More

    ಕ್ವಾರಂಟೈನ್ ವಾಸದ ಐತಿಹಾಸಿಕ ಮೆಲುಕು

    ನುಷ್ಯ ಸಂಘಜೀವಿ. ಎಂಥ ಸಂದರ್ಭದಲ್ಲೂ ಒಬ್ಬಂಟಿಯಾಗಿ ಇರಲಾರ. ಅದರಲ್ಲೂ ಬಲವಂತದ ಏಕಾಂತವಾಸವೆಂದರೆ ಅದಕ್ಕಿಂತ ದೊಡ್ಡ ಶಿಕ್ಷೆ ಬೇರೊಂದಿಲ್ಲ. ಆದರೆ, ಜಗತ್ತನ್ನೇ ವ್ಯಾಪಿಸಿರುವ ಕರೊನಾ ಮಹಾಮಾರಿ ಜನರಿಗೆ ಜನಜಂಗುಳಿಯಿಂದ ದೂರದೂರ, ಪ್ರತ್ಯೇಕವಾಗಿರುವುದನ್ನು ಕಲಿಸಿಕೊಡುತ್ತಿದೆ. ಕಡ್ಡಾಯ ಲಾಕ್​ಡೌನ್, ಸೀಲ್​ಡೌನ್, ಐಸೊಲೇಷನ್, ಕ್ವಾರಂಟೈನ್ ಮೊದಲಾದ ಅಪರಿಚಿತ ಜೀವನಕ್ರಮಗಳನ್ನು ಪರಿಚಯಿಸುತ್ತಿದೆ. ಸಾಂಕ್ರಾಮಿಕ ರೋಗದ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬದಂತೆ ತಡೆಗಟ್ಟುವುದಕ್ಕೆ ಇಂಥ ಕಟ್ಟುನಿಟ್ಟಿನ ಕ್ರಮಗಳು ಅನಿವಾರ್ಯವೂ ಆಗಿದೆ. ಹಾಗೆ ನೋಡಿದರೆ, ರೋಗ ನಿವಾರಕ ಲಸಿಕೆಗಳು ಲಭ್ಯವಾಗುವವರೆಗೂ ಪ್ರತಿಯೊಂದು ರೋಗವೂ ಮಾರಣಾಂತಿಕವೇ. ಸದ್ಯ ಕರೊನಾ ವ್ಯಾಧಿಗೂ ಔಷಧ ಸಿದ್ಧಗೊಳ್ಳದೇ ಇರುವ ಕಾರಣ ಅದು ಜಗತ್ತನ್ನೇ ತನ್ನ ಬೆರಳ ತುದಿಯಲ್ಲಿ ಕುಣಿಸುತ್ತಿದೆ. ಇಂಥ ವಿಷಮ ಸನ್ನಿವೇಶದಲ್ಲಿ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ, ಈ ಭೂಮಿ ಶತಮಾನದಿಂದ ಶತಮಾನಕ್ಕೆ, ಕಾಲಕಾಲಕ್ಕೆ ಇಂಥ ಅನೇಕ ಸೋಂಕು ಮಾರಿಗಳನ್ನು, ಅದರಿಂದ ಬಲವಂತ ಪ್ರತ್ಯೇಕವಾಸಗಳನ್ನು ಕಂಡಿದೆ. ಅಂಥ ಒಂದಷ್ಟು ಜಾಗತಿಕ ಸೋಂಕಿನ ಪ್ರಕರಣಗಳು, ಆ ಸಂದರ್ಭದಲ್ಲಿ ಅನುಸರಿಸಿದ ಕ್ವಾರಂಟೈನ್ ಪ್ರಸಂಗಗಳ ಮೆಲುಕು ಇಲ್ಲಿದೆ.

    ಕ್ವಾರಂಟೈನ್ ವಾಸದ ಐತಿಹಾಸಿಕ ಮೆಲುಕುಯುರೋಪಿನ ಪ್ಲೇಗ್ ಮಾರಿ: 1370ರಲ್ಲಿ ಯುರೋಪ್ ಹಾಗೂ ಏಷ್ಯಾದಲ್ಲಿ ಕಾಣಿಸಿಕೊಂಡ ಪ್ಲೇಗ್ ಮಹಾಮಾರಿ ಸುಮಾರು 2 ಕೋಟಿ ಜನರನ್ನು ಬಲಿ ಪಡೆಯಿತು. ಆ ಕಾಲದಲ್ಲಿ ಯುರೋಪಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದ ಇಟಲಿಯ ವೆನಿಸ್​ನ ಬೃಹತ್ ಬಂದರಿನಲ್ಲಿ ಕ್ವಾರಂಟೈನ್ ನಿಯಮ ಅಳವಡಿಸಿಕೊಳ್ಳಲಾಗಿತ್ತು. ವೆನಿಸ್​ಗೆ ಬರುವ ಹಡಗುಗಳಿಗೆ 40 ದಿನಗಳ ಕಾಲ ಬಂದರು ಪ್ರವೇಶ ನಿರ್ಬಂಧಿಸಿ ಕ್ವಾರಂಟೈನ್ ವಿಧಿಸಲಾಗುತ್ತಿತ್ತು. ವೆನಿಸ್ ಬಂದರುಕಟ್ಟೆಯಿಂದ ತುಸು ದೂರದಲ್ಲಿದ್ದ ದ್ವೀಪವೊಂದರಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಲಾಗಿತ್ತು. ಹಡಗಿನಲ್ಲಿದ್ದ ಜನ ಆ ದ್ವೀಪ ಕೇಂದ್ರದಲ್ಲಿ 40 ದಿನಗಳನ್ನು ಕಳೆದು ಬದುಕಿಬಂದರೆ, ವೆನಿಸ್ ನಗರದೊಳಕ್ಕೆ ಬಿಟ್ಟುಕೊಳ್ಳಲಾಗುತ್ತಿತ್ತು. ಈ 40 ದಿನಗಳ ಏಕಾಂತವಾಸವನ್ನೇ ಇಟಲಿ ಭಾಷೆಯಲ್ಲಿ ಕ್ವಾರಂಟಿನ ಎಂದು ಕರೆಯಲಾಯಿತು. ಮುಂದಿನ ದಿನಗಳಲ್ಲಿ ಅದೇ ಕ್ವಾರಂಟೈನ್ ಎಂದು ರೂಢಿಗೆ ಬಂತು. ಪ್ರತ್ಯೇಕಿಸಿಡುವ ಅವಧಿಯನ್ನು ಮೂವತ್ತು ದಿನಗಳಿಗೆ (ಟ್ರೆಂಟಿನಾರಿಯೊ) ಇಳಿಸಿದರೂ, ಕ್ವಾರಂಟೈನ್ ಎಂಬ ಮೂಲ ಹೆಸರು ಉಳಿದುಕೊಂಡಿತು.

    ಕಾಮಾಲೆ ಕಾಟ: ಫಿಲಡೆಲ್ಪಿಯಾದಲ್ಲಿ 1793ರಲ್ಲಿ ಉಲ್ಬಣಗೊಂಡ ಜಾಂಡೀಸ್​ನಿಂದಾಗಿ ಎರಡು ವರ್ಷಗಳ ಅವಧಿಯಲ್ಲಿ ಸಹಸ್ರಾರು ಜನ ಮರಣಿಸಿದರು. ಸಾವಿರಾರು ಜನ ನಗರ ಬಿಟ್ಟು ದೇಶಾಂತರ ಹೋದರು. ವಾಷಿಂಗ್ಟನ್​ನಲ್ಲಿ ಅಮೆರಿಕದ ನೂತನ ರಾಜಧಾನಿ ನಿರ್ಮಾಣವಾಗುತ್ತಿದ್ದ ಆ ಕಾಲಘಟ್ಟದಲ್ಲಿ ಫಿಲಡೆಲ್ಪಿಯಾ ದೇಶದ ತಾತ್ಕಾಲಿಕ ರಾಜಧಾನಿಯಾಗಿತ್ತು. ಸೊಳ್ಳೆಗಳ ಮೂಲಕ ಹರಡುತ್ತಿದ್ದ ಜಾಂಡೀಸ್ ಇಡೀ ನಗರವನ್ನು ವ್ಯಾಪಿಸುತ್ತಿದ್ದಂತೆಯೇ ಆಡಳಿತಗಾರರು ರೋಗವನ್ನು ಎದುರಿಸುವ ಬದಲು ನಗರವನ್ನೇ ತೊರೆದು ವಾಷಿಂಗ್ಟನ್ ಸೇರಿಕೊಂಡರು. ಆ ದಿನಗಳಲ್ಲಿ ನಗರದ ಹೊರವಲಯದಲ್ಲಿದ್ದ ಲಾಝುರೆಟ್ಟೊ ಆಸ್ಪತ್ರೆಯಲ್ಲಿ ನಾವಿಕರನ್ನು ಕ್ವಾರಂಟೈನ್ ಮಾಡಲಾಗಿತ್ತು. ಲಾಝುರೆಟ್ಟೋ ಈಗಲೂ ಅಸ್ತಿತ್ವದಲ್ಲಿರುವ ಅಮೆರಿಕದ ಅತ್ಯಂತ ಪುರಾತನ ಕ್ವಾರಂಟೈನ್ ಆಸ್ಪತ್ರೆಯಾಗಿದೆ.

    ತಿಗಣೆ ಅಲರ್ಜಿ: 1892ರಲ್ಲಿ ರಷ್ಯಾದಿಂದ ಜ್ಯೂಯಿಷ್ ವಲಸಿಗರನ್ನು ಹೊತ್ತ ನೌಕೆಯೊಂದು ಅಮೆರಿಕದ ಎಲ್ಲಿಸ್ ದ್ವೀಪಕ್ಕೆ ಆಗಮಿಸಿತ್ತು. ಅದರಲ್ಲಿ ಅಗ್ಗದ ದರ್ಜೆಯ ಕ್ಯಾಬಿನ್​ನಲ್ಲಿ ಆಗಮಿಸಿದ್ದ ವಲಸಿಗರು ತಿಗಣೆಗಳ ಕಡಿತದಿಂದ ವಿಚಿತ್ರ ಸೋಂಕು ಅಂಟಿಸಿಕೊಂಡು ಬಂದಿದ್ದರು. ಅವರಿಂದಾಗಿ ಇಡೀ ನಗರದಲ್ಲಿ ಟೈಫಸ್ ಜ್ವರ ಹಬ್ಬಿತು. ಈ ಜ್ವರದ ಮೂಲ ಪತ್ತೆ ಹಚ್ಚುವ ಹೊತ್ತಿಗೆ ಆ ಜ್ಯೂಯಿಷ್ ವಲಸಿಗರು ದೇಶದ ಮೂಲೆಮೂಲೆಯ ಪ್ರದೇಶಗಳಲ್ಲಿ ಬೆರೆತುಹೋಗಿದ್ದರು. ಅವರಲ್ಲಿ ಸುಮಾರು 70 ಜನರನ್ನು ಹುಡುಕಿ ಕ್ವಾರಂಟೈನ್​ನಲ್ಲಿಡಲಾಯಿತು. ಇದರ ಬೆನ್ನಲ್ಲೇ ಮತ್ತಷ್ಟು ರಷ್ಯನ್ ವಲಸಿಗರನ್ನು ಹೊತ್ತು ತಂದ ಹಡಗಿನಿಂದ ನ್ಯೂಯಾರ್ಕ್ ನಲ್ಲಿ ಕಾಲರಾ ಹರಡಿತು. ರಷ್ಯಾ ವಲಸಿಗರನ್ನು ದೇಶಕ್ಕೆ ಸೇರಿಸಬಾರದು ಎಂಬ ಜನಾಕ್ರೋಶ ಆ ಸಂದರ್ಭದಲ್ಲಿ ಭುಗಿಲೆದ್ದಿತ್ತು.

    ಸ್ಯಾನ್​ಫ್ರಾನ್ಸಿಸ್ಕೋ ಪ್ಲೇಗ್: 1900ರಲ್ಲಿ ಸ್ಯಾನ್​ಫ್ರಾನ್ಸಿಸ್ಕೋದ ಚೈನಾಟೌನ್ ಪ್ರದೇಶವನ್ನು ಸೀಲ್​ಡೌನ್ ಮಾಡಿ ಜನರ ಓಡಾಟ ನಿಷೇಧಿಸಲಾಗಿತ್ತು. ಇದಕ್ಕೆ ಕಾರಣ ಅಲ್ಲಿನ ಹೋಟೆಲ್ ಒಂದರಲ್ಲಿ ಪ್ಲೇಗ್ ಪೀಡಿತ ಚೀನೀ ವ್ಯಕ್ತಿಯೊಬ್ಬ ಮರಣಿಸಿದ್ದು. ಕೆಲವು ದಿನಗಳ ನಂತರ ಕ್ವಾರಂಟೈನ್ ಹಿಂದಕ್ಕೆ ಪಡೆದುಕೊಂಡರೂ, ಈ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಸಾವಿರಾರು ಚೀನಾ ಕಾರ್ವಿುಕರು ನೌಕರಿ ಕಳೆದುಕೊಂಡರು. ಎಲ್ಲ ಚೀನಿ ವಲಸಿಗರನ್ನು ಸಾಮೂಹಿಕವಾಗಿ ಗಡಿಪಾರು ಮಾಡಬೇಕೆಂಬ ಬೇಡಿಕೆ ಜೋರಾಗಿತ್ತು.

    ಟೈಫಾಯ್ಡ್​  ಮೇರಿ: 1907ರಲ್ಲಿ ನ್ಯೂಯಾರ್ಕ್ ನಲ್ಲಿ ಓರ್ವ ಅಡುಗೆ ಹೆಂಗಸಿನ ಮೂಲಕ ಟೈಫಾಯ್್ಡ ಹಬ್ಬಿತ್ತು. ಆಕೆ ಐರ್ಲೆಂಡ್ ಮೂಲದ ಯುವತಿ ಮೇರಿ ಮ್ಯಾಲನ್. ಟೈಫಾಯ್್ಡೆ ತುತ್ತಾಗಿದ್ದ ಮೇರಿ ಕಾಯಿಲೆ ಮುಚ್ಚಿಟ್ಟು ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದಳು. ಆಕೆ ಮಾಡಿದ ಅಡುಗೆ ಸೇವಿಸಿದ ಅನೇಕರು ಜ್ವರ, ಅಮಶಂಕೆ ತೀವ್ರಗೊಂಡು ಸಾವನ್ನಪ್ಪಿದರು. ಈ ವಿಚಾರ ತಿಳಿದ ಅಧಿಕಾರಿಗಳು ನಾರ್ಥ್ ನಾಥ್ ಬ್ರದರ್ ದ್ವೀಪದಲ್ಲಿ ಈಕೆಗೆ ಮೂರು ವರ್ಷ ಕ್ವಾರಂಟೈನ್ ಶಿಕ್ಷೆ ವಿಧಿಸಿದರು. ಅದಾದ ಬಳಿಕ ಎಲ್ಲೂ ಅಡುಗೆ ಕೆಲಸ ಮಾಡಬಾರದೆಂಬ ನಿರ್ಬಂಧ ವಿಧಿಸಿ ಆಕೆಯನ್ನು ವಾಪಸ್ ಕರೆಸಿಕೊಳ್ಳಲಾಯಿತು. ಆದರೆ, ಆಕೆ ತನ್ನ ವಾಗ್ದಾನ ಮುರಿದು ಮತ್ತೆ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದರಿಂದ 1915ರಲ್ಲಿ ಆಕೆಯನ್ನು ಜೀವನಪರ್ಯಂತ ಅದೇ ದ್ವೀಪದಲ್ಲಿ ಕ್ವಾರಂಟೈನ್ ಶಿಕ್ಷೆಗೆ ಗುರಿಪಡಿಸಲಾಯಿತು. 23 ವರ್ಷ ಬಳಿಕ ಆಕೆ ಕ್ವಾರಂಟೈನ್​ನಲ್ಲೇ ಮರಣಿಸಿದಳು.

    ಫ್ಲು ಮಾರಿ: 1917 -19ರ ಅವಧಿಯಲ್ಲಿ ಜಾಗತಿಕವಾಗಿ 5 ಕೋಟಿ ಜನರ ಬಲಿ ಪಡೆದ ಫ್ಲು ಮಹಾಮಾರಿಯ ಸಂದರ್ಭದಲ್ಲಿ ಯುರೋಪ್ ಮತ್ತು ಅಮೆರಿಕದಲ್ಲಿ ವ್ಯಾಪಕವಾಗಿ ಕ್ವಾರಂಟೈನ್ ಮತ್ತು ಐಸೊಲೇಶನ್ ನಿಯಮಗಳನ್ನು ಪಾಲಿಸಲಾಯಿತು. ಶಾಲೆಗಳನ್ನು ಮುಚ್ಚಲಾಯಿತು. ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಿಷೇಧಿಸಲಾಯಿತು. ಕೆಮ್ಮು ಮತ್ತು ಸೀನಿನ ಮೂಲಕ ಹಬ್ಬುತ್ತಿದ್ದ ಈ ಜ್ವರದಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪರಿಕಲ್ಪನೆ ಪ್ರಚಲಿತಕ್ಕೆ ಬಂದಿತು.

    ಏಡ್ಸ್​ಗೂ ಕ್ವಾರಂಟೈನ್: 1980ರಲ್ಲಿ ಅಮೆರಿಕದಲ್ಲಿ ಏಡ್ಸ್ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದ ಸಂದರ್ಭದಲ್ಲಿ ಈ ರೋಗಿಗಳನ್ನೆಲ್ಲ ಕ್ವಾರಂಟೈನ್​ಗೆ ಹಾಕಬೇಕೆಂಬ ಆಗ್ರಹ ಕೇಳಿಬಂತು. ಆದರೆ, ಇದು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಮಾತ್ರ ಹಬ್ಬುವ ವ್ಯಾಧಿ ಎಂದು ಮನವರಿಕೆಯಾದ ಮೇಲೆ ಈ ಆಗ್ರಹ ಕ್ಷೀಣಿಸಿತು.

    ಸಾರ್ಸ್ ಕಂಟಕ: 2003ರಲ್ಲಿ ಹಲವು ದೇಶಗಳಲ್ಲಿ ಸಾರ್ಸ್ ಸೋಂಕು ಭೀತಿ ಮೂಡಿಸಿದ್ದ ಸಂದರ್ಭದಲ್ಲಿ ಕೆನಡಾ ಮತ್ತು ಚೀನಾ ಅತಿರೇಕದ ಮುನ್ನೆಚ್ಚರಿಕೆ ತೆಗೆದುಕೊಂಡವು. ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟರೆ ಆತನ ಸಂಪರ್ಕದಲ್ಲಿರುವವರನ್ನೆಲ್ಲ ಜಾಲಾಡಿ ಸುಮಾರು 100 ಜನರನ್ನು ಕ್ವಾರಂಟೈನ್​ಗೆ ಹಾಕಲಾಯಿತು. ಕೆನಡಾದಲ್ಲಿ ಒಟ್ಟು 250 ಪ್ರಕರಣಗಳಷ್ಟೇ ದೃಢ ಪಟ್ಟರೂ ಸುಮಾರು 30 ಸಾವಿರ ಜನರನ್ನು ವಿವಿಧ ಆಸ್ಪತ್ರೆ ಹಾಗೂ ಅವರ ಮನೆಗಳಲ್ಲಿ ಕ್ವಾರಂಟೈನ್ ನಿರ್ಬಂಧಕ್ಕೆ ಗುರಿಪಡಿಸಲಾಗಿತ್ತು. ಅದೇ ರೀತಿ ಚೀನಾದಲ್ಲೂ 2500 ಪ್ರಕರಣಗಳಿದ್ದರೂ 30 ಸಾವಿರ ಜನರನ್ನು ದಿಗ್ಬಂಧನಕ್ಕೊಳಪಡಿಸಲಾಗಿತ್ತು.

    ಕ್ಷಯಭೀತಿ: ಅಟ್ಲಾಂಟದ ವಕೀಲ ಆಂಡ್ರೂ್ಯ ಸ್ಪೀಕರ್ 2007ರಲ್ಲಿ ತೀವ್ರ ಕ್ಷಯರೋಗದ ಸೋಂಕಿನ ಪರೀಕ್ಷೆಗೆ ಒಳಪಟ್ಟಿದ್ದರು. ಇದರ ಫಲಿತಾಂಶ ಬರುವ ಮುನ್ನವೇ ಅವರು ಮದುವೆ ಮಾಡಿಕೊಂಡು ಹನಿಮೂನ್ ಸಲುವಾಗಿ ಯುರೋಪಿನ ಪ್ಯಾರಿಸ್, ಅಥೆನ್ಸ್, ಮೈಕೊನೊಸ್ ದ್ವೀಪ, ರೋಮ್ ಮತ್ತು ಪ್ರೇಗ್ ನಗರಗಳಲ್ಲಿ ಸುತ್ತಾಡಿ ಕೆನಡಾದ ಮಾಂಟ್ರಿಯಲ್​ಗೆ ಬಂದಿದ್ದರು. ಅಲ್ಲಿಂದ ಅಮೆರಿಕಕ್ಕೂ ಮರಳಿದರು. ಕೊನೆಗೂ ಅವರನ್ನು ಕಡ್ಡಾಯ ಕ್ವಾರಂಟೈನ್​ಗೆ ಗುರಿಪಡಿಸಲಾಯಿತು. ಆಶ್ಚರ್ಯವೆಂದರೆ, ಆತನಿಂದ ಯಾರಿಗೂ ರೋಗ ಹರಡಿರಲಿಲ್ಲ.

    ಎಬೊಲಾ ಡೇಂಜರ್: ಪಶ್ಚಿಮ ಆಫ್ರಿಕಾ ರಾಷ್ಟ್ರಗಳಾದ ಲೈಬೀರಿಯಾ ಮತ್ತು ಸಿಯೆರಾ ಲಿಯೊನ್​ನಲ್ಲಿ 2014ರಲ್ಲಿ ಎಬೊಲಾ ಕಾಯಿಲೆ ಆತಂಕ ಹುಟ್ಟುಹಾಕಿತ್ತು. ಲೈಬೀರಿಯಾದ ಆಸ್ಪತ್ರೆಯೊಂದರಲ್ಲಿ ಎಬೊಲಾ ಶಂಕಿತರು ಚಿಕಿತ್ಸೆ ಪಡೆಯುತ್ತಿರುವ ಅನುಮಾನದಿಂದ ಸ್ಥಳೀಯ ನಿವಾಸಿಗಳು ದಾಳಿ ನಡೆಸಿದಾಗ ಆಸ್ಪತ್ರೆಯಲ್ಲಿದ್ದ ರೋಗಿಗಳು ಸಮೀಪದ ಸ್ಲಂ ಒಂದರಲ್ಲಿ ತಲೆ ಮರೆಸಿಕೊಂಡರು. ಕೂಡಲೇ ಸರ್ಕಾರ ಆ ಕೊಳೆಗೇರಿಯನ್ನು ಸೀಲ್​ಡೌನ್ ಮಾಡಿ 21 ದಿನಗಳ ಲಾಕ್​ಡೌನ್ ಘೊಷಿಸಿತು. ಆದರೆ, ಭಾರಿ ಪ್ರತಿಭಟನೆಗಳ ಬಳಿಕ 10 ದಿನಕ್ಕೇ ಕ್ವಾರಂಟೈನ್ ಅಂತ್ಯಗೊಳಿಸಲಾಯಿತು. ಪಕ್ಕದ ಸಿಯೆರಾ ಲಿಯೋನ್​ನಲ್ಲೂ 3 ದಿನಗಳ ಕ್ವಾರಂಟೈನ್ ಘೊಷಿಸಲಾಯಿತು. ಈ ಅವಧಿಯಲ್ಲಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಮನೆಮನೆಗೆ ತೆರಳಿ ರೋಗಿಗಳನ್ನು ಹುಡುಕಿ ಚಿಕಿತ್ಸೆ ನೀಡಿದರು. ಆದರೆ, ಜನ ಲಾಕ್​ಡೌನ್ ಉಲ್ಲಂಘಿಸಿ ರಾತ್ರೋರಾತ್ರಿ ಆರೋಗ್ಯ ಕಾರ್ಯಕರ್ತರ ವಾಹನಗಳಲ್ಲೇ ಗಡಿದಾಟಿ ಸಂಚರಿಸಿದ್ದರಿಂದ ಎಬೊಲ ನಿಯಂತ್ರಣಕ್ಕೆ ಬರದೆ ಮತ್ತಷ್ಟು ವ್ಯಾಪಿಸಲು ಕಾರಣವಾಯಿತು.

    ಲೈಂಗಿಕ ಯುದ್ಧ!: 1917ರಲ್ಲಿ ಮೊದಲ ಮಹಾಯುದ್ಧದ ಮಧ್ಯಘಟ್ಟ. ಅಮೆರಿಕದಲ್ಲಿ ಯುವಕರನ್ನು ಕಡ್ಡಾಯವಾಗಿ ಸೇನಾಭರ್ತಿ ಮಾಡಿಕೊಂಡು ಯುದ್ಧ ತರಬೇತಿ ನೀಡಲಾಗುತ್ತಿತ್ತು. ಆದರೆ, ಸೇನಾಭರ್ತಿ ಸಂದರ್ಭದಲ್ಲಿ ಅನೇಕರು ಲೈಂಗಿಕ ಗುಹ್ಯರೋಗಗಳಿಗೆ ಸಿಲುಕಿರುವುದು ಕಂಡುಬಂದಿತ್ತು. ಅದೇ ಸಂದರ್ಭದಲ್ಲಿ ಸೇನಾ ಶಿಬಿರದ ಸುತ್ತಮುತ್ತ ಸಾವಿರಾರು ಸಂಖ್ಯೆಯಲ್ಲಿ ವೇಶ್ಯೆಯರು ಮತ್ತಿತರ ಯುವತಿಯರು ಸುಳಿದಾಡುತ್ತಿರುವುದರಿಂದ ಅನುಮಾನಗೊಂಡು ಸುಮಾರು 30 ಸಾವಿರ ಮಹಿಳೆಯರನ್ನು ಜೈಲುಗಳಲ್ಲಿ ಬಂಧಿಸಿಡಲಾಯಿತು. ಈ ಮಹಿಳೆಯರ ಆರೋಗ್ಯ ಪರೀಕ್ಷೆ ನಡೆದು ರೋಗವಿಲ್ಲ ಎಂದು ದೃಢಪಟ್ಟ ಮೇಲೂ ಅವರನ್ನು ಬಿಡುಗಡೆ ಮಾಡಲಿಲ್ಲ.ಆದರೆ, ಫ್ರಾನ್ಸ್​ಗೆ ಹಡಗುಗಳ ಮೂಲಕ ರವಾನಿಸಲಾಗುತ್ತಿದ್ದ ಸಾವಿರಾರು ಸೈನಿಕರಿಗೆ ಕಾಂಡೊಂಗಳನ್ನು ನೀಡಿ ಕಳುಹಿಸಲಾಗಿತ್ತು.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಕರೊನಾ ರೋಗಿಗಳನ್ನು ಗುಣಪಡಿಸಿದ ವೈದ್ಯೆಗೆ ತಮ್ಮ ರಕ್ಷಣೆ ಸಾಧ್ಯವಾಗಲಿಲ್ವಾ?: ವೈರಲ್​ ಸುದ್ದಿಯ ಸತ್ಯಾಂಶ ನಿಜಕ್ಕೂ ಅಚ್ಚರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts