More

    ಹಗಲು ಶಾಲೆ, ರಾತ್ರಿ ಕುಡುಕರ ಅಡ್ಡೆ


    ಸೋಮು ಲದ್ದಿಮಠ ರೋಣ
    ಸೋರುವ ಕಟ್ಟಡ, ಕಳಚಿ ಬೀಳುವ ಮೇಲ್ಛಾವಣಿ, ಬಿರುಕು ಬಿಟ್ಟ ಗೋಡೆಗಳು, ಗೆದ್ದಲು ಹಿಡಿದ ಬಾಗಿಲುಗಳು, ಶಾಲೆಯ ಆವರಣದಲ್ಲಿ ಹಂದಿಗಳ ಓಡಾಟ, ಕೊಠಡಿಗಳ ಬೀಗ ಮುರಿದು ಮದ್ಯ ಸೇವಿಸುವ ಕುಡುಕರು… ಇದು 159 ವರ್ಷ ಇತಿಹಾಸ ಹೊಂದಿರುವ ರೋಣ ಪಟ್ಟಣದ ಎಸ್.ಆರ್. ಪಾಟೀಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆಯ ಕಥೆ!
    1863ರಲ್ಲಿ ಕಟ್ಟಿರುವ ಶಾಲೆಯ ಕಟ್ಟಡ ಸಂಪೂರ್ಣ ಕುಸಿಯುವ ಹಂತ ತಲುಪಿದೆ. ಇಂತಹ ಕಟ್ಟಡದಲ್ಲಿಯೇ ಮಕ್ಕಳು ಪಾಠ ಕಲಿಯುವ ಅನಿವಾರ್ಯ ಇದೆ. 1ರಿಂದ 7ನೇ ತರಗತಿವರೆಗೆ ಒಟ್ಟು 260 ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. 10 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಶಾಲೆಯ ದುರಸ್ತಿ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬುದು ಸ್ಥಳೀಯರ ದೂರು.
    ಕಟ್ಟಡದಲ್ಲಿ ಸುಮಾರು 30 ಕೊಠಡಿಗಳಿವೆ, ಇದರಲ್ಲಿ 18 ಕೊಠಡಿಗಳು ಬೀಳುವ ಹಂತ ತಲುಪಿರುವ ಕಾರಣ ಅವುಗಳ ಬಾಗಿಲು ಮುಚ್ಚಲಾಗಿದೆ. ಇನ್ನುಳಿದ ಕೊಠಡಿಗಳಲ್ಲಿ ಮಳೆ ಬಂದರೆ ಮೇಲ್ಛಾವಣಿಯಿಂದ ನೀರು ಸೋರುತ್ತದೆ. ಇದಕ್ಕೆ ತೇಪೆ ಹಾಕಿದ್ದರೂ ನೀರು ಸೋರುತ್ತಿದೆ ಎನ್ನುತ್ತಾರೆ ಶಿಕ್ಷಕರು.
    ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹಲವು ಸರ್ಕಾರಿ ಶಾಲೆಗಳಿಗೆ ಸರ್ಕಾರ ಫಿಲ್ಟರ್ ನೀರಿನ ವ್ಯವಸ್ಥೆ ಮಾಡಿದೆ ಆದರೆ, ನಮ್ಮ ಶಾಲೆಯಲ್ಲಿ ಶುದ್ಧ ನೀರಿನ ವ್ಯವಸ್ಥೆ ಮಾಡಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.
    ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಶಾಲೆಗಳನ್ನು ಉಳಿಸಿ ಎಂದು ಸರ್ಕಾರ ಹೇಳುತ್ತದೆ. ಆದರೆ, ಸರ್ಕಾರಿ ಶಾಲೆಗಳಿಗೆ ಸೌಲಭ್ಯ ನೀಡುವುದಿಲ್ಲ. ಮಕ್ಕಳು ಭಯದಲ್ಲಿಯೇ ಅಕ್ಷರ ಕಲಿಯಬೇಕಿದೆ. ಸರ್ಕಾರ ಆದಷ್ಟು ಬೇಗ ಹಳೆಯ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ವಿುಸಬೇಕು ಎಂಬುದು ಗ್ರಾಮಸ್ಥರು ಹಾಗೂ ಪಾಲಕರ ಆಗ್ರಹವಾಗಿದೆ.


    ರೋಣದ ಎಸ್.ಆರ್. ಪಾಟೀಲ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಶಾಲೆಯ ಬೀಗ ಮುರಿದು ಮದ್ಯಪಾನ ಹಾಗೂ ಶೌಚ ಮಾಡುವುದರ ಬಗ್ಗೆ ಪೊಲೀಸರಿಗೆ ದೂರು ನೀಡಿ ಕಾನೂನು ಕ್ರಮ ಜರುಗಿಸಲಾಗುವುದು.
    | ಗಾಯತ್ರಿ ಸಜ್ಜನ ಬಿಇಒ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts