More

    ಉತ್ತಮ ಗುಣ ಬೆಳೆಸುವ ಸ್ಕೌಟ್ಸ್, ಗೈಡ್ಸ್: ಜಿಲ್ಲಾ ಶಾಖೆಯ ಕಮಿಷನರ್ ನಾಗಮ್ಮ ಅಭಿಮತ

    ಮಂಡ್ಯ: ಪ್ರಸ್ತುತ ದಿನಗಳಲ್ಲಿ ಅಂಗನವಾಡಿ ಹಂತದಿಂದಲೇ ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ನೀತಿ ಕಲಿಕೆಗೆ ಸರ್ಕಾರ ಮುಂದಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಶಾಖೆಯ ಕಮಿಷನರ್ ನಾಗಮ್ಮ ಹೇಳಿದರು.
    ನಗರದ ಬಾಲಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಶಾಖೆ ಆಯೋಜಿಸಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ 3 ದಿನಗಳ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ಮಗುವಿಗೆ ಮನೆಯೇ ಮೊದಲ ಪಾಠಶಾಲೆಯಾಗಿ ನಂತರ ಅಂಗನವಾಡಿ ಕಲಿಕಾ ಕೇಂದ್ರದಲ್ಲಿ ಅಕ್ಷರ ಅಭ್ಯಾಸ ಮಾಡಲು ಮುಂದಾಗುತ್ತಾರೆ. ಅಂಗನವಾಡಿ ಕಾರ್ಯಕರ್ತೆಯರು 2ನೇ ತಾಯಿ, ಟೀಚರ್ ಆಗಿ ನಿಲ್ಲುತ್ತಾರೆ. ಬೆಳೆಯುವ ಮಕ್ಕಳಿಗೆ ಸಾಂಸ್ಕೃತಿಕ ಕಲಿಕಾ ಕೌಶಲತೆಯಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನೀತಿಗಳನ್ನು ಕಲಿಸಿದರೆ ಉತ್ತಮ ಗುಣಗಳನ್ನು ಬೆಳೆಸಲು ಪ್ರೇರಣೆಯಾಗುತ್ತದೆ ಎಂದು ನುಡಿದರು.
    ಜಿಲ್ಲಾ ಶಾಖೆಯ ಎಡಿಸಿ ನಾಗರೇವಕ್ಕ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಪಠ್ಯ ಪುಸ್ತಕ ಓದುವುದರಿಂದ ಮಕ್ಕಳು ಪ್ರಗತಿಯಾಗುವುದಿಲ್ಲ. ಪ್ರಕೃತಿ ಮಡಿಲಲ್ಲಿ ಅಲೆಯಬೇಕು. ಬೆಟ್ಟ ಹತ್ತಬೇಕು. ನದಿಯಲ್ಲಿ ಈಜಬೇಕು. ಎಲ್ಲ ಭಾಷೆ ಸಂಸ್ಕೃತಿ ಮಕ್ಕಳೊಂದಿಗೆ ಬೇರೆಯಬೇಕು. ಇದರ ಜತೆಯಲ್ಲಿ ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವದಂಥ ಶಿಕ್ಷಣ ಪಡೆಯುವುದೇ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಖ್ಯ ಉದ್ದೇಶ ಎಂದು ಮಾಹಿತಿ ನೀಡಿದರು.
    ಜಿಲ್ಲಾ ಶಾಖೆಯ ಎಡಿಸಿ ಪದ್ಮಾವತಿ, ತರಬೇತುದಾರರಾದ ಪದ್ಮಾ ಶ್ರೀನಿವಾಸ್, ಯೋಗ ತರಬೇತುದಾರರಾದ ಶ್ರೀಲಕ್ಷ್ಮೀ, ಜಿಲ್ಲಾ ಕಾರ್ಯದರ್ಶಿ ಶಿವರಾಮೇಗೌಡ, ನಿಹಾಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts