More

    ದೇಸಿ ಕಲೆ ಉಳಿಸಿ ಬೆಳೆಸಿ : ಡಾ.ಕೆ.ಇ.ಗೋವಿಂದೇಗೌಡ ಕಿವಿಮಾತು

    ಜಾನಪದ ಕಲೆ, ನಾಟಕ ಮೊದಲಾದವು ಉಳಿಯಬೇಕು ಎಂದು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಇ.ಗೋವಿಂದೇಗೌಡ ಹೇಳಿದರು.

    ಕಲಾಮಂದಿರದ ಕಿರುರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ದೇಸಿ ರಂಗ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ರಂಗ ಮತ್ತು ನೃತ್ಯೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ದೇಸಿ ಕಲೆಗಳನ್ನು ಉಳಿಸಿ, ಬೆಳೆಸುವ ಅಗತ್ಯವಿದೆ ಎಂದರು.

    ಎನ್‌ಎಸ್‌ಎಸ್ ಶಿಬಿರ ಆಯೋಜಿಸಿದಾಗ ಗ್ರಾಮೀಣ ಪ್ರದೇಶದಲ್ಲೂ ಸಂಜೆ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸುವುದು ಕಷ್ಟವಾಗಿದೆ. ಮಹಿಳೆಯರು ಧಾರಾವಾಹಿ ನೋಡುತ್ತಿರುತ್ತಾರೆ. ಯುವಕರು ಮೊಬೈಲ್‌ನಲ್ಲಿ ಕಾಲ ಕಳೆಯುತ್ತಾರೆ. ನಗರ ಪ್ರದೇಶಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಆದರೆ ಜಾನಪದ ಕಲೆ, ರಂಗಭೂಮಿ ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಸಬಲ್ಲದು ಎಂಬುದಕ್ಕೆ ಕನ್ನಡದ ವರನಟ ಡಾ.ರಾಜ್‌ಕುಮಾರ್ ಹಾಗೂ ಕಿರುತೆರೆಯ ಮೂಲಕ ಪ್ರಸಿದ್ಧಿಗೆ ಬಂದ ಕುರಿಗಾಹಿ ಹನುಮಂತ ನಿದರ್ಶನ ಎಂದರು.

    ಇಲ್ಲಿ ತರಬೇತಿ ಪಡೆದವರು ಆಸಕ್ತಿಯಿಂದ ಅದೇ ಕ್ಷೇತ್ರದಲ್ಲಿ ಮುಂದುವರಿದರೆ ನಾಳೆ ಅವರು ಕೂಡ ಎತ್ತರಕ್ಕೆ ಬೆಳೆಯಬಹುದು ಎಂದು ಹೇಳಿದ ಗೋವಿಂದೇಗೌಡರು, ಯುವಕರನ್ನು ಕಳೆದ 17 ವರ್ಷಗಳಿಂದ ಎರಡು ತಂಡಗಳಲ್ಲಿ ತರಬೇತಿಗೊಳಿಸುತ್ತಿರುವ ಸಂಸ್ಥೆಯನ್ನು ಶ್ಲಾಘಿಸಿದರು.
    ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿ ಮಾತನಾಡಿ, ಅಭಿವ್ಯಕ್ತಿ ಸಾಮರ್ಥ್ಯ, ವ್ಯಕ್ತಿತ್ವ ವಿಕಸನ, ರಂಗ ಹಾಗೂ ನೃತ್ಯ ಪ್ರಕಾರಗಳ ಬಗ್ಗೆ ಅರಿವು ಮೂಡಿಸಲು ಶಿಬಿರ ಸಹಕಾರಿಯಾಗಿದೆ. ಉತ್ತಮ ಕಲಾವಿದರಿಗೆ ಕಿರುತೆರೆ, ಸಿನಿಮಾದಲ್ಲಿ ಅವಕಾಶಗಳು ಸಿಗುತ್ತವೆ. ಅದನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಮಾತನಾಡಿ, ಮೈಸೂರಿನಲ್ಲಿ ಈ ರೀತಿ ನಿರಂತರವಾಗಿ ತರಬೇತಿ ನೀಡುತ್ತಿರುವ ನಾಲ್ಕೈದು ಸಂಸ್ಥೆಗಳಲ್ಲಿ ಕೃಷ್ಣ ಜನಮನರ ದೇಸಿರಂಗವೂ ಒಂದು ಎಂದರು.
    ಚಿಂತಕಿ ಡಾ.ಬಿ.ಎಸ್.ದಿನಮಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts