More

    ಬ್ಯಾಡಗಿ ಮೆಣಸಿನಕಾಯಿ ತಳಿ ಉಳಿಸಿ

    ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ‘ಬ್ಯಾಡಗಿ ಮೆಣಸಿನಕಾಯಿ’ ತಳಿ ಎಲ್ಲೆಡೆ ಪ್ರಸಿದ್ಧಿ ಪಡೆದಿದೆ. ಆದರೆ, ಕಳೆದೊಂದು ದಶಕದಿಂದ ಇದರ ಉತ್ಪಾದನೆ ಕುಂಠಿತವಾಗಿದ್ದು, ಮಾರುಕಟ್ಟೆಗೆ ನಿಜವಾದ ತಳಿಯ ಫಸಲು ಬರುತ್ತಿಲ್ಲ ಎಂದು ಎಪಿಎಂಸಿ ವ್ಯಾಪಾರಸ್ಥರ ಸಂಘದ ಮಾಜಿ ಅಧ್ಯಕ್ಷ, ಮೆಣಸಿನಕಾಯಿ ವ್ಯಾಪಾರಸ್ಥ ಜಗದೀಶಗೌಡ ಪಾಟೀಲ ತಿಳಿಸಿದರು.

    ನಗರದ ಎಪಿಎಂಸಿ ಆವರಣದಲ್ಲಿರುವ ಹುಬ್ಬಳ್ಳಿ ವ್ಯಾಪಾರಸ್ಥರ ಸಂಘದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಮಾರುಕಟ್ಟೆಗೆ ಬರುತ್ತಿರುವ ಮೆಣಸಿನಕಾಯಿಯಲ್ಲಿ ಶೇ. 10ರಷ್ಟು ಮಾತ್ರ ಬ್ಯಾಡಗಿ ಮೆಣಸಿನಕಾಯಿ ತಳಿಯದ್ದಾಗಿರುತ್ತದೆ. ಉಳಿದದ್ದು ಈ ತಳಿಯ ಹೆಸರಲ್ಲಿ ಬಿತ್ತನೆ ಮಾಡಿದ ಕಳಪೆ ಬೀಜ ಹಾಗೂ ಹೈಬ್ರಿಡ್ ತಳಿಯಿಂದ ಬೆಳೆದದ್ದಾಗಿದೆ. ಇದನ್ನು ಮೂರು ದಶಕದ ವ್ಯಾಪಾರದ ಅನುಭವದಿಂದ ಹೇಳುತ್ತಿದ್ದೇನೆ ಎಂದರು.

    ಬ್ಯಾಡಗಿ ಡಬ್ಬಿ, ಕಡ್ಡಿ ಎಂಬ ಎರಡು ತಳಿಯ ಮೆಣಸಿನಕಾಯಿ ಪ್ರಸಿದ್ಧಿ ಪಡೆದಿವೆ. ಇದನ್ನು ಹೆಚ್ಚಾಗಿ ಧಾರವಾಡ ಜಿಲ್ಲೆಯ ಕುಂದಗೋಳ, ನವಲಗುಂದ ತಾಲೂಕು; ಗದಗ, ಬಳ್ಳಾರಿ ಜಿಲ್ಲೆ, ಆಂಧ್ರದ ಗಡಿ ಜಿಲ್ಲೆಗಳಲ್ಲಿ ಬೆಳೆಯುತ್ತಾರೆ. ಆಂಧ್ರದವರು ಬ್ಯಾಡಗಿ ಸುತ್ತಮುತ್ತ ಸಂಚರಿಸಿ ವಾಸ್ತವ ತಳಿಯ ಬೀಜ ಕೊಂಡೊಯ್ದು ಬಿತ್ತನೆ ಮಾಡುತ್ತಾರೆ. ಆದರೆ, ಸ್ಥಳೀಯ ಬಹುತೇಕ ರೈತರು ಯಾರೋ ಕೊಟ್ಟ ಬೀಜ ಬಿತ್ತುತ್ತಿದ್ದಾರೆ. ರಾಶಿ ಮಾಡುವಾಗ ತಳದಲ್ಲಿ ಸಿಗುವ ಬೀಜವನ್ನೇ ಕೆಲವರು ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಮುಗ್ಧ ರೈತರನ್ನು ಯಾಮಾರಿಸುತ್ತಿದ್ದಾರೆ. ಕೆಲ ವರ್ಷಗಳ ಅವಲೋಕನ ಹಾಗೂ ರೈತರನ್ನು ಸಂರ್ಪಸಿದಾಗ ಕಳಪೆ ಬೀಜದಿಂದಲೇ ಉತ್ಪಾದನೆ ಕುಂಠಿತವಾಗುತ್ತಿರುವುದು ಕಂಡು ಬಂದಿದೆ ಎಂದರು.

    ಪ್ರತಿ ವರ್ಷ ಒಂದೇ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆಯುವುದರಿಂದ ಫಸಲು ಕಡಿಮೆಯಾಗುತ್ತ ಹೊರಟಿದೆ. ಮಣ್ಣಿನ ಗುಣಮಟ್ಟವೂ ಇಳಿದಿದೆ. ಈ ಬಗ್ಗೆ ರೈತರು ನಿಗಾ ವಹಿಸಿ ಬೆಳೆ ಬದಲಾವಣೆ, ಗುಣಮಟ್ಟದ ಬೀಜ ಬಿತ್ತನೆ ಮಾಡಿದರೆ ಖಂಡಿತ ಉತ್ಪಾದನೆ ಹೆಚ್ಚಳ ಮಾಡಿಕೊಂಡು ಮೌಲ್ಯ ಪಡೆಯಬಹುದು ಎಂದು ಸಲಹೆ ನೀಡಿದರು.

    ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ, ಉಪಾಧ್ಯಕ್ಷ ಶಂಕ್ರಣ್ಣ ನೇಗಿನಹಾಳ, ಗೌರವ ಕಾರ್ಯದರ್ಶಿ ಪ್ರಭುಲಿಂಗಪ್ಪ ಅಂಕಲಕೋಟಿ, ಮೋಹನ ಸೋಳಂಕಿ ಇತರರು ಇದ್ದರು.

    ವಿಶೇಷತೆ: ಎಎಸ್​ಟಿಎ (ಅಮೆರಿಕನ್ ಸ್ಪೈಸ್ ಟ್ರೇಡಿಂಗ್ ಅಸೋಸಿಯೇಶನ್) ನಿಗದಿ ಪಡಿಸಿದ ಅಂದಾಜು 240ರಿಂದ 260 ಪ್ರಮಾಣದ ಕಡು ಬಣ್ಣವನ್ನು ಬ್ಯಾಡಗಿ ಮೆಣಸಿನಕಾಯಿ ಹೊಂದಿದ್ದು ಕಡಿಮೆ ಖಾರವುಳ್ಳದ್ದಾಗಿದೆ. ಇದರಲ್ಲಿ ಉತ್ತಮ ಓಲಿಯೊರಿಜಿನ್ (ಮೆಣಸಿನಕಾಯಿಯಲ್ಲಿನ ಗಾಢ ಬಣ್ಣ) ಇದೆ. ಈ ಮೊದಲು ಜಾಗತಿಕ ಮಾರುಕಟ್ಟೆಯಲ್ಲಿ ಬಹುತೇಕ ಪಾಲು ಈ ತಳಿಯದ್ದೇ ಇತ್ತು. ಈಗ ಉತ್ಪಾದನೆ ಕಡಿಮೆಯಾಗಿ ಚೀನಾ ಅದನ್ನು ಆಕ್ರಮಿಸಿದೆ ಎಂದು ಪಾಟೀಲ ಬೇಸರ ವ್ಯಕ್ತಪಡಿಸಿದರು. ಈ ದಿಸೆಯಲ್ಲಿ ಮುಂಬರುವ ಸೀಸನ್​ಗೆ ವ್ಯಾಪಾರಸ್ಥರ ಸಂಘದಿಂದಲೇ ಉತ್ತಮ ಬೀಜ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಬ್ಯಾಡಗಿ ಮತ್ತು ಹುಬ್ಬಳ್ಳಿ ಸಂಘಗಳನ್ನು ಸಂರ್ಪಸಿ ಅಗತ್ಯ ಇರುವ ರೈತರು ನೆರವು ಪಡೆಯಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts