More

    ಗೆದ್ದೇ ಗೆಲ್ಲುವೆ ಒಂದು ದಿನ, ಮತ್ತೇತಕೆ ಭಯ?

    ಗೆದ್ದೇ ಗೆಲ್ಲುವೆ ಒಂದು ದಿನ, ಮತ್ತೇತಕೆ ಭಯ?ಗುರುಶಿಷ್ಯರಿಬ್ಬರು ಕಾಡಹಾದಿಯಲ್ಲಿ ಯಾತ್ರೆಗೆ ಹೊರಟಿದ್ದರು. ಸಾಯಂಕಾಲವಾಗುತ್ತಲೇ ಶಿಷ್ಯನಿಗೂ ಧ್ಯಾನ ಮಾಡುವಂತೆ ಸೂಚಿಸಿ ಗುರು ಧ್ಯಾನಸ್ಥನಾದ. ಮನಸ್ಸು, ಇಂದ್ರಿಯಗಳ ಮೇಲೆ ನಿಯಂತ್ರಣವಿಲ್ಲದ ತರುಣ ಶಿಷ್ಯ ಸುಮ್ಮನೆ ಕಣ್ಣುಮುಚ್ಚಿಕೊಂಡು ಕುಳಿತಿದ್ದ. ಅಷ್ಟರಲ್ಲಿ ಹಸಿದ ಸಿಂಹವೊಂದು ಘರ್ಜಿಸುತ್ತ ಗುರುಶಿಷ್ಯರ ಕಡೆ ಧಾವಿಸಿಬಂತು. ಸಿಂಹದ ಘರ್ಜನೆಯ ಆರ್ಭಟಕ್ಕೆ ಮರಗಳಲ್ಲಿ ಆಶ್ರಯ ಪಡೆದಿದ್ದ ಪಕ್ಷಿಗಳು ಚೀರುತ್ತ ಕೀರುತ್ತ ಆಕಾಶಕ್ಕೆ ಹಾರಿದರೆ, ಕಣ್ಣುಮುಚ್ಚಿ ಕುಳಿತಿದ್ದ ಶಿಷ್ಯ ಬಡಜೀವ ಬದುಕಿದರೆ ಸಾಕೆಂಬ ಜೀವಭೀತಿಯಿಂದ ಕ್ಷಣಾರ್ಧದಲ್ಲಿ ಮರವೇರಿ ಕುಳಿತಿದ್ದ. ಆದರೆ, ಧ್ಯಾನಸಮಾಧಿಯಲ್ಲಿದ್ದ ಗುರು ಮಾತ್ರ ಮಿಸುಕಾಡಲಿಲ್ಲ. ಅತ್ತಿತ್ತ ನೋಡದೆ ರಾಜಗಾಂಭೀರ್ಯದಿಂದ ಗುರುವಿನ ಹತ್ತಿರ ಸುಳಿದ ಸಿಂಹ ಸ್ವಲ್ಪವೂ ದೈಹಿಕ ಚಲನೆಯಿಲ್ಲದೆ, ಉಸಿರಿನ ಅಬ್ಬರವಿಲ್ಲದೆ, ಉದ್ವೇಗವಿಲ್ಲದೆ, ನಿಶ್ಚಲಸ್ಥಿತಿಯಲ್ಲಿ ಮೈಮರೆತಿದ್ದ ಗುರುವಿನ ದೇಹವನ್ನು ಮೂಸಿ ಹಾಗೆಯೇ ಹಿಂದಿರುಗಿತು. ಶಿಷ್ಯನಿಗೆ ಆಶ್ಚರ್ಯ. ಇದೆಂಥ ಪವಾಡ ಎಂದು ಗುರುವಿನ ಬಗ್ಗೆ ಮತ್ತಷ್ಟು ಗೌರವ. ಕೆಲ ಸಮಯದ ಬಳಿಕ ಧ್ಯಾನ ಮುಗಿಸಿದ ಗುರು ಹಾಗೂ ಶಿಷ್ಯರ ಪಯಣ ಮುಂದುವರಿಯಿತು. ಗ್ರಾಮವೊಂದು ಹತ್ತಿರವಾಗುತ್ತಿರುವಾಗ ಸೊಳ್ಳೆಯೊಂದು ಗುರುವಿನ ಮೂಗಿಗೆ ಕಡಿಯಿತು. ಕೂಡಲೇ ಗುರು ಗಾಬರಿಬಿದ್ದು ಕಿರುಚಿಕೊಂಡ. ಇತ್ತ ಶಿಷ್ಯನಿಗೆ ಆಶ್ಚರ್ಯ. ಸಿಂಹವೇ ಎದುರಿಗೆ ಬಂದರೂ ಧ್ಯಾನ ಬಿಟ್ಟು ಓಡಿಹೋಗದ ಈ ಗುರು ಯಕಶ್ಚಿತ್ ಸೊಳ್ಳೆಗೆ ಹೆದರಿ ಕೂಗುತ್ತಿರುವುದೇಕೆ ಎಂಬ ಪ್ರಶ್ನೆ. ನಾನು ಧ್ಯಾನ ಮಾಡುವಾಗ ಪರಮಾತ್ಮನ ಜೊತೆಯಲ್ಲಿದ್ದೆ. ಹಾಗಾಗಿ ನನಗೆ ದೇಹಭಯ, ಜೀವಭಯ ಇರಲಿಲ್ಲ. ಆದರೆ, ಈಗ ನಾನು ನಿನ್ನ ಜೊತೆಯಲ್ಲಿರುವೆ. ಹಾಗಾಗಿ ಭಯಪಟ್ಟೆ ಎಂಬ ಗುರುವಿನ ವಿವರಣೆ ಶಿಷ್ಯನಿಗೆ ಹೊಸದೊಂದು ಪಾಠ ಕಲಿಸಿತ್ತು.

    **

    ದೇಶದಲ್ಲಿ ಸದ್ಯ ಎಲ್ಲೆಡೆ ‘ಭಯ’ದ ವಾತಾವರಣವಿದೆ. ಕಾರಣ ಇದು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ!

    ಹೌದು, ಅಪ್ಪ-ಅಮ್ಮನನ್ನೇ ಹೆದರಿಸುವ ಅನೇಕ ಮಕ್ಕಳಿಗೆ ಪರೀಕ್ಷೆ ಎಂದರೆ ಭಯ. ತರಗತಿ ಯಾವುದೇ ಇರಲಿ, ಪರೀಕ್ಷೆಗಳು ಬಂತೆಂದರೆ ಮಕ್ಕಳು, ಪಾಲಕರು, ಶಿಕ್ಷಕರು ಎಲ್ಲರಿಗೂ ಭಯ. ಇದಕ್ಕೆ ಕಾರಣ, ಹಿನ್ನೆಲೆಗಳು ಪ್ರತ್ಯೇಕವಾದರೂ, ಭಯವಂತೂ ಏಕಸ್ಥಾಯಿ.

    ಭಯ ಯಾಕೆ? ಸಣ್ಣಪುಟ್ಟ ವಿಷಯಗಳಿಗೆ ವ್ಯಕ್ತಿ ಹೆದರುವುದೇಕೆ? ಇದಕ್ಕೆ ಕಾರಣ ಸರಳ. ಎಲ್ಲಿ ಧೈರ್ಯವಿರುವುದಿಲ್ಲವೋ ಅಲ್ಲಿ ಭಯವಿರುತ್ತದೆ. ಎಲ್ಲಿ ಆತ್ಮವಿಶ್ವಾಸ ಇರುವುದಿಲ್ಲವೋ ಅಲ್ಲಿ ಹಿಂಜರಿಕೆ ಇರುತ್ತದೆ. ಹಾಗೆ ನೋಡಿದರೆ, ಭಯವೆನ್ನುವುದು ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಎಡಬಿಡದೆ ಹಿಂಬಾಲಿಸುವ ಸಂಗಾತಿ. ಅದೊಂದು ರೀತಿ ವಿಕ್ರಮನ ಬೆನ್ನೇರಿದ ಬೇತಾಳದಂತೆ.

    ಜಗತ್ತಿನಲ್ಲಿ ಭಯದ ಬಗೆಗಳು ಹಲವು. ಬಾಲ್ಯದಲ್ಲಿ ಅಮ್ಮನ ಮುಖ ಕಾಣದಿದ್ದರೆ ಭಯ. ಅಪರಿಚಿತರ ಭಯ. ಗುಂಪಿನಲ್ಲಿ, ಗೌಜಿನಲ್ಲಿ ಕಳೆದುಹೋಗುವ ಭಯ. ತಪ್ಪು ಮಾಡಿ ಸಿಕ್ಕಿಬೀಳುವ ಭಯ. ಒಂದೊಂದೇ ವರ್ಷಗಳು ಕಳೆಯುತ್ತ ಜನರ ಭಯ, ಶಾಲೆಯೆಂದರೆ ಭಯ, ಶಿಕ್ಷಕರ ಭಯ, ಪಾಠದ ಭಯ, ಹಿಂಜರಿಕೆ, ಕೀಳರಿಮೆಗಳಿಂದ ಸಮಯ, ಸನ್ನಿವೇಶಗಳಲ್ಲಿ ಮುನ್ನುಗ್ಗಿ ಗುರುತಿಸಿಕೊಳ್ಳಲು ಸಾಧ್ಯವಾಗದ ಭಯ. ಸಹಪಾಠಿಗಳ ಎದುರು ಮುಜುಗರ, ಅವಮಾನದ ಭಯ, ಸೋಲಿನ ಭಯ, ಅನುತ್ತೀರ್ಣನಾಗುವ ಭಯ, ತಿರಸ್ಕಾರದ ಭಯ, ಹತ್ತು ಜನರೆದುರು ಧ್ವನಿ ಎತ್ತಲು ಭಯ, ಹೊಸ ವಾತಾವರಣದ ಭಯ, ಸಮಾಜದ ಭಯ. ಕತ್ತಲಿನ ಭಯ, ಎತ್ತರದ ಭಯ, ನೀರಿಗಿಳಿಯಲು ಭಯ, ಪ್ರಾಣಿಗಳ ಭಯ, ಹಾವು, ಚೇಳು, ಕ್ರಿಮಿಕೀಟಗಳ ಭಯ, ಕಳ್ಳರ ಭಯ, ರೌಡಿಗಳ ಭಯ, ಸಾಲಗಾರರ ಭಯ, ಮೇಲಧಿಕಾರಿಗಳ ಭಯ, ವಾಹನ ಚಾಲನೆ ಭಯ, ಅಪಘಾತದ ಭಯ, ಲಿಫ್ಟ್, ಎಸ್ಕಲೇಟರ್​ಗಳಲ್ಲಿ ಹೋಗಲು ಭಯ, ವಿಮಾನ ಪ್ರಯಾಣದ ಭಯ, ಗುಡುಗು, ಸಿಡಿಲು, ಕರ್ಕಶ ಶಬ್ದಗಳ ಭಯ, ರಕ್ತದ ಭಯ, ದೇವರು-ದೆವ್ವದ ಭಯ, ಎಲ್ಲಕ್ಕಿಂತ ಪ್ರಮುಖವಾಗಿ ಸಾವಿನ ಭಯ. ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಕಾಡುವ ಇಂಥ ಭಯದ ಫೋಬಿಯಾಗಳು ಸಾವಿರ. ವ್ಯಕ್ತಿಯಿಂದ ವ್ಯಕ್ತಿಗೆ ಭಯದ ಕಾರಣಗಳು ಭಿನ್ನ.

    ಹಾಗೆ ನೋಡಿದರೆ, ಜೀವನದಲ್ಲಿ ದೊಡ್ಡ ಕನಸು, ಸಾಧನೆಯ ಹಾದಿಯಲ್ಲಿ ಪ್ರತಿಯೊಬ್ಬರನ್ನು ಕಟ್ಟಿಹಾಕುವುದು ಅವರೊಳಗಿನ ಭಯವೇ ಆಗಿರುತ್ತದೆ. ನಮ್ಮ ಕನಸುಗಳನ್ನು, ಗುರಿಗಳನ್ನು ನನಸಾಗಿಸಿಕೊಳ್ಳಬೇಕಾದರೆ ಭಯವನ್ನು ಗೆಲ್ಲಲೇಬೇಕು.

    ಮಹತ್ವಾಕಾಂಕ್ಷೆ ಇಟ್ಟುಕೊಳ್ಳುವುದು ಸುಲಭ. ಆದರೆ, ಅದರ ಸಾಕಾರದ ಕಡೆಗೆ ಹೆಜ್ಜೆ ಇಡುವುದು ಕಷ್ಟದ ಕೆಲಸ. ಏಕೆಂದರೆ, ಹೆಚ್ಚಿನ ಸಂದರ್ಭಗಳಲ್ಲಿ ವಿಫಲನಾದರೆ ಏನು ಗತಿ? ಜನರಿಂದ ಅಪಹಾಸ್ಯಕ್ಕೊಳಗಾದರೆ? ತಿರಸ್ಕಾರಗೊಂಡರೆ? ಮುಜುಗರವಾದರೆ? ನಮ್ಮ ಕೆಲಸಗಳಿಂದ ಯಾರಿಗೋ ತೊಂದರೆಯಾದರೆ? ನೋವಾದರೆ? ನಿರಾಸೆಯಾದರೆ? ಇತ್ಯಾದಿ ಇತ್ಯಾದಿ ಅಪಕಲ್ಪನೆಗಳಿಂದ ಹೆಜ್ಜೆ ಮುಂದಿಡುವುದೇ ಕಷ್ಟವಾಗುತ್ತದೆ. ಆದರೆ, ಒಂದಂತೂ ನಿಜ. ನಮ್ಮೊಳಗಿನ ಭಯವನ್ನು ಮೆಟ್ಟಿ ಒಂದು ಮಟ್ಟಿಗಿನ ಅಪಾಯ ಏನೇ ಇದ್ದರೂ ಎದುರಿಸುವ ಧೈರ್ಯ, ಪರಿಣಾಮ ಏನೇ ಆದರೂ ನಿಭಾಯಿಸುವ ಸಾಹಸ ಪ್ರವೃತ್ತಿ ಮೈಗೂಡಿಸಿಕೊಳ್ಳದೇ ಇದ್ದರೆ, ಜೀವನಪೂರ್ತಿ ವೈಫಲ್ಯದ ಹಣೆಪಟ್ಟಿ ಹೊತ್ತುಕೊಂಡೇ ತಿರುಗಬೇಕಾಗುತ್ತದೆ.

    ಭಯ ಎನ್ನುವುದು ಯಾವುದೋ ಬಾಹ್ಯ ಸಂಗತಿಯಲ್ಲ. ಅದು ಯಾರೋ ಸೃಷ್ಟಿಮಾಡಿ ಕಳುಹಿಸಿದ ದುಷ್ಟಜಂತುವಲ್ಲ. ಅದು ನಮ್ಮೊಳಗಿನ ಹಿತಶತ್ರು. ಭಯ ಎನ್ನುವುದು ನಮ್ಮ ಮನಸ್ಸಿನ ದೌರ್ಬಲ್ಯ ಹಾಗೂ ವಿಪರೀತಗಳನ್ನು ಕಲ್ಪಿಸಿಕೊಳ್ಳುವ ನಮ್ಮ ಭ್ರಮೆ. ಬಾಲ್ಯದಲ್ಲಿ ವಿವೇಚನಾ ಶಕ್ತಿ ಇನ್ನೂ ಬಲಿಯದ ವಯಸ್ಸಿನಲ್ಲಿ ಭಯ ಸಹಜ. ಆದರೆ, ನಮ್ಮ ಬೆಳವಣಿಗೆಯೊಂದಿಗೇ ಎಲ್ಲ ಬಗೆಯ ಭಯಗಳೂ ನಮ್ಮ ಸ್ವಕಲ್ಪಿತ, ಸ್ವನಿರ್ವಿುತ ಎಂಬ ವಾಸ್ತವಕ್ಕೆ ಎಚ್ಚೆತ್ತುಕೊಳ್ಳದೇಹೋದರೆ ಯಶಸ್ಸಿನ ಹಾದಿ ನಮಗೆ ಸಿಗುವುದೇ ಇಲ್ಲ.

    ಭಯದ ದೊಡ್ಡ ಸ್ನೇಹಿತನೆಂದರೆ ನಕಾರಾತ್ಮಕ ಚಿಂತನೆ. ನಮ್ಮ ಯಾವುದೇ ಕೆಲಸ, ಆಲೋಚನೆ, ಅನುಭವಗಳ ಕುರಿತು ನಕಾರಾತ್ಮಕವಾಗಿ ಯೋಚಿಸಿ ಕಾರ್ಯೋನ್ಮುಖರಾಗುವ ಮೊದಲೇ ಗುರಿಯಿಂದ ವಿಮುಖರಾಗಿ ಬಿಟ್ಟಿರುತ್ತೇವೆ. ಅನೇಕ ಬಾರಿ ನಮ್ಮ ಸುತ್ತ ನಾವೇ ನಿರ್ವಿುಸಿಕೊಂಡಿರುವ ಅನುಕೂಲವಲಯದಿಂದ, ಸುರಕ್ಷತಾ ವರ್ತಲದಿಂದ ಹೊರಬರಲಾಗದೆ, ವೈಫಲ್ಯಗಳನ್ನು ಸಮರ್ಥಿಸಿಕೊಳ್ಳಲು ನೆಪಗಳನ್ನು ಹುಡುಕುತ್ತಿರುತ್ತೇವೆ.

    ಆದರೆ, ಒಂದು ಅಂಶವನ್ನಂತೂ ಪ್ರತಿಯೊಬ್ಬರೂ ಮನಗಾಣಲೇಬೇಕು. ಭಯವೆನ್ನುವುದು ನಮ್ಮೊಳಗಿನಿಂದ ಉದ್ಭವವಾಗಿರುವ ಕಾರಣ ಅದನ್ನು ತೊಡೆದುಹಾಕುವುದಕ್ಕೂ ನಾವೇ ಪ್ರಯತ್ನಪಡಬೇಕು. ವಿಪರೀತದ ಕಪೋಲಕಲ್ಪಿತ ಅನಾಹುತಗಳಿಗೆ ಭಯಬಿದ್ದು ಕೈಕಟ್ಟಿ ಕೂರುವುದಕ್ಕಿಂತ ನಮ್ಮ ಮನಸ್ಸಿನ ಮೇಲೆ ಹತೋಟಿ ತಂದುಕೊಂಡರೆ ಅಲ್ಲಿಯೇ ಅರ್ಧಯುದ್ಧ ಗೆದ್ದಂತೆ. ಯಾವುದೇ ಕೆಲಸ, ಯೋಜನೆ, ಸಾಹಸ ಅಥವಾ ಮತ್ತೇನೋ ಪ್ರಾರಂಭಿಸುವಾಗಲೂ ಅದರೊಂದಿಗೆ ಮೂರು ಸಾಧ್ಯತೆಗಳಿರುತ್ತವೆ. ಒಂದು ಸಫಲವಾಗುವುದು, ವಿಫಲವಾಗುವುದು ಅಥವಾ ಅರ್ಧದಲ್ಲೇ ಕೈಚೆಲ್ಲುವುದು. ದೊಡ್ಡ ಉದ್ಯಮ ಆರಂಭಿಸುವುದಿರಲಿ ಅಥವ ಯಾವುದೋ ವಸ್ತುವಿಗೆ ಹತ್ತು ರೂ. ವೆಚ್ಚ ಮಾಡುವುದಿರಲಿ, ನಮ್ಮ ಬಂಡವಾಳ ಮರಳುವುದೇ? ಮುಳುಗುವುದೇ? ನಷ್ಟ ತಪ್ಪಿಸುವುದು ಹೇಗೆ? ಲಾಭ ಹೆಚ್ಚಿಸುವುದು ಹೇಗೆ? ಮಧ್ಯಂತರದ ಪರ್ಯಾಯ ಸಾಧ್ಯತೆಗಳೇನು? ಪ್ರಾರಂಭಕ್ಕೆ ಮುನ್ನಿನ ಮುನ್ನೆಚ್ಚರಿಕೆಗಳೇನು? ನಡುವಿನ ಹಾದಿ ಎಚ್ಚರಿಕೆಗಳೇನು? ಯಾವ ಹಂತದಲ್ಲಿ ನಮ್ಮ ನಡೆ ಏನಿರಬೇಕು? ಹೇಗಿರಬೇಕೆಂಬ ಪೂರ್ವಾಲೋಚನೆ, ಅದರ ಅನುಷ್ಠಾನ ಎಲ್ಲವೂ ಅಗತ್ಯ. ಇದೆಲ್ಲದರ ಜೊತೆಗೆ ಕಳೆದುಕೊಂಡರೆ ಹಣವನ್ನು ಮಾತ್ರ, ನನ್ನ ಅಸ್ತಿತ್ವವನ್ನಲ್ಲ, ಸ್ವಂತಿಕೆಯನ್ನಲ್ಲ ಎಂಬ ಆತ್ಮವಿಶ್ವಾಸ ನಮ್ಮಲ್ಲಿದ್ದರೆ ಅಂಥಲ್ಲಿ ಭಯಕ್ಕೆ ಅವಕಾಶವಿರದು.

    ಕುಳಿತವನು ಎಡವುದಿಲ್ಲ. ನಡೆಯುವಾಗಲಷ್ಟೇ ಎಡವಿ ಬೀಳುವ ಅಪಾಯವಿರುವುದು. ಬಿದ್ದರೆ ಅಪಮಾನ, ಅಪಾಯ ಎಂಬ ಹಿಂಜರಿಕೆಯಿಂದ ಪ್ರಯತ್ನ ಕೈಚೆಲ್ಲುವ ಬದಲು ಬಂದದ್ದೆಲ್ಲ ಬರಲಿ, ಎದುರಿಸಿ ಗೆಲ್ಲುವೆ ಎಂಬ ಮನೋಬಲದಿಂದ ಹೆಚ್ಚಿನ ಯಶಸ್ಸು ಸಾಧ್ಯ. ಯಾವ ನಷ್ಟದಿಂದ, ಅಪಾಯದಿಂದ ನಮ್ಮ ಬದುಕಿನ ದಿಕ್ಕು ಬದಲಾದೀತು ಎಂಬ ಭಯ ನಮಗಿರುವುದೋ, ಅದು ಸಂಭವಿಸದೇ ಇರುವಂತೆ ಎಲ್ಲ ಪ್ರಯತ್ನ ಮಾಡಿಯೇ ತೀರುತ್ತೇನೆ, ಗೆದ್ದೇ ಗೆಲ್ಲುವೆ ಒಂದು ದಿನ ಎಂಬ ಆಶಾಭಾವನೆ ನಮ್ಮನ್ನು ಗೆಲ್ಲಿಸುತ್ತದೆ.

    ಕೆಲವರಿಗೆ ವೈದ್ಯರೆಂದರೆ ಭಯ. ಸೂಜಿಯ ಭಯ. ಹಲವರಿಗೆ ಎತ್ತರದ ಭಯ. ಮಹಡಿಯಿಂದ ಕೆಳಗೆ ನೋಡುವುದಕ್ಕೂ ಅಂಜಿಕೆ. ಅನೇಕರಿಗೆ ನೀರು, ಬೆಂಕಿ ಕಂಡರೆ ದೂರ ಓಡುವಷ್ಟು ಅಂಜಿಕೆ. ಆದರೆ, ಒಂದಂತೂ ಸತ್ಯ. ದೂರ ಓಡುವುದರಿಂದ ಯಾವುದೇ ಭಯ ದೂರವಾಗುವುದಿಲ್ಲ. ಬದಲಿಗೆ ಎದುರಿಸಿ ನಿಲ್ಲುವುದರಿಂದ ಗೆಲ್ಲಬಹುದು. ನೀರಿನ ಭಯ ಇರುವವರು ಅವಶ್ಯವಾಗಿ ಈಜು ಕಲಿಯಲೇ ಬೇಕು. ಎತ್ತರದ ಭಯ ಇರುವವರು ಒಮ್ಮೆ ಎದೆ ಗಟ್ಟಿ ಮಾಡಿ ಭಂಗಿ ಜಂಪ್ ಅಥವಾ ಸ್ಕೈವಾಕಿಂಗ್ ಮಾಡಿದರೆ, ಜೀವನದಲ್ಲಿ ಮತ್ತೆಂದೂ ಅವರ ಬಳಿ ಎತ್ತರದ ಭಯ ಸುಳಿಯುವುದಿಲ್ಲ. ಇರುವುದೊಂದೇ ದೇಹ, ಇರುವುದೊಂದೇ ಜೀವ, ಸತ್ತರೆ ಮತ್ತೆಲ್ಲಿ ಬದುಕು ಎಂಬ ಭಯ ನಮ್ಮ ಸಾಹಸಪ್ರವೃತ್ತಿಗಳನ್ನು ಅದುಮಿರುತ್ತದೆ. ಆದರೆ, ಜೀವನ ಯಾರಿಗೂ ಶಾಶ್ವತವಲ್ಲ, ಯಾರೂ ಇಲ್ಲಿ ಚಿರಂಜೀವಿಗಳಲ್ಲ. ಬದುಕಿರುವಷ್ಟು ದಿನ ಧೈರ್ಯದಿಂದ ಬದುಕಿದರೆ ಉಳಿದವರಿಗೂ ಮಾದರಿ. ಹೇಡಿತನ ಯಾರಿಗೂ ಶೋಭೆಯಲ್ಲ.

    ಇನ್ನು, ಮಕ್ಕಳಿಗೆ ಪರೀಕ್ಷೆ ಸಂದರ್ಭದಲ್ಲೇ ಭಯ ಕಾಡುವುದಕ್ಕೂ ಅವರದ್ದೇ ಆದ ಕಾರಣಗಳಿರುತ್ತವೆ. ಕೈಯಲ್ಲಿನ ಐದು ಬೆರಳುಗಳೇ ಏಕರೂಪದಲ್ಲಿ ಇಲ್ಲದಿರುವಾಗ ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ಅಳತೆಗೋಲು ಹೇಗೆ ಸಾಧ್ಯ? ಕೆಲವು ಮಕ್ಕಳು ಜನ್ಮತಃ ಚುರುಕಾಗಿರುತ್ತಾರೆ. ಶಿಕ್ಷಕರು ಕಲಿಸುವ ವಿಧಾನ ಎಲ್ಲರಿಗೂ ಸಮಾನವಾಗಿದ್ದರೂ ಮಕ್ಕಳ ಗ್ರಹಿಕೆಯ ಶಕ್ತಿ, ಮನನದ ಶಕ್ತಿ, ಕಲಿಯುವ ಶಕ್ತಿ, ಜ್ಞಾಪಕಶಕ್ತಿ ವಿಭಿನ್ನವಾಗಿರುತ್ತದೆ. ಕೆಲವರು ನಿಧಾನವಾಗಿ ಕಲಿಯುತ್ತಾರೆ. ಕೆಲವರು ಶತಪ್ರಯತ್ನ ಪಟ್ಟರೂ ನಿರೀಕ್ಷಿತ ಫಲಿತಾಂಶ ಸಾಧ್ಯವಾಗುವುದಿಲ್ಲ. ಆದರೆ, ಮಕ್ಕಳ ಮೇಲೆ ಶಿಕ್ಷಕರ ಒತ್ತಡ, ತರಗತಿಯ ಒತ್ತಡ, ಸಹಪಾಠಿಗಳೊಂದಿಗೆ ಸ್ಪರ್ಧಾತ್ಮಕ ಮನೋಭಾವನೆಯಿಂದಾಗುವ ಒತ್ತಡ, ಅಂಕಗಳಿಕೆಗಾಗಿ ಪಾಲಕರು ಹೇರುವ ಒತ್ತಡ, ಶಾಲೆ, ಮನೆಯ ವಾತಾವರಣ, ಬೆಳೆಯುವ ಪರಿಸರ, ಮಕ್ಕಳ ಅನುದಿನ ಚಟುವಟಿಕೆಯಲ್ಲಿ ಗಮನ ಸೆಳೆಯುವ, ಎಳೆ ಮನಸ್ಸಿನ ಮೇಲೆ ಪ್ರಭಾವ ಬೀರುವ ಘಟನೆಗಳು ಹೀಗೆ ಒಂದೊಂದು ಸಣ್ಣಪುಟ್ಟ ಸಂಗತಿಗಳೂ ಮಹತ್ವದ್ದಾಗಿರುತ್ತದೆ. ಇಂಥ ಕಾರಣಗಳೇ ಅನೇಕ ಮಕ್ಕಳಲ್ಲಿ ಪರೀಕ್ಷೆಯೆಂದರೆ ಭಯ ಹುಟ್ಟುಹಾಕುವ ಕಾರ್ಖಾನೆಗಳಾಗಿರುತ್ತವೆ. ಇಂಥ ಭಯವನ್ನು ಹೋಗಲಾಡಿಸುವುದು ಆ ಮಗುವಿನ ಪರಿಸರದಲ್ಲಿ ಬಂದುಹೋಗುವ ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಹಾಗೆ ನೋಡಿದರೆ ಶಾಲೆ- ಕಾಲೇಜುಗಳಲ್ಲಿ ಸೆಮಿಸ್ಟರ್​ಗೊಮ್ಮೆ, ವರ್ಷಕ್ಕೊಮ್ಮೆ ಪರೀಕ್ಷೆ ಬಂದು ಹೋಗುತ್ತಿರುತ್ತದೆ. ಆದರೆ, ಜೀವನದಲ್ಲಿ ನಿತ್ಯವೂ ಪರೀಕ್ಷೆಯೇ. ಹಾಗಾಗಿ ಬದುಕಿನ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಶೈಕ್ಷಣಿಕ ಪರೀಕ್ಷೆಗಳು ಸಜ್ಜುಗೊಳಿಸಬೇಕು. ಬಿದ್ದೋನು ಏಳಬೇಕು, ಎದ್ದೋನು ಗೆಲ್ಲಬೇಕು. ಎಲ್ಲಿ ಭಯವಿಲ್ಲವೋ ಅಲ್ಲಿ ಜಯವಿರುತ್ತದೆ. ಅದಷ್ಟೇ ಸತ್ಯ.

    ಲೇಖಕರು: ವಿಜಯವಾಣಿ ಡೆಪ್ಯುಟಿ ಎಡಿಟರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts