More

    ಶಾಲೆಯಲ್ಲಿ ಮತ್ತೆ ಮಕ್ಕಳ ಕಲರವ

    ಮಂಗಳೂರು/ಉಡುಪಿ: ಬರೋಬ್ಬರಿ ಒಂಬತ್ತು ತಿಂಗಳ ಬಳಿಕ ಹೊಸವರ್ಷದ ಮೊದಲ ದಿನವಾದ ಶುಕ್ರವಾರ ಶಾಲೆ, ಪದವಿಪೂರ್ವ ಶಿಕ್ಷಣ ಸಂಸ್ಥೆಗಳು ಮತ್ತೆ ವಿದ್ಯಾರ್ಥಿಗಳಿಗಾಗಿ ತೆರೆದುಕೊಂಡಿದ್ದು, ಭಯದ ನಡುವೆಯೂ ಮಕ್ಕಳು ಉತ್ಸಾಹದಿಂದಲೇ ತರಗತಿಗೆ ಹಾಜರಾಗಿದ್ದಾರೆ.

    ಕೋವಿಡ್ ಲಾಕ್‌ಡೌನ್ ಬಳಿಕ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಸಂದರ್ಭ ಹೊರತುಪಡಿಸಿದರೆ, ಈವರೆಗೆ ಶಾಲೆಗಳು ಮುಚ್ಚಿದ್ದವು. ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಮನೆಯಲ್ಲೇ ಶೇ.70ರಷ್ಟು ಪಠ್ಯಭಾಗ ಮುಗಿಸಿದ್ದಾರೆ. ಪಪೂ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳು ಬಹುತೇಕ ಬಾಕಿಯಾಗಿತ್ತು. ಶುಕ್ರವಾರ 6ನೇ ತರಗತಿಯಿಂದ 9ನೇ ತರಗತಿ ವಿದ್ಯಾರ್ಥಿಗಳು ವಿದ್ಯಾಗಮ-2 ಕಾರ್ಯಕ್ರಮದಲ್ಲಿ ಹಾಗೂ ಹತ್ತನೇ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ರೆಗ್ಯುಲರ್ ತರಗತಿಗಾಗಿ ಶಾಲೆಗೆ ಬಂದಿದ್ದರು. ಶಾಲಾರಂಭದ ಸಂತಸದ ಜತೆ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್ ಮತ್ತಿತರ ಕಟ್ಟುನಿಟ್ಟಿನ ನಿಯಮಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಆತಂಕವೂ ಇತ್ತು.

    ವಿಶೇಷ ಸ್ವಾಗತ: ಜೂನ್ ತಿಂಗಳಲ್ಲಿ ನಡೆಯುತ್ತಿದ್ದ ಶಾಲಾ ಪ್ರಾರಂಭೋತ್ಸವ ಈ ಬಾರಿ ಜನವರಿಯಲ್ಲಿ ನಡೆದಿದೆ. ಕೋವಿಡ್ ಜತೆಗೆ ಶಾಲಾ ಪರಿಸರವೂ ಆತಂಕ ಉಂಟುಮಾಡಬಾರದು ಎನ್ನುವ ಕಾರಣಕ್ಕೆ ಕೆಲವು ಶಾಲೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಕೆಲವೆಡೆ ಮಕ್ಕಳನ್ನು ಬ್ಯಾಂಡ್ ವಾಲಗದ ಮೆರವಣಿಗೆಯಲ್ಲೂ ಕರೆತರಲಾಯಿತು. ಚಾಕಲೇಟ್, ಸಿಹಿತಿಂಡಿ, ಹೂವು ನೀಡಿ ಮಕ್ಕಳನ್ನು ಸ್ವಾಗತಿಸಲಾಯಿತು. ವಿದ್ಯಾರ್ಥಿಗಳು ಎಲ್ಲಿ ಹೇಗೆ ಕುಳಿತುಕೊಳ್ಳಬೇಕು ಎಂದು ಮೊದಲೇ ಬೆಂಚು, ಡೆಸ್ಕ್‌ಗಳಲ್ಲಿ ಗುರುತು ಮಾಡಿ ಇರಿಸಿದಂತೆ ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತುಕೊಂಡ ಕಾರಣ, ತರಗತಿಗಳಲ್ಲಿ ಹಿಂದಿನಂತೆ ಗದ್ದಲ ಇರಲಿಲ್ಲ.

    ಮೊದಲ ದಿನ ತರಗತಿ ಇಲ್ಲ: ಬಹುತೇಕ ಶಾಲೆಗಳಲ್ಲಿ ಮೊದಲ ದಿನ ತರಗತಿ ಇರಲಿಲ್ಲ. ಬೆಳಗ್ಗೆ ಅಸೆಂಬ್ಲಿ ನಡೆಸಿ, ಮುಖ್ಯಶಿಕ್ಷರು, ಪ್ರಾಂಶುಪಾಲರು ತರಗತಿಯಲ್ಲಿ ಹೇಗೆ ಇರಬೇಕು ಎನ್ನುವ ಕುರಿತು ಮಾಹಿತಿ ನೀಡಿದರು. ಆನ್‌ಲೈನ್‌ನಿಂದ ಆಫ್‌ಲೈಗೆ ಒಗ್ಗಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆ ಆಯೋಜಿಸಲಾಯಿತು. ನೋಟ್ಸ್‌ಗಳ ಪರಿಶೀಲನೆ, ಆನ್‌ಲೈನ್ ಪಠ್ಯದಲ್ಲಿ ಅರ್ಥವಾಗದ ವಿಷಯಗಳ ವಿವರಣೆ ನೀಡಲಾಯಿತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಶಾಲೆಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಬಳಿಕ ಎಂದು ತರಗತಿಗಳನ್ನು ಮೊದಲೇ ವಿಂಗಡಿಸಲಾಗಿತ್ತು.

    ದ.ಕ. ಶೇ.78 ಹಾಜರಾತಿ: ದ.ಕ. ಜಿಲ್ಲೆಯಲ್ಲಿ 10ನೇ ತರಗತಿಗೆ ಶೇ.65-70 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ. 6-7ನೇ ತರಗತಿ ಮಕ್ಕಳು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. 8-9ನೇ ತರಗತಿಗಳಿಗೆ ಕನಿಷ್ಠ ಶೇ.50, ಗರಿಷ್ಠ ಶೇ.80 ಹಾಜರಾತಿ ಇತ್ತು. ಒಟ್ಟಾರೆಯಾಗಿ ಶೇ.78ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಪಿಯುಸಿಯಲ್ಲಿ ಶೇ.66ರಷ್ಟು (21,993) ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 257 ಮಂದಿ ಕೇರಳದಿಂದ ಬಂದಿದ್ದಾರೆ. 2781 ಮಂದಿ ವಿವಿಧ ಹಾಸ್ಟೆಲ್‌ಗಳಲ್ಲಿ ಇದ್ದಾರೆ. ವಾರಾಂತ್ಯವಾಗಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಸೋಮವಾರದಿಂದ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಡಿಡಿಪಿಯು ಮೊಹಮ್ಮದ್ ಇಮ್ತಿಯಾಜ್ ವಿಜಯವಾಣಿಗೆ ತಿಳಿಸಿದ್ದಾರೆ.

    ಉಡುಪಿ ಜಿಲ್ಲೆಯಲ್ಲಿ ಕಡಿಮೆ: ಉಡುಪಿ ಜಿಲ್ಲೆಯಲ್ಲಿ 6ರಿಂದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಿದ್ದು, 822 ಶಾಲೆಗಳಲ್ಲಿ ಶೇ.49ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಸರ್ಕಾರಿ ಶಾಲೆಗಳಲ್ಲಿ ಶೇ.59, ಅನುದಾನಿತ ಶಾಲೆಗಳಲ್ಲಿ ಶೇ.55, ಅನುದಾನ ರಹಿತ ಶಾಲೆಗಳಲ್ಲಿ ಶೇ.36.93 ಹಾಜರಾತಿ ಇತ್ತು. 105 ಪಪೂ ಕಾಲೇಜುಗಳಲ್ಲಿ 15,768 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 9677 ಮಂದಿ ಶುಕ್ರವಾರ ತರಗತಿಗೆ ಹಾಜರಾಗಿದ್ದರು. ಶೇ.52ರಷ್ಟು ಮಂದಿ ಮೊದಲ ದಿನ ಕಾಲೇಜಿಗೆ ಆಗಮಿಸಿದ್ದರು.

    ಶಾಲೆ ಸಿಬ್ಬಂದಿಗೆ ಕೋವಿಡ್ ದೃಢ
    ಹೆಬ್ರಿ: ಶಾಲೆ ಆರಂಭ ಹಿನ್ನೆಲೆಯಲ್ಲಿ ಕೋವಿಡ್ ತಪಾಸಣೆ ಸಂದರ್ಭ ಮುನಿಯಾಲು ಕರ್ನಾಟಕ ಪಬ್ಲಿಕ್ ಸ್ಕೂಲ್ನ ಬೋಧಕೇತರ ಸಿಬ್ಬಂದಿ ಒಬ್ಬರ ವರದಿ ಪಾಸಿಟಿವ್ ಬಂದಿದ್ದು, ಅರೋಗ್ಯ ಇಲಾಖೆಯ ಕ್ರಮನುಸಾರ ಅವರನ್ನು ಐಸೋಲೇಷನ್‌ಗೆ ಒಳಪಡಿಸಲಾಗಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನೂ ಐಸೋಲೇಷನ್‌ಗೆ ಅಳವಡಿಸಲಾಗಿದೆ. ತರಗತಿಗಳು ಯಥಾವತ್ತಾಗಿ ನಡೆಯುತ್ತಿದ್ದು, ಎಲ್ಲ ಸುರಕ್ಷಾ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಕಳ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ವಿಜಯವಾಣಿಗೆ ತಿಳಿಸಿದರು. ದ.ಕ. ಜಿಲ್ಲೆಯಲ್ಲಿ ಶಿಕ್ಷಕರ ಕೋವಿಡ್ ಪರೀಕ್ಷೆ ಶೇ.100ರಷ್ಟು ಪೂರ್ಣಗೊಂಡಿದ್ದು, ಈವರೆಗೆ ಯಾರಿಗೂ ಪಾಸಿಟಿವ್ ಬಂದಿಲ್ಲ ಎಂದು ಡಿಡಿಪಿಐ ಮಲ್ಲೇಸ್ವಾಮಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts