More

    ಶಾಲಾ, ಕಾಲೇಜುಗಳ ಶುಭಾರಂಭ ; ತುಸು ತಗ್ಗಿರುವ ಕರೊನಾ ಸೋಂಕು ; ವಿದ್ಯಾರ್ಥಿಗಳಿಗೆ ಗತವೈಭವಕ್ಕೆ ಮರಳಿದ ಅನುಭವ

    ತುಮಕೂರು : ಕರೊನಾ ಸೋಂಕು ತುಸು ತಗ್ಗಿರುವ ಹಿನ್ನೆಲೆಯಲ್ಲಿ ಸೋಮವಾರ ಶಾಲೆ ಆರಂಭವಾಗಿದ್ದು, ಬಹುದಿನಗಳ ನಂತರ ತೆರೆದ ಪಾಠಶಾಲೆಗೆ ವಿದ್ಯಾರ್ಥಿಗಳು ಹರ್ಷದಿಂದ ಬಂದರು.

    9ನೇ ತರಗತಿಯಿಂದ 12ನೇ ತರಗತಿವರೆಗೆ ಶಾಲೆ, ಕಾಲೇಜುಗಳನ್ನು ಸರ್ಕಾರ ಆರಂಭಿಸಿದ್ದು, ಕರೊನಾ ಲಸಿಕೆ ಪಡೆದ ಶಿಕ್ಷಕರು ಕೂಡ ಶಾಲೆಗೆ ಬಂದು ಪಾಠ ಆರಂಭಿಸಿದರು. ಕಳೆದ ಒಂದುವರೆ ವರ್ಷದಿಂದ ಮೊಬೈಲ್ ಮೂಲಕ ಆನ್‌ಲೈನ್ ಪಾಠವನ್ನಷ್ಟೇ ಕೇಳಿದ್ದ ವಿದ್ಯಾರ್ಥಿಗಳಿಗೆ ಹಿಂದಿನ ಗತವೈಭವಕ್ಕೆ ಮರಳಿದ ಅನುಭವವಾಯಿತು.

    ಬಹುತೇಕ ಎಲ್ಲ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು, ಸ್ಯಾನಿಟೈಸರ್, ದೇಹದ ಉಷ್ಣಾಂಶ ಪರೀಕ್ಷಿಸಿ ಒಳಗೆ ಬಿಡಲಾಯಿತು. ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದ ಕಾರಣದಿಂದ ಡೆಸ್ಕ್‌ಗೆ ಒಬ್ಬರು, ಇಬ್ಬರಷ್ಟೇ ಕುಳಿತು ಪಾಠ ಕೇಳಿದರು. ಪ್ರತಿ ಶಾಲಾ ಕೊಠಡಿಯಲ್ಲಿ 20 ಮಕ್ಕಳು ಕುಳಿತು ಪಾಠ ಕೇಳಲು ಅವಕಾಶವಿತ್ತು, ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ, ಸಿದ್ಧಗಂಗಾ ಮಹಿಳಾ ಪಿಯು ಕಾಲೇಜು, ವಿದ್ಯಾನಿಕೇತನ ಪಿಯು ಕಾಲೇಜು ಹಾಗೂ ಸರ್ಕಾರಿ ಪಿಯು ಕಾಲೇಜಿನಲ್ಲಿ ಹೆಚ್ಚು ಮಕ್ಕಳು ಕಾಣಿಸಿದರು. ನಗರದ ಎಂಪ್ರೆಸ್ ಕಾಲೇಜಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಕೂಡ ಭೇಟಿ ನೀಡಿ ಪರಿಶೀಲಿಸಿದರು.
    ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದರೆ, ಇನ್ನು ಕೆಲವು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ವಾಡಿ, ಕೈಗೆ ಸ್ಯಾನಿಟೈಸರ್ ಹಾಕಿ ತರಗತಿಯ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಶಾಲೆ, ಕಾಲೇಜುಗಳ ತರಗತಿಗಳ ಕೊಠಡಿಗಳನ್ನು ಸ್ವಚ್ಛಗೊಳಿಸಿ ಸಿದ್ಧಪಡಿಸಲಾಗಿತ್ತು.

    ಕರೊನಾ ಸೋಂಕು ಪೂರ್ಣ ಪ್ರವಾಣದಲ್ಲಿ ಕಡಿಮೆಯಾಗದೆ ಇರುವುದರಿಂದ ಶಾಲೆಗಳಲ್ಲಿ ಇನ್ನು ಬಿಸಿಯೂಟ ಆರಂಭಿಸುತ್ತಿಲ್ಲ. ಮಕ್ಕಳೇ ಮನೆಯಿಂದ ಊಟ, ಕುಡಿಯುವ ನೀರು ತರುವಂತೆ ತಿಳಿಸಲಾಗಿದೆ, ಶಿಕ್ಷಕರು ಹಾಗೂ ಶಾಲೆಗಳ ಬಹುತೇಕ ಸಿಬ್ಬಂದಿಗೆ ಲಸಿಕೆ ಹಾಕಿಸಲಾಗಿದೆ. ಲಸಿಕೆ ಹಾಕಿಸಿಕೊಂಡ ಶಿಕ್ಷಕರು ಮತ್ತು ಸಿಬ್ಬಂದಿ ಕೆಲಸಕ್ಕೆ ಹಾಜರಾಗಲು ಅವಕಾಶ ನೀಡಲಾಗಿದೆ ಎಂದು ಡಿಡಿಪಿಐ ಸಿ.ನಂಜಯ್ಯ ‘ವಿಜಯವಾಣಿ’ಗೆ ತಿಳಿಸಿದರು.

    28856 ವಿದ್ಯಾರ್ಥಿಗಳ ಹಾಜರು : ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಇಂದಿನಿಂದ ಪ್ರಾರಂಭವಾದ 9 ಹಾಗೂ 10ನೇ ತರಗತಿ ಶಾಲೆಗಳಿಗೆ ಒಟ್ಟು 28856 ವಿದ್ಯಾರ್ಥಿಗಳು ಹಾಜರಾದರು. ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್, ತಿಪಟೂರು, ತುಮಕೂರು ಹಾಗೂ ತುರುವೇಕೆರೆ ತಾಲೂಕಿನಲ್ಲಿ ವಸತಿ ಶಾಲೆಗಳು ಸೇರಿದಂತೆ ಒಟ್ಟು 467 ಪ್ರೌಢಶಾಲೆಗಳಿದ್ದು, 458 ಪ್ರೌಢಶಾಲೆಗಳು ವಾತ್ರ ಸೋಮವಾರ ಆರಂಭವಾದವು. ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 9 ಹಾಗೂ 10ನೇ ತರಗತಿಯ ಒಟ್ಟು 42150 ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದು, ಸೋಮವಾರ 28856 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ತರಗತಿಗೆ ಹಾಜರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts