More

    ಎರಡು ಸ್ಕ್ಯಾನಿಂಗ್ ಕೇಂದ್ರಗಳಿಗೆ ಬೀಗಮುದ್ರೆ

    ನಾಗಮಂಗಲ: ಅಗತ್ಯ ದಾಖಲೆ ಒದಗಿಸದ ಕಾರಣ ಉಪವಿಭಾಗಾಧಿಕಾರಿ ನಂದೀಶ್ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ನೇತೃತ್ವದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎದುರಿನ ಕಾವೇರಿ ಡಯಾಗ್ನೋಸ್ಟಿಕ್ ಸೆಂಟರ್ ಹಾಗೂ ಲಕ್ಷ್ಮೀ ಡಯಾಗ್ನೋಸ್ಟಿಕ್ ಸೆಂಟರ್‌ಗಳ ಸ್ಕ್ಯಾನಿಂಗ್ ಕೇಂದ್ರಗಳಿಗೆ ಮಂಗಳವಾರ ಬೀಗಮುದ್ರೆ ಹಾಕಲಾಯಿತು.

    ಸೆಂಟರ್‌ಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ ಸ್ಕಾೃನಿಂಗ್ ದಾಖಲಾತಿ ಪುಸ್ತಕ ಹಾಗೂ ಸ್ಕ್ಯಾನಿಂಗ್ ಯಂತ್ರದಲ್ಲಿರುವ ಮಾಹಿತಿಗಳಿಗೆ ಹೊಂದಾಣಿಕೆ ಕಂಡು ಬರಲಿಲ್ಲ. ಈ ಬಗ್ಗೆ ತಂಡ ಸಂಪೂರ್ಣ ಮಾಹಿತಿ ಕೇಳಿದಾಗ ಮಾಹಿತಿ ನೀಡುವಲ್ಲಿ ಸಿಬ್ಬಂದಿ ವಿಫಲರಾದರು. ಈ ಸಂದರ್ಭ ಅಧಿಕಾರಿಗಳು ಸ್ಕ್ಯಾನಿಂಗ್ ಯಂತ್ರವನ್ನು ಪರಿಶೀಲಿಸಿದಾಗ, ಲಕ್ಷ್ಮೀ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ 2 ವರ್ಷಗಳ ಮಾಹಿತಿಯನ್ನು ಡಿಲೀಟ್ ಮಾಡಿರುವುದು ಹಾಗೂ ಕಾವೇರಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ 3 ತಿಂಗಳ ಸ್ಕ್ಯಾನಿಂಗ್ ಮಾಹಿತಿಯನ್ನು ಯಂತ್ರದಿಂದ ಡಿಲೀಟ್ ಮಾಡಿರುವುದು ಬೆಳಕಿಗೆ ಬಂತು. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಸಿಬ್ಬಂದಿ ಹಾಗೂ ವೈದ್ಯರಿಂದ ಮಾಹಿತಿ ಕೇಳಿದ ಸಂದರ್ಭ ಮಾಹಿತಿ ನೀಡಲು ವಿಫಲರಾದ್ದರಿಂದ ಎರಡೂ ಕೇಂದ್ರಗಳಿಗೆ ಬೀಗಮುದ್ರೆ ಹಾಕಿದರು.

    ಉಡಾಫೆಯಾಗಿ ವರ್ತಿಸಿದ ವೈದ್ಯ: ಉಪವಿಭಾಗಾಧಿಕಾರಿ ನಂದೀಶ್ ನೇತೃತ್ವದ ಅಧಿಕಾರಿಗಳ ತಂಡ ಕಾವೇರಿ ಡಯಾಗ್ನೋಸ್ಟಿಕ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲನೆಗೆ ಮುಂದಾದಾಗ ಸ್ಕ್ಯಾನಿಂಗ್ ಮಾಡುತ್ತಿದ್ದ ವೈದ್ಯ ಡಾ.ರಸ್ವಿನ್ ಪಿಂಟೋ ಅಧಿಕಾರಿಗಳಿಗೆ ಸ್ಪಂದಿಸದೆ ಬೇಜವಾಬ್ದಾರಿಯಾಗಿ ವರ್ತಿಸಿದರು. ಅಲ್ಲದೆ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಸರಿಯಾದ ಮಾಹಿತಿ ನೀಡದೆ ಉಡಾಫೆಯಾಗಿ ವರ್ತಿಸಿದರು.

    ನೀವು ಯಂತ್ರ ತೆಗೆದುಕೊಂಡು ಹೋಗುತ್ತೀರಾ ಹೋಗಿ.. ನಾನು ಎಲ್ಲಿ ಮಾತನಾಡಬೇಕು ಅಲ್ಲಿ ಮಾತನಾಡುತ್ತೇನೆ ಎಂದು ಅಧಿಕಾರಿಗಳ ಎದುರು ದುಂಡಾವರ್ತನೆ ಪ್ರದರ್ಶಿಸಿ ಯಾವುದೇ ಮಾಹಿತಿ ನೀಡದೆ ಹೊರಟುಹೋದರು. ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ, ಆರೋಗ್ಯ ಪರಿವೀಕ್ಷಕರಾದ ಸಿದ್ದಲಿಂಗಪ್ಪ ಮತ್ತು ಚಿಕ್ಕಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts