More

    ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮಾಡಿ

    ಬೆಳಗಾವಿ: ರೈತರು ಬಿತ್ತನೆಗೂ ಮುನ್ನ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮಾಡಿದರೆ ಅಧಿಕ ಇಳುವರಿ ಪಡೆಯಬಹುದು ಎಂದು ರಾಜ್ಯಸಭಾ ಸದಸ್ಯ ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

    ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪ ಗ್ರಾಮದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಅಕ್ಷಯ ತೃತೀಯಾ ದಿನವಾದ ಭಾನುವಾರ ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿರುವ ಮತ್ತಿಕೊಪ್ಪ ಕ್ರಾಸ್‌ನಲ್ಲಿ ಕಿಸಾನ್ ಬಜಾರ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

    ಈ ಭಾಗದ ಜನರ ಬದುಕು ಹಸನಾಗಬೇಕು. ರೈತರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಕೃಷಿಕರಿಗೆ ಗುಣಮಟ್ಟದ ಬೀಜ ಮತ್ತು ಗೊಬ್ಬರ ದೊರೆಯುವ ನಿಟ್ಟಿನಲ್ಲಿ ಕಿಸಾನ್ ಬಜಾರ್ ಆರಂಭಿಸಲಾಗಿದ್ದು, ಸದುಪಯೋಗ ಮಾಡಿಕೊಳ್ಳಬೇಕು. ಸಸ್ಯ ಹಾಗೂ ಪ್ರಾಣಿ ಜನ್ಯದಿಂದ ತಯಾರಿಸಿರುವ ಕೀಟನಾಶಕಗಳನ್ನು ಬಳಕೆ ಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.

    ಗುಣಮಟ್ಟದ ಬೀಜ ತಯಾರಿ: ಮತ್ತಿಕೊಪ್ಪ ಗ್ರಾಮದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೀಜ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಇಲ್ಲಿ ಹೆಸರು, ಸೋಯಾಅವರೆ ಹಾಗೂ ಕಡಲೆ ಬೆಳೆಗಳ ಗುಣಮಟ್ಟದ ಬೀಜಗಳನ್ನು ತಯಾರಿಸಿದ್ದು, ರೈತರಿಗೆ ಪೂರೈಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಿಸಾನ್ ಬಜಾರ್‌ನಲ್ಲಿ ನುರಿತ ವಿಜ್ಞಾನಿಗಳಿದ್ದಾರೆ.

    ರೈತರು ತಮ್ಮ ಸಮಸ್ಯೆಗಳನ್ನು ಹೇಳಿ ಪರಿಹಾರ ಕಂಡುಕೊಳ್ಳಬಹುದು. ರೈತರಿಗೆ ಕಡಿಮೆ ದರದಲ್ಲಿ ಪರಿಕರಗಳನ್ನು ಒದಗಿಸುವ ಉದ್ದೇಶದಿಂದ ಕಿಸಾನ್ ಬಜಾರ್ ತೆರೆಯಲಾಗಿದೆ ಎಂದು ಡಾ. ಪ್ರಭಾಕರ ಕೋರೆ ತಿಳಿಸಿದರು.

    ಕೆಎಲ್‌ಇ ಸಂಸ್ಥೆಯ ಉಪಾಧ್ಯಕ್ಷ ರಾಜು ಹಂಜಿ, ಆಡಳಿತ ಮಂಡಳಿ ಸದಸ್ಯ ಅನಿಲ ಪಟ್ಟೇದ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಚೇರ್ಮನ್ ಬಿ.ಆರ್. ಪಾಟೀಲ, ಸುತಗಟ್ಟಿ ಗ್ರಾಪಂ ಅಧ್ಯಕ್ಷೆ ದಾಕ್ಷಾಯಿಣಿ ರಾಚಣ್ಣವರ, ಸದಸ್ಯರಾದ ಮಹಾಂತೇಶ ಮೊಹರೆ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಶ್ರೀದೇವಿ ಅಂಗಡಿ, ಕೃಷಿ ವಿಜ್ಞಾನಿ ಹಿರಮೇಠ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎಫ್. ದೊಡಗೌಡರ, ಡಾ. ಮಹಾಂತೇಶ ಕೂಲಿನವರ ಹಾಗೂ ಸುತಗಟ್ಟಿ, ಮತ್ತಿಕೊಪ್ಪ ಗ್ರಾಮದ ರೈತರು ಉಪಸ್ಥಿತರಿದ್ದರು.

    ಕೃಷಿ ಚಟುವಟಿಕೆಯಲ್ಲೂ ಕಡ್ಡಾಯವಾಗಿ ಮಾಸ್ಕ್ ಧರಿಸಿ

    ಕೊವಿಡ್-19 ಮಹಾಮಾರಿ ರೋಗವಾಗಿದ್ದು, ಇದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೃಷಿ ಚಟುವಟಕೆಯಲ್ಲಿ ತೊಡಗಿದಾಗ ಮುಖಗವಸು ಧರಿಸಬೇಕು. ಬಿಸಿ ನೀರು ಸೇವಿಸಬೇಕು. ಮೇಲಿಂದ ಮೇಲೆ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ಹಾಲಿನಲ್ಲಿ ಅರಿಶಿಣ ಬಳಸಬೇಕು. ತುಳಿಸಿ ಎಲೆ, ದಾಲ್ಚಿನ್ನಿ, ಕರಿಮೆಣಸು, ಒಣಶುಂಠಿ ಹಾಗೂ ಒಣದ್ರಾಕ್ಷಿಗಳಿಂದ ಕಷಾಯ ತಯಾರಿಸಿ ಸೇವಿಸಬೇಕು. ಪೂರ್ವಜರ ಆಹಾರ ಪದ್ಧತಿಗಳನ್ನು ಅನುಸರಿಸಿದರೆ ಮಾತ್ರ ಶರೀರದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಡಾ.ಪ್ರಭಾಕರ ಕೋರೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts