More

    ವಿಜಯ್ ಮಲ್ಯ ಅರ್ಜಿ ತಿರಸ್ಕರಿಸಿದ ಸುಪ್ರೀಂ : ಕರ್ನಾಟಕ ಹೈಕೋರ್ಟ್ ತೀರ್ಪಿಗೆ ಇಲ್ಲ ತಡೆ

    ನವದೆಹಲಿ: ಕಿಂಗ್​ಫಿಷರ್ ಏರ್​ಲೈನ್ಸ್​ಗಾಗಿ ಪಡೆದ ಸಾಲದ ಬಾಕಿ ವಸೂಲಿಗಾಗಿ ಉದ್ಯಮಿ ವಿಜಯ್ ಮಲ್ಯರ ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ ಸಂಸ್ಥೆಯನ್ನು (ಯುಬಿಎಚ್​ಎಲ್) ಬರ್ಖಾಸ್ತು ಮಾಡಬೇಕೆಂಬ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಳ್ಳಿ ಹಾಕಿದೆ. ಇದರಿಂದ ಮಲ್ಯಗೆ ತೀವ್ರ ಹಿನ್ನಡೆಯಾಗಿದೆ. ಸುಪ್ರೀಂ ಕ್ರಮದಿಂದಾಗಿ ಯುಬಿಯ 102 ವರ್ಷ ಹಳೆಯ ಮಾತೃ ಸಂಸ್ಥೆ ಯುಎಚ್​ಬಿಎಲ್ ಬರ್ಖಾಸ್ತುಗೊಳ್ಳುವುದು ಖಚಿತಪಟ್ಟಿದೆ.

    ಇದುವರೆಗೆ ಸುಮಾರು 3,600 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ. ಮಲ್ಯ ಮತ್ತು ಯುಬಿಎಚ್​ಎಲ್​ನಿಂದ ಇನ್ನೂ 11,000 ಕೋಟಿ ರೂಪಾಯಿ ಬಾಕಿ ವಸೂಲಿ ಮಾಡಬೇಕಿದೆ ಎಂದು ಎಸ್​ಬಿಐ ನೇತೃತ್ವದ ಬ್ಯಾಂಕ್​ಗಳ ಸಮೂಹವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಕೋರ್ಟ್​ಗೆ ತಿಳಿಸಿದರು. ಜಾರಿ ನಿರ್ದೇಶನಾಲಯ (ಇ.ಡಿ.) ಕಂಪನಿಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಾರದು. ಯಾಕೆಂದರೆ ಅವುಗಳು ಋಣಭಾರವಿರುವ ಆಸ್ತಿಗಳಾಗಿದ್ದು ಅವುಗಳ ಮೇಲೆ ಬ್ಯಾಂಕ್​ಗಳಿಗೆ ಮೊದಲ ಅಧಿಕಾರವಿದೆ ಎಂದು ರೋಹಟ್ಗಿ ವಾದಿಸಿದರು.

    ಹೈಕೋರ್ಟ್ ಹೇಳಿದ್ದೇನು?: 2018 ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್ ಆದೇಶದ ಪ್ರಕಾರ, ಯುಎಚ್​ಬಿಎಲ್ ಸಾಲದಾತರಿಗೆ ನೀಡಬೇಕಿರುವ ಒಟ್ಟು ಬಾಕಿ ಸುಮಾರು 7,000 ಕೋಟಿ ರೂಪಾಯಿ ಆಗಿದೆ. ವಿವಿಧ ಬ್ಯಾಂಕ್​ಗಳಿಗೆ ಬಾಕಿ ಮೊತ್ತ 14,000 ಕೋಟಿ ರೂಪಾಯಿ ನೀಡುವುದಾಗಿ ಯುಬಿಎಚ್​ಎಲ್ ಸೆಪ್ಟೆಂಬರ್ 30ರಂದು ಸುಪ್ರೀಂಕೋರ್ಟ್​ಗೆ ತಿಳಿಸಿತ್ತು. ಕಂಪನಿಯ ಸೊತ್ತಿನ ಮೌಲ್ಯ ಒಟ್ಟು ಸಾಲಕ್ಕಿಂತ ಹೆಚ್ಚಿದೆ ಎಂದಿತ್ತು. ಕಂಪನಿಯ ಆಸ್ತಿ ಮೌಲ್ಯ ಒಟ್ಟು ಸಾಲಕ್ಕಿಂತ ಅಧಿಕವಾಗಿರುವುದರಿಂದ ಕಂಪನಿಯನ್ನು ಬರ್ಖಾಸ್ತುಗೊಳಿಸಲು ನಿರ್ದೇಶನ ನೀಡುವುದು ಸೂಕ್ತವಲ್ಲ ಎಂದು ಯುಬಿ ಪರ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ಹೇಳಿದರು. ಇ.ಡಿ. ಅನೇಕ ಸೊತ್ತುಗಳನ್ನು ಮುಟ್ಟುಗೋಲು ಹಾಕಿ ಕೊಂಡಿರುವುದರಿಂದ ಬ್ಯಾಂಕ್​ಗಳಿಗೆ ಏನೂ ಸಿಗುತ್ತಿಲ್ಲ ಎಂದರು. (ಏಜೆನ್ಸೀಸ್)

    ಹಾಥರಸ್​ ಕೇಸ್​: ಅಲಹಾಬಾದ್ ಹೈಕೋರ್ಟ್​ ನಿಗಾದಲ್ಲಿ ನಡೆಯಲಿದೆ ಸಿಬಿಐ ತನಿಖೆ ಎಂದ ಸುಪ್ರೀಂ ಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts