗಾಗಲೇ ಮುಹೂರ್ತಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

    ಪಟ್ಟಣದ ಗ್ರಾಮದೇವಿ ಜಾತ್ರೆಯನ್ನು 5 ವರ್ಷಕ್ಕೊಮ್ಮೆ ಆಚರಿಸಲಾಗುತ್ತದೆ. 2017ರಂದು ನಡೆದ ಜಾತ್ರೆಯನ್ನು 2022ರ ಏ. 14ರೊಳಗೆ ಮಾಡಬೇಕಾಗಿದೆ. ಇಲ್ಲದಿದ್ದರೆ 9 ವರ್ಷಗಳವರೆಗೆ ಜಾತ್ರೆ ಮಾಡುವಂತಿಲ್ಲ ಎಂಬ ಕಟ್ಟುಪಾಡಿದೆ. ಈ ಕಾರಣಕ್ಕಾಗಿ ಈ ವರ್ಷ ಕಾರ್ತಿಕ ಮಾಸದಲ್ಲಿ ಗ್ರಾಮದೇವಿ ಕಾರ್ತಿಕೋತ್ಸವದಂದು ಜಾತ್ರೆ ದಿನ ನಿಗದಿಯಾಗಲಿದೆ.

    ಕಳೆದ ಮಾರ್ಚ್​ನಿಂದ ಕರೊನಾ ಭಯದಲ್ಲಿರುವ ಜನರಿಗೆ ಮುಂದಿನ ಜಾತ್ರೆ ನಡೆಯುವ ವೇಳೆಗೆ ಸೋಂಕು ನಿವಾರಣೆಯಾಗುವ ಭರವಸೆಯಿದೆ. ಹಾಗಾಗಿ, ಪುರವಾಸಿಗಳು ಮದುವೆ, ಗೃಹ ಪ್ರವೇಶ, ಮನೆ-ವಾಣಿಜ್ಯ ಕಟ್ಟಡ ಕಟ್ಟಲು ಭೂಮಿಪೂಜೆ, ಅಪೂರ್ಣಗೊಂಡ ಕಟ್ಟಡಗಳನ್ನು ಪೂರ್ಣಗೊಳಿಸಿ ಗೃಹ ಪ್ರವೇಶ ಮಾಡುವ ತರಾತುರಿಯಲ್ಲಿದ್ದಾರೆ.

    ಈಗಾಗಲೇ ಗ್ರಾಮದೇವಿ ದೇವಸ್ಥಾನ ಗೋಪುರ ಶೃಂಗರಿಸಲಾಗಿದೆ. ಕಳೆದ ಬಾರಿ ಜಾತ್ರೆಯಲ್ಲಿ ನೂತನ ಗೋಪುರ ಕಳಸಾರೋಹಣ ನೆರವೇರಿತ್ತು. ಈ ಬಾರಿ ದೇವಸ್ಥಾನ ಅಲಂಕಾರಕ್ಕೆ ಅಷ್ಟೊಂದು ಸಮಯ ಹಿಡಿಯುವುದಿಲ್ಲ. ಜಾತ್ರೆಯನ್ನು ಮುಂದಿನ ವರ್ಷ ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ಆಚರಿಸಬೇಕು ಎಂಬ ಮಾತು ಸಾರ್ವಜನಿಕರು ಹಾಗೂ ಭಕ್ತರಿಂದ ಕೇಳಿ ಬರುತ್ತಿವೆ.

    ವಧು-ವರರ ಅನ್ವೇಷಣೆ ಕಾರ್ಯ ಪಟ್ಟಣದಲ್ಲಿ ಜೋರಾಗಿದೆ. ಜಾತ್ರೆಯೊಳಗೆ ಮದುವೆಗಳನ್ನು ನೆರವೇರಿಸುವ ಯೋಜನೆ ಹಲವರದ್ದು. ಇನ್ನು ಕೆಲವರು ಅಷ್ಟರೊಳಗೆ ಮದುವೆ ಆದರೆ ಆಗಲಿ, ಇಲ್ಲದಿದ್ದರೆ ಬೇರೆ ಊರಿನ ಕಲ್ಯಾಣ ಮಂಟಪ ಅಥವಾ ವಧು/ವರನ ಮನೆಯಲ್ಲಿ ಮದುವೆ ಮಾಡಿದರಾಯ್ತು ಎಂದುಕೊಂಡಿದ್ದಾರೆ. ಉಳಿದಂತೆ ಜಾತ್ರೆಗೆ ಮುನ್ನ ತಮ್ಮ ಮನೆಗಳಲ್ಲಿ ಶುಭ ಕಾರ್ಯಗಳು ಜರುಗಲಿ, ಇಲ್ಲದಿದ್ದರೆ ಒಂದು ವರ್ಷ ಮಾಡಲಾಗಲ್ಲ ಎಂಬ ಕಾರಣಕ್ಕಾಗಿ ಎಲ್ಲ ಸಮುದಾಯಗಳ ಜನರು ಶುಭ ಸಮಾರಂಭ ಮಾಡಲು ಕ್ರಿಯಾಶೀಲರಾಗಿದ್ದಾರೆ.

    ಒಟ್ಟಿನಲ್ಲಿ ಜಾತ್ರೆಗೆ ಅಂಕಿ ಹಾಕಿದ ದಿನದಿಂದ ಜಾತ್ರೆ ಮುಗಿಯುವವರೆಗೂ ಹಲವು ಕಟ್ಟುಪಾಡು/ ಸಂಪ್ರದಾಯಗಳನ್ನು ಆಚರಿಸುವ ಪಟ್ಟಣದ ಜನತೆ ಜಾತ್ರೆ ನಂತರ ಶುಭ ಕಾರ್ಯಗಳಿಗೆ ನಿಷೇಧ ಇರುವ ಕಾರಣ ಅದನ್ನು ಅನಾದಿ ಕಾಲದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಆರ್ಥಿಕ ಹೊರೆ ತಪ್ಪಿಸಲು ಜಾತ್ರೆಗೆ ಮುನ್ನ ಕೆಲವು ತಿಂಗಳ ಮೊದಲೇ ಶುಭ ಕಾರ್ಯಗಳನ್ನು ಮಾಡಿ ನಂತರ ಜಾತ್ರೆಯನ್ನು ಅದ್ದೂರಿಯಾಗಿ ನೆರವೇರಿಸುವ ಯೋಜನೆಯ ಕೆಲವರದ್ದಾಗಿದೆ. ಒಟ್ಟಿನಲ್ಲಿ ಗ್ರಾಮದೇವಿ ಜಾತ್ರೆಗೆ ಒಂದು ವರ್ಷ ಮುಂಚಿತವಾಗಿ ಪಟ್ಟಣ ಸಜ್ಜಾಗುತ್ತಿರುವುದು ಮಾತ್ರ ಸುಳ್ಳಲ್ಲ.

    ಸಂಪ್ರದಾಯದಂತೆ ಗ್ರಾಮದೇವಿ ಜಾತ್ರೆ ದಿನಾಂಕವನ್ನು ಬರುವ ಗ್ರಾಮದೇವಿ ಕಾರ್ತಿಕೋತ್ಸವ ದಿನ ಎಲ್ಲರ ಸಮ್ಮುಖದಲ್ಲಿ ನಿಗದಿ ಪಡಿಸಲಾಗುವುದು. 2022ರ ಏ. 14ರೊಳಗೆ ಜಾತ್ರೆ ಮಾಡಲಾಗುವುದು.

    | ಅಜ್ಜಪ್ಪ ತರ್ಲಿ

    ಗುತ್ತಲ ಗ್ರಾಮದೇವಿ ದೇವಸ್ಥಾನ ಅಧ್ಯಕ್ಷ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts