More

    ಶಾಲಾ-ಕಾಲೇಜು ಭೌತಿಕ ತರಗತಿ ಆರಂಭ ; ಮೊದಲ ದಿನ ಶೇ.63 ಹಾಜರಾತಿ

    ಚಿಕ್ಕಬಳ್ಳಾಪುರ: ಹಲವು ದಿನಗಳ ಬಳಿಕ ಶಾಲೆಗಳಿಗೆ ಬಂದ ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಿದ ಶಿಕ್ಷಕರು, ಪಾಲಕರು ಮತ್ತು ಮಕ್ಕಳೊಂದಿಗೆ ಆರೋಗ್ಯದ ಕಾಳಜಿಯ ಬಗ್ಗೆ ಕುಶಲೋಪಚಾರ. ಕರೊನಾ ಸೋಂಕಿನ ಮುಂಜಾಗ್ರತಾ ಕ್ರಮಗಳ ಪಾಲನೆಯ ಮಹತ್ವದ ಚರ್ಚೆ.

    ಇವು ಜಿಲ್ಲೆಯಲ್ಲಿ ಕರೊನಾ ಮಾರ್ಗಸೂಚಿ ನಿಯಮಗಳ ಪಾಲನೆಯೊಂದಿಗೆ ಸೋಮವಾರ ಪ್ರಾರಂಭವಾದ ಪ್ರೌಢಶಾಲೆಗಳಲ್ಲಿ ಕಂಡುಬಂದ ದೃಶ್ಯ. ಜಿಲ್ಲೆಯ 297 ಪ್ರೌಢಶಾಲೆಗಳಲ್ಲಿ ಮೊದಲ ದಿನ ಮಕ್ಕಳ ಹಾಜರಾತಿ ಪ್ರಮಾಣ ಶೇ.63.40 ದಾಖಲಾಗಿದೆ. 27,614 ಮಕ್ಕಳ ಪೈಕಿ 17,508 ಮಕ್ಕಳು ಹಾಜರಾಗಿದ್ದು, ಹಲವು ದಿನಗಳಿಂದ ಮನೆಯಲ್ಲಿ ಬಂಧಿಯಾಗಿದ್ದ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

    ಕರೊನಾ ಅನ್‌ಲಾಕ್ ಬಳಿಕ ಮೊದಲ ಹಂತದಲ್ಲಿ ಸ್ನಾತಕೋತ್ತರ ಪದವಿ, ಪದವಿ ತರಗತಿಗಳ ಆರಂಭಕ್ಕೆ ಅನುಮತಿ ನೀಡಿದ್ದ ಸರ್ಕಾರ 2021-22ನೇ ಸಾಲಿನ ಶೈಕ್ಷಣಿಕ ವರ್ಷದ 9 ಮತ್ತು 10ನೇ ತರಗತಿಯ ಭೌತಿಕ ತರಗತಿಗಳನ್ನು ನಡೆಸಲು ಅನುಮತಿ ನೀಡಿದೆ.

    ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶದಂತೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಶಿಕ್ಷಕರು ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಮಾಡಿದರು. ಕೆಲವೆಡೆ ಹೂವುಗಳ ವಿತರಣೆ, ಚಪ್ಪಾಳೆ ತಟ್ಟುವಿಕೆಯ ಮೂಲಕ ಹುರಿದುಂಬಿಸಲಾಯಿತು.
    ಮೊದಲ ಹಂತದಲ್ಲಿ 9 ಮತ್ತು 10ನೇ ತರಗತಿಗಳನ್ನು ಅರ್ಧದಿನ ಬೆಳಗಿನ ಅವಧಿಯಲ್ಲಿ ನಡೆಸಲಾಗುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಶನಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಭೌತಿಕ ತರಗತಿಗಳು ನಡೆಯಲಿದೆ.

    ಆತಂಕದ ನಡುವೆ ಶುಭಾರಂಭ: ತರಗತಿಗಳನ್ನು ಪ್ರಾರಂಭಿಸುವ ಹಿಂದಿನ ದಿನವೇ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಲಾಗಿತ್ತು. ಒಂದು ಕೊಠಡಿಯಲ್ಲಿ ಕನಿಷ್ಠ 20 ವಿದ್ಯಾರ್ಥಿಗಳನ್ನು ಪರಸ್ಪರ ಅಂತರವನ್ನು ಕಾಪಾಡಿಕೊಂಡು ಕುಳಿತುಕೊಳ್ಳುವ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಸೋಮವಾರ ಪಾಲಕರೊಂದಿಗೆ ಶಾಲೆಗೆ ಆಗಮಿಸಿದ ಪ್ರತಿ ವಿದ್ಯಾರ್ಥಿಯೂ ಹಾಜರಾತಿ ಒಪ್ಪಿಗೆ ಪತ್ರವನ್ನು ಸಲ್ಲಿಸಿದರು.

    ಜಿಲ್ಲೆಯಲ್ಲಿ 11 ಸರ್ಕಾರಿ, 13 ವಸತಿ, 45 ಅನುದಾನಿತ, 128 ಖಾಸಗಿ ಸೇರಿ 297 ಪ್ರೌಢಶಾಲೆಗಳಿವೆ. 9ನೇ ತರಗತಿಯಲ್ಲಿ 17,230 ಮತ್ತು 10ನೇ ತರಗತಿಯಲ್ಲಿ 17,650 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೊದಲ ದಿನ ಬಹುತೇಕ ಕಡೆ ಶೇ.75ರಷ್ಟು ಹಾಜರಾತಿ ಕಂಡು ಬಂದಿದೆ.

    ಪಿಯು ಕಾಲೇಜುಗಳಲ್ಲೂ ನಿರ್ವಹಣೆ: ಜಿಲ್ಲೆಯಲ್ಲಿ 21 ಸರ್ಕಾರಿ, 9 ಅನುದಾನಿತ, 68 ಖಾಸಗಿ ಪಿಯು ಕಾಲೇಜುಗಳಿದ್ದು ಕರೊನಾ ಮಾರ್ಗಸೂಚಿ ನಿಯಮಗಳೊಂದಿಗೆ ತರಗತಿಗಳು ನಡೆದವು. ಮೊದಲ ದಿನ ಶೇ.58 ರಷ್ಟು ಮಂದಿ ಹಾಜರಾಗಿದ್ದು ಮುಂಬರುವ ದಿನಗಳಲ್ಲಿ ಹೆಚ್ಚಳದ ನಿರೀಕ್ಷೆ ಹೊಂದಲಾಗಿದೆ.

    ಓದಿನ ಜತೆಗೆ ಆರೋಗ್ಯ ಕಾಳಜಿ ಇರಲಿ: ಆರೋಗ್ಯ ಕಾಳಜಿಯ ಜತೆಗೆ ಶೈಕ್ಷಣಿಕ ಉತ್ತಮ ಭವಿಷ್ಯದ ಕಡೆಗೆ ಗಮನಹರಿಸುವುದು ಮುಖ್ಯ. ಇದರಿಂದ ಅನಿವಾರ್ಯವಾಗಿ ಮುಂಜಾಗ್ರತಾ ಕ್ರಮಗಳೊಂದಿಗೆ ಭೌತಿಕ ತರಗತಿಗಳನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ತಿಳಿಸಿದರು.

    ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲಾಕ್‌ಡೌನ್ ಮತ್ತು ನಿರ್ಬಂಧಗಳ ಹಿನ್ನೆಲೆಯಲ್ಲಿ ಹಲವು ಕ್ಷೇತ್ರಗಳು ಸಂಕಷ್ಟ ಅನುಭವಿಸಿರುವುದರ ನಡುವೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಮಂಕಾಗಿತ್ತು. ಆರೋಗ್ಯ ಮತ್ತು ಶೈಕ್ಷಣಿಕ ಭವಿಷ್ಯ ಕಾಪಾಡುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದು ಈಗಾಗಲೇ ಸೋಂಕನ್ನು ಪರಿಣಾಮಕಾರಿ ನಿಯಂತ್ರಿಸಲಾಗಿದೆ ಎಂದರು.

    ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಭೌತಿಕ ತರಗತಿಗಳು ನಿರಂತರವಾಗಿ ಎಂದಿನಂತೆ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಕರೊನಾ ಸೋಂಕಿನ ಮುಂಜಾಗ್ರತಾ ಕ್ರಮಗಳ ಪಾಲನೆಯಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು ಎಂದು ಸಲಹೆ ನೀಡಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದ್‌ರೆಡ್ಡಿ ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯರಾಮರೆಡ್ಡಿ, ಪಿಯು ಡಿಡಿಪಿಐ ಆನಂದ್ ಮತ್ತಿತರರು ಇದ್ದರು.

    ರಾಖಿ ಕಟ್ಟಿದ ವಿದ್ಯಾರ್ಥಿಗಳು: ಇಲ್ಲಿನ ಸರ್ಕಾರಿ ಪ್ರೌಢಶಾಲೆ, ವಾಪಸಂದ್ರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್, ಜಿಲ್ಲಾಧಿಕಾರಿ ಆರ್.ಲತಾಗೆ ವಿದ್ಯಾರ್ಥಿಗಳು ರಾಖಿ ಕಟ್ಟಿದರು. ಇದೇ ವೇಳೆ ಭೌತಿಕ ತರಗತಿಗಳ ಪ್ರಾರಂಭ, ಹಿಂದಿನ ಆನ್‌ಲೈನ್ ಕಲಿಕೆ, ಕರೊನಾ ಸೋಂಕಿನ ಆತಂಕದ ಬಗ್ಗೆ ಪರಸ್ಪರ ಸಂವಾದ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts