More

    ಶಿವಾಜಿ ಸಾಮ್ರಾಜ್ಯದ ಮಹಾಪರಾಕ್ರಮಿ ತಾನಾಜಿ

    ಕೆಲವರು ಚರಿತ್ರೆ ಸೃಷ್ಟಿಸಲೆಂದೇ ಹುಟ್ಟಿರುತ್ತಾರೆ.

    ಶಿವಾಜಿ ಸಾಮ್ರಾಜ್ಯದ ಮಹಾಪರಾಕ್ರಮಿ ತಾನಾಜಿನಿನ್ನೆಗೆ ಸರಿಯಾಗಿ ಮುನ್ನೂರ ಐವತ್ತು ವರ್ಷ ಕೆಳಗೆ ಅಂಥ ಒಂದು ಇತಿಹಾಸ ಸೃಷ್ಟಿಯಾಯಿತು. ಛತ್ರಪತಿ ಶಿವಾಜಿ ಮಹಾರಾಜರ ಹಿಂದು ಸ್ವರಾಜ್ಯ ಕನಸಿನ ಸಾಕಾರದಲ್ಲಿ ಮಹತ್ವಪೂರ್ಣವಾದ ಕೊಂಡಣ ಕೋಟೆಯನ್ನು ದುಷ್ಟ ಮುಘಲರ ಕೈಯಿಂದ ಮರಳಿ ಪಡೆದುಕೊಂಡ ಅಪೂರ್ವ ಸಾಧನೆ ಅದು.

    1670ನೇ ಇಸವಿ ಫೆಬ್ರವರಿ 4ರ ರಾತ್ರಿ ಭಾರತದ ಇತಿಹಾಸದಲ್ಲಿ ಆಚಂದ್ರಾರ್ಕವಾಗಿ ನೆನಪಿನಲ್ಲುಳಿಯುವಂಥ ಆ ಮಹಾಕಾಳಗ ನಡೆಯಿತು. ಬ್ರಿಟಿಷರು, ಅರಬ್ಬರ ಶಸ್ತ್ರಾಸ್ತ್ರಗಳ ನೆರವು ಹೊಂದಿದ್ದ 2000ಕ್ಕೂ ಹೆಚ್ಚು ಸೈನಿಕರಿದ್ದ ಮುಘಲ್ ಸೈನ್ಯವನ್ನು ಕೇವಲ 300 ಸೈನಿಕರ ಶಿವಾಜಿ ಸೇನೆ ಹೆಡೆಮುರಿ ಕಟ್ಟಿ ಕೊಂಡಣ ಕೋಟೆಯನ್ನು ವಶಪಡಿಸಿಕೊಂಡಿತು. ಆ ಯಶಸ್ವಿ ಹೋರಾಟದ ನೇತೃತ್ವ ವಹಿಸಿದ್ದವರು ತಾನಾಜಿ ಮಾಲ್ಸುರೆ.

    ಉತ್ತರದಲ್ಲಿ ಮುಘಲಶಾಹಿ, ದಕ್ಷಿಣದಲ್ಲಿ ಆದಿಲ್​ಶಾಹಿ, ಹೈದರಾಬಾದ್​ನಲ್ಲಿ ನಿಜಾಮಶಾಹಿ ದರ್ಬಾರಿನ ನಡುವೆ ಪಶ್ಚಿಮ ಕರಾವಳಿಯ ಮೂಲಕ ವ್ಯಾಪಾರಿಗಳ ಸೋಗಿನಲ್ಲಿ ಭಾರತ ಪ್ರವೇಶಿಸಿ ಇಡೀ ದೇಶದ ಆಧಿಪತ್ಯಕ್ಕಾಗಿ ಹೊಂಚು ಹಾಕುತ್ತಿದ್ದ ಬ್ರಿಟಿಷ್, ಪೋರ್ಚುಗೀಸ್, ಫ್ರೆಂಚ್ ಮೊದಲಾದ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಸೆಡ್ಡುಹೊಡೆದು ಹಿಂದು ಸ್ವರಾಜ್ಯಕ್ಕಾಗಿ ಸಮರ್ಪಿಸಿಕೊಂಡ ಮಹಾವೀರ ಛತ್ರಪತಿ ಶಿವಾಜಿ. ವಿಜಾಪುರದ ಆದಿಲ್​ಶಾಹಿ ಆಶ್ರಯದಲ್ಲಿ ಸಾಮಂತನಾಗಿ ಅನೇಕ ಅವಮಾನ, ಅಪನಂಬಿಕೆಗಳನ್ನು ಅನುಭವಿಸಿಯೂ ಅಸಹಾಯಕನಾಗಿದ್ದ ಶಹಾಜಿ ಎಂಬ ಸ್ವಾಭಿಮಾನಿಯ ವೀರಪುತ್ರ ಶಿವಾಜಿ ಯಾವುದೇ ರಾಜ್ಯಬಲವಿಲ್ಲದೆ, ಸೈನ್ಯಬಲವಿಲ್ಲದೆ, ಧನಬಲ, ಅರಸೊತ್ತಿಗೆಯ ಪೂರ್ವೆತಿಹಾಸವಿಲ್ಲದೆ ಹಿಂದು ಸಾಮ್ರಾಜ್ಯ ಕಟ್ಟಿದ ಮಹಾಸೇನಾನಿ. 50 ವರ್ಷಗಳ ರಣಹೋರಾಟದ ಬದುಕಿನಲ್ಲಿ ಶಿವಾಜಿ ಒಂದೂ ಯುದ್ಧ ಸೋಲಲಿಲ್ಲ. ಆ ಸಂದರ್ಭದಲ್ಲಿ ಅಖಂಡಭಾರತ ಭೂಭಾಗದಲ್ಲಿ ಹತ್ತಾರು-ಹಲವಾರು ರಾಜಮನೆತನಗಳು ರಾಜ್ಯಭಾರ ಮಾಡುತ್ತಿದ್ದರೂ, ಅವರಲ್ಲಿ ಹೆಚ್ಚಿನವರು ಮುಘಲ ಸುಲ್ತಾನ ಔರಂಗಜೇಬನ ಪ್ರಾಬಲ್ಯ, ಕ್ರೌರ್ಯಕ್ಕೆ ತಲೆಬಾಗಿ, ತಮ್ಮ ಅರಸೊತ್ತಿಗೆಯನ್ನು, ಆತ್ಮಾಭಿಮಾನವನ್ನು ಅಷ್ಟೇ ಏಕೆ ಪರಿವಾರವನ್ನು ಅಡವಿಟ್ಟು ತಮ್ಮನ್ನು ತಾವು ಮಾರಿಕೊಂಡಿದ್ದರು. ಆದರೆ, ಶಿವಾಜಿ ಮಾತ್ರ ಔರಂಗಜೇಬನಿಗೆ ತಲೆಬಾಗಲಿಲ್ಲ. ಸೋಲಲಿಲ್ಲ. ಲಕ್ಷಲಕ್ಷ ಸಂಖ್ಯೆಯಲ್ಲಿ ಸೈನ್ಯವನ್ನು, ಮಹಾಮಹಾ ದಂಡನಾಯಕರನ್ನು ಯುದ್ಧಕ್ಕಟ್ಟಿಯೂ, ಸಾಮದಾನಭೇದದಂಡೋಪಾಯಗಳನ್ನು ಪ್ರಯೋಗಿಸಿಯೂ ಕೈಗೆ ಸಿಕ್ಕದ ಶಿವಾಜಿ ಸಲುವಾಗಿ ಖುದ್ದು ಔರಂಗಜೇಬನೇ ದೆಹಲಿ ಸಿಂಹಾಸನ ಮರೆತು ದಕ್ಷಿಣದ ರಣರಂಗದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ವರ್ಷ ಕಳೆದರೂ, ಶಿವಾಜಿ ಮುಘಲರಿಗೆ ತಲೆಬಾಗಲಿಲ್ಲ. ಶಿವಾಜಿ ನಂತರವೂ ಮರಾಠರು ಮೊಘಲರಿಗೆ ಮಣಿಯಲಿಲ್ಲ. ಅತ್ತ ಔರಂಗಜೇಬನೂ ಜೀವಂತವಾಗಿ ದೆಹಲಿಗೆ ಮರಳಲಿಲ್ಲ. ಸುದೀರ್ಘ ಕಾಲ ಶಿವಾಜಿ ಹಾಗೂ ತದನಂತರದ ಮರಾಠಾ ವೀರರ ವಿರುದ್ಧ ಯುದ್ಧದಲ್ಲಿ ಔರಂಗಜೇಬ ಜಝುರಿತನಾಗಿದ್ದರಿಂದಾಗಿ ಇಡೀ ಭರತಖಂಡವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವ ಆತನ ಹುನ್ನಾರವೂ ಕೈಗೂಡಲಿಲ್ಲ.

    ಶಿವಾಜಿ ಇದನ್ನೆಲ್ಲ ಸಾಧಿಸಿದ್ದು ಪ್ರಚಂಡವಾದ ಆತ್ಮಬಲದಿಂದ. ಸಂಕಲ್ಪಶಕ್ತಿಯಿಂದ. ತನ್ನ ಹೋರಾಟಕ್ಕೆ ಕೈಜೋಡಿಸಿದ ನಿಷ್ಠಾವಂತ ಒಡನಾಡಿಗಳ ನೆರವಿನಿಂದ. ಕೊಂಡಣ ಕೋಟೆಯನ್ನು ಗೆದ್ದುಕೊಟ್ಟ ತಾನಾಜಿ ಶಿವಾಜಿಯ ಪಾಲಿಗೆ ಅಂಥ ಓರ್ವ ಆತ್ಮಸಖ. ವಯಸ್ಸಿನಲ್ಲಿ ಶಿವಾಜಿಗಿಂತ ಮೂವತ್ತು ವರ್ಷ ಹಿರಿಯನಾಗಿದ್ದರೂ ತಾನಾಜಿ ತನ್ನ ನಾಯಕನ ಬಗೆಗೆ ಹೊಂದಿದ್ದ ಪ್ರೀತಿ, ಭಕ್ತಿ ಅನನ್ಯವಾದುದು. ಹಾಗೆ ನೋಡಿದರೆ, ನೆಚ್ಚಿನ ನಾಯಕನಿಗಾಗಿ ಆತ್ಮಾರ್ಪಣೆ ಮಾಡಿ ಶಿವಾಜಿಯ ಹಿಂದು ಸಾಮ್ರಾಜ್ಯಕ್ಕೆ ಅಡಿಗಲ್ಲಾದವರೇ ತಾನಾಜಿ, ಭಾಜಿಪ್ರಭು ದೇಶಪಾಂಡೆಯಂಥ ಮಹಾವೀರರು.

    ಮೊಘಲರ ಬೃಹತ್ ಸೈನ್ಯದ ನೇತೃತ್ವ ವಹಿಸಿ ದಂಡೆತ್ತಿ ಬಂದಿದ್ದ ರಜಪೂತ ಸೇನಾನಿ ರಾಜಾ ಜೈಸಿಂಹನ ವಿರುದ್ಧ ಶಿವಾಜಿ ಶಕ್ತಿಪ್ರದರ್ಶನ ಮಾಡಿ ಸೈನಿಕರನ್ನು ಬಲಿಕೊಡುವುದಕ್ಕಿಂತ ಯುಕ್ತಿಯಿಂದ ಬಂದ ಆಪತ್ತು ಸಾಗಹಾಕುವುದೇ ಮೇಲೆಂಬ ಆಲೋಚನೆಯಿಂದ ಪುರಂದರ ಒಪ್ಪಂದ ಮಾಡಿಕೊಳ್ಳುತ್ತಾನೆ. ಈ ಒಪ್ಪಂದದ ಪ್ರಕಾರ ಶಿವಾಜಿ ಮುಘಲರು ಹಾಗೂ ಬೇರೆಬೇರೆ ರಾಜರಿಂದ ಗೆದ್ದ ಅನೇಕ ಕೋಟೆಕೊತ್ತಳಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಶಿವಾಜಿಯ ಸಾಮ್ರಾಜ್ಯ ವಿಸ್ತರಣೆಗೆ ಅತ್ಯಂತ ಆಯಕಟ್ಟಿನ ಕೋಟೆಯಾಗಿದ್ದ ಕೊಂಡಣವನ್ನು ರಾಜಾ ಜೈಸಿಂಹ ಬಹಳ ಚಾಣಾಕ್ಷತನದಿಂದ, ಒತ್ತಾಯಪೂರ್ವಕವಾಗಿ ಪಡೆದುಕೊಳ್ಳುತ್ತಾನೆ. ಸಾಮ್ರಾಜ್ಯ ಸ್ಥಾಪನೆಯ ಮಹಾ ಕನಸಿನ ಸಾಕಾರಕ್ಕಾಗಿ ಈ ಹಿನ್ನಡೆಯ ನೋವನ್ನು ನುಂಗಿಕೊಳ್ಳುವ ಶಿವಾಜಿ, ರಾಜ ಜೈಸಿಂಹನ ಒತ್ತಾಸೆಯಂತೆ ಔರಂಗಜೇಬನ ಭೇಟಿಗೆ ಮಗ ಸಾಂಬಾಜಿಯೊಂದಿಗೆ ತೆರಳುತ್ತಾನೆ. ಔರಂಗಜೇಬನ ದರ್ಬಾರಿನಲ್ಲಿ ಮುಘಲ ಸಾಮ್ರಾಟನಿಗೆ ಹಿಂದು ಆತ್ಮಶಕ್ತಿಯ ಪರಿಚಯ ಮಾಡಿಸುವ ಶಿವಾಜಿ, ಮೋಸದಿಂದ ಗೃಹಬಂಧನದಲ್ಲಿರಿಸಿದಾಗಲೂ ಸಹಸ್ರಾರು ಸೈನಿಕರ ಪಹರೆಗೆ ಮಣ್ಣೆರಚಿ, ಮಿಠಾಯಿ ಡಬ್ಬದೊಳಗೆ ಅವಿತುಕೊಂಡು ತಪ್ಪಿಸಿಕೊಳ್ಳುತ್ತಾನೆ. ಇಲ್ಲಿಂದ ಔರಂಗಜೇಬ ಹಾಗೂ ಮುಘಲ್ ಸಾಮ್ರಾಜ್ಯದ ಪತನ ಪ್ರಾರಂಭಗೊಂಡರೆ, ಶಿವ ಸಾಮ್ರಾಜ್ಯದ ಉತ್ಥಾನಕ್ಕೂ ನಾಂದಿಯಾಗುತ್ತದೆ.

    ಔರಂಗಜೇಬನ ಸೆರೆಯಿಂದ ತಪ್ಪಿಸಿಕೊಂಡು ವೇಷ ಮರೆಸಿಕೊಂಡು ನಂಬಿಗಸ್ಥ ಅನುಯಾಯಿಗಳೊಂದಿಗೆ ಹೊರಟ ಶಿವಾಜಿ ಮಾರ್ಗಮಧ್ಯದಲ್ಲಿ ದಣಿವಾರಿಸಿಕೊಳ್ಳಲು ರೈತನೊಬ್ಬನ ಮನೆಯಲ್ಲಿ ಆಶ್ರಯ ಪಡೆಯುತ್ತಾನೆ. ರಾತ್ರಿ ಊಟದ ಸಮಯದಲ್ಲಿ ರೈತನ ಮಡದಿ ಶಿವಾಜಿ ಹಾಗೂ ಸಂಗಡಿಗರಿಗೆ ಬಾಳೆ ಎಲೆಯಲ್ಲಿ ಊಟ ಬಡಿಸುತ್ತಾಳೆ. ಎಲೆಯ ಮೇಲೆ ಬಡಿಸಿದ ಸಾರು ನೆಲಕ್ಕೆ ಹರಿದುಹೋಗುತ್ತಿರುವುದನ್ನು ಕಂಡ ರೈತಮಹಿಳೆ, ‘ಏನಪ್ಪ, ಕೋಟೆ ಭದ್ರಪಡಿಸಿಕೊಳ್ಳದೆ ಸಾಮ್ರಾಜ್ಯ ಕಟ್ಟಲು ಹೊರಟ ಶಿವಾಜಿ ಮಹಾರಾಜನಂತೆ ಬಡಿಸಿದ ಸಾರನ್ನು ನೆಲಕ್ಕೆ ಚೆಲ್ಲುತ್ತಿರುವೆ. ಸಾರು ಹರಿದುಹೋಗದಂತೆ ಅನ್ನದ ಕೋಟೆ ಕಟ್ಟುವುದಕ್ಕೂ ಹೇಳಿಕೊಡಬೇಕೇ’ ಎಂದು ತಮಾಷೆ ಮಾಡುತ್ತಾಳೆ. ಆಕೆ ತನ್ನ ಅತಿಥಿ ಯಾರೆಂದು ತಿಳಿಯದೆ ಆಡಿದ ಮಾತು ಶಿವಾಜಿಯನ್ನು ಎಚ್ಚರಿಸುತ್ತದೆ. ರಾಯಗಢ ಕೋಟೆಗೆ ಮರಳಿದ ಶಿವಾಜಿ ಪುರಂದರಗಢ ಒಪ್ಪಂದದಂತೆ ಮೊಘಲರಿಗೆ ಬಿಟ್ಟುಕೊಟ್ಟ ಎಲ್ಲ ಕೋಟೆ ಮರಳಿ ಪಡೆಯಲು ಯೋಜನೆ ರೂಪಿಸುತ್ತಾನೆ. ಶಿವಾಜಿ ತನ್ನ ಯೋಜನೆಯನ್ನು ಆಪ್ತರೊಂದಿಗೆ ವಿವರಿಸುವಾಗ ತಾಯಿ ಜೀಜಾಬಾಯಿ ಕೊಂಡಣದ ದಿಕ್ಕಿನಲ್ಲಿ ಕೈತೋರಿಸಿ ಮೊದಲು ಈ ಕೋಟೆ ಗೆಲ್ಲೆಂದು ಹುರಿದುಂಬಿಸುತ್ತಾಳೆ. ಆಗ ಕೊಂಡಣ ಗೆದ್ದುಬರುತ್ತೇನೆ, ಅಪ್ಪಣೆ ಕೊಡು. ಕೋಟೆ ಗೆಲ್ಲದಿದ್ದರೆ ಮತ್ತೆಂದೂ ನಿನಗೆ ಮುಖ ತೋರಿಸುವುದಿಲ್ಲ ಎಂದು ರಣವೀಳ್ಯ ಬೇಡುವುದು ಆಪ್ತ ತಾನಾಜಿ. ಅಂದ ಹಾಗೆ ಈ ಕೋಟೆಗೆ ಕೊಂಡಣ ಹೆಸರು ಬರಲು ಕಾರಣ ಈ ಸ್ಥಳ ಪ್ರಾಚೀನ ಕಾಲದಲ್ಲಿ ಕೌಂಡಿಣ್ಯ ಮಹರ್ಷಿಗಳ ತಪೋಭೂಮಿ ಆಗಿತ್ತೆಂಬುದು.

    ತಾನಾಜಿ ಆ ದಿನ ತನ್ನ ಕಿರಿಯ ಮಗನ ಮದುವೆಗೆ ಶಿವಾಜಿಯನ್ನು ಆಮಂತ್ರಿಸಲು ರಾಯಗಢಕ್ಕೆ ಬಂದಿರುತ್ತಾನೆ. ಆದರೆ, ಕೊಂಡಣ ಗೆಲ್ಲುವ ರಾಜಕಾರ್ಯದ ಮುಂದೆ ಗೃಹಕಾರ್ಯ ಮುಖ್ಯವಲ್ಲ ಎಂದು ಆತ ನಿರ್ಧರಿಸಿಬಿಡುತ್ತಾನೆ. ಶಿವಾಜಿಯ ಅನುಮತಿ ಪಡೆದು ಮುನ್ನೂರು ಸೈನಿಕರ ಪಡೆಯೊಂದಿಗೆ ಕೊಂಡಣದ ದಿಕ್ಕಿನಲ್ಲಿ ದೌಡಾಯಿಸುತ್ತಾನೆ. ಶಿವಾಜಿ ಗೆದ್ದ ನೂರಾರು ಕೋಟೆಗಳಲ್ಲೇ ಕೊಂಡಣ ಅತ್ಯಂತ ದುರ್ಗಮ ಹಾಗೂ ದುರ್ಭೆದ್ಯ. ತಡರಾತ್ರಿ, ಪ್ರತಿಕೂಲ ಹವಾಮಾನದ ನಡುವೆ ತಾನಾಜಿಯ ಪಡೆ ಕೋಟೆಯ ತಪ್ಪಲು ತಲುಪುತ್ತದೆ. ಈ ಕೋಟೆ ರಾಜಾ ಜೈಸಿಂಹನ ಆಪ್ತ, ಪರಾಕ್ರಮಿ ರಜಪೂತ ಉದಯಭಾನು ಸಿಂಗ್ ರಾಥೋಡ್ ಸುಪರ್ದಿಯಲ್ಲಿರುತ್ತದೆ. ಆದರೆ, ತಡರಾತ್ರಿ ಮುಘಲ್ ಸೈನ್ಯ ನಿದ್ರೆಯಲ್ಲಿರುವಾಗ ತಾನಾಜಿ ಕೋಟೆಯ ಹಿಂಭಾಗದ ಬೃಹತ್ ಶಿಲಾಗೋಡೆಯ ಮೂಲಕ ಕೋಟೆ ಪ್ರವೇಶಿಸುವ ತಂತ್ರ ರೂಪಿಸುತ್ತಾನೆ. ತನ್ನ ಜೊತೆಯಲ್ಲಿದ್ದ ಯಶ್ವಂತಿ ಎಂಬ ಉಡದ ತಲೆಗೆ ಅರಿಶಿನ ಕುಂಕುಮ ಹಚ್ಚಿ ನಮಸ್ಕರಿಸಿ ನಮ್ಮೆಲ್ಲರನ್ನೂ ನೀನೇ ಕೋಟೆ ಒಳಗೆ ತಲುಪಿಸಬೇಕು ಎಂದು ಬೇಡಿಕೊಳ್ಳುತ್ತಾನೆ. ಅರ್ಧಕೋಟೆ ಏರಿದ್ದ ಉಡ ಜಾರಿ ಬಿದ್ದಾಗ ಕ್ರುದ್ಧನಾಗುವ ತಾನಾಜಿ ನಿನ್ನನ್ನೂ ಸಾಯಿಸಿ ನಾನೂ ಸಾಯುತ್ತೇನೆ ಹೊರತು ಮರಳಿ ಹೋಗುವುದಿಲ್ಲ ಎಂದು ಅಬ್ಬರಿಸುತ್ತಾನೆ. ಉಡ ಕೋಟೆಯನ್ನೇರಿದ ಮೇಲೆ ಅದಕ್ಕೆ ಕಟ್ಟಿದ ಹಗ್ಗದ ನೆರವಿನಿಂದ ಮುನ್ನೂರು ಸೈನಿಕರೂ ಕೋಟೆ ಪ್ರವೇಶಿಸುತ್ತಾರೆ. ಮರಾಠಾ ಪಡೆಯ ಅನಿರೀಕ್ಷಿತ ದಾಳಿಯಿಂದ ಕಂಗಾಲಾಗುವ ಸಹಸ್ರಸಹಸ್ರ ಸಂಖ್ಯೆಯ ಮೊಘಲ ಪಡೆ ಪ್ರತಿದಾಳಿ ನಡೆಸಲು ಅವಕಾಶವೇ ಸಿಗುವುದಿಲ್ಲ. ಆದರೆ, ಈ ಮಹಾಹೋರಾಟದಲ್ಲಿ ಉದಯಭಾನು ಸಿಂಗ್ ರಾಥೋಡನನ್ನು ಚಿತ್ತಾಗಿಸುವ ಯತ್ನದಲ್ಲಿ ಎಪ್ಪತ್ತು ವರ್ಷದ ಸೇನಾನಿ ತಾನಾಜಿ ಆತ್ಮಸಮರ್ಪಣೆಯಾಗುತ್ತದೆ. ಹೀಗಾಗಿ, ಶಿವಾಜಿ ಸಹಿತ ಯಾರಿಗೂ ಕೊಂಡಣ ಗೆದ್ದ ಸಂಭ್ರಮ ಇರುವುದಿಲ್ಲ. ‘ಕೋಟೆಯನ್ನು ಗೆದ್ದೆವು, ಆದರೆ, ಸಿಂಹವನ್ನು ಕಳೆದುಕೊಂಡೆವು’ ಎಂದು ಶಿವಾಜಿ ನಿಡುಸುಯ್ಯುತ್ತಾನೆ. ತಾನಾಜಿ ನೆನಪಿನಲ್ಲೇ ಕೊಂಡಣಕ್ಕೆ ಸಿಂಹಗಢ ಎಂದು ಶಿವಾಜಿ ನಾಮಕರಣ ಮಾಡುತ್ತಾನೆ.

    ಭಾರತದ ವೀರ ಇತಿಹಾಸದಲ್ಲಿ ತಾನಾಜಿಯಂಥ ಪರಾಕ್ರಮಿಗಳು, ಸಾಮ್ರಾಜ್ಯನಿಷ್ಠೆಯ ಕಲಿಗಳು, ದೇಶ ಮೊದಲು ಎಂದು ತಮ್ಮ ಸರ್ವಸ್ವವನ್ನೂ ಸಮರ್ಪಿಸಿಕೊಳ್ಳುವ ತ್ಯಾಗಜೀವಿಗಳು ವಿರಳ. ಶಿವಾಜಿಯ ಹಿಂದು ಸ್ವರಾಜ್ಯ ಸಂಕಲ್ಪದ ಹಿಂದಿನ ಶಕ್ತಿಯೇ ಇಂಥ ನಿಷ್ಠಾವಂತರು. ಆದರೆ, ವರ್ತಮಾನದಲ್ಲಿ ಇಂಥ ವೀರಪರಂಪರೆಯನ್ನು ತಿಳಿದುಕೊಳ್ಳುವ ಯೋಗ ಹೆಚ್ಚಿನವರಿಗಿಲ್ಲ. ಕಾರಣ ನಮ್ಮ ಪಠ್ಯಗಳಲ್ಲಿ, ಚರಿತ್ರೆಯ ಪುಸ್ತಕಗಳಲ್ಲಿ ಇಂಥ ನಿಸ್ವಾರ್ಥದ ಕಥೆಗಳಿಗೆ ಜಾಗವಿಲ್ಲ. ಆದರೂ, ಸತ್ಯವನ್ನು ಬಚ್ಚಿಡಲು, ಮುಚ್ಚಿಡಲು ಸಾಧ್ಯವಿಲ್ಲ. ಎಷ್ಟೇ ಕತ್ತಲ ಕೊಠಡಿಯಲ್ಲಿಟ್ಟರೂ ಒಂದಲ್ಲ ಒಂದು ಸಂದರ್ಭದಲ್ಲಿ ಇತಿಹಾಸದ ಸತ್ಯಗಳು ಬೆಳಕಿಗೆ ಬರಲೇಬೇಕು. ಮಹಾರಾಷ್ಟ್ರದಲ್ಲಿ, ಮರಾಠಾ ಪರಂಪರೆಯಲ್ಲಿ ದಂತಕಥೆಯೇ ಆಗಿಹೋಗಿರುವ ತಾನಾಜಿಯಂಥ ವೀರರ ಕಥೆಗಳು ಸಹ ಈಗೀಗ ಚಲನಚಿತ್ರಗಳ ಮೂಲಕವೂ ಜನರನ್ನು ತಲುಪುತ್ತಿವೆ. ಇತ್ತೀಚೆಗೆ ಬಾಲಿವುಡ್ ಚಿತ್ರವಾಗಿ ತೆರೆಕಂಡಿರುವ ತಾನಾಜಿ ಮಾಲ್ಸುರೆಯ ಧೀರಗಾಥೆ ಸದ್ಯ ಜನಮನ ಗೆದ್ದಿದೆ. ನಟ ಅಜಯ್ ದೇವಗನ್ ತಾನಾಜಿಯಾಗಿ ನಟಿಸಿರುವ ಈ ಚಿತ್ರ ದೇಶದ ಮೂಲೆಮೂಲೆಯಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಯಶಸ್ಸಿನ ನಾಗಾಲೋಟ ಕಂಡಿರುವುದು ನಮ್ಮ ವೀರಪರಂಪರೆಯ ಬಗ್ಗೆ ಭಾರತೀಯರಿಗಿರುವ ಹೆಮ್ಮೆ, ಅಭಿಮಾನಕ್ಕೆ ಸಾಕ್ಷಿ. ‘ತಾನಾಜಿ’ ಚಿತ್ರವನ್ನು ಇದುವರೆಗೂ ನೋಡದೇ ಇರುವವರು ಚಿತ್ರ ಪರದೆಯಿಂದ ಮಾಯವಾಗುವ ಮುನ್ನ ಒಮ್ಮೆ ನೋಡಿ.
    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts