More

    ಮರೆವಿನ ಕಾಯಿಲೆ ಆರೈಕೆಗೆ ತರಬೇತಿ : ಆರೋಗ್ಯ ಇಲಾಖೆ ಕ್ರಿಯಾ ಯೋಜನೆ

    ಪಂಕಜ ಕೆ.ಎಂ.
    ಬೆಂಗಳೂರು: ಮರೆವಿನ ಕಾಯಿಲೆ (ಡಿಮೆನ್ಶಿಯಾ) ಕುರಿತು ಜಾಗೃತಿ ಮೂಡಿಸಲು ಹಾಗೂ ತಾರತಮ್ಯವನ್ನು ತೊಡೆದುಹಾಕುವ ಸಲುವಾಗಿ ಆರೋಗ್ಯ ಇಲಾಖೆಯು ರೋಗಿಗಳ ಆರೈಕೆ ಮಾಡುವವರಿಗೆ ಸಲಹೆ ನೀಡಲು ಹಾಗೂ ಆರೋಗ್ಯ ವೃತ್ತಿಪರರಿಗೆ ತರಬೇತಿ ನೀಡಲು ನಿಮ್ಹಾನ್ಸ್ ಮತ್ತು ಡಿಮೆನ್ಶಿಯಾ ಇಂಡಿಯಾ ಅಲಯನ್ಸ್ ಸಹಯೋಗದಲ್ಲಿ ಕ್ರಿಯಾ ಯೋಜನೆ ಜಾರಿಗೆ ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.

    ಸೆ. 21ರಂದು ‘ವಿಶ್ವ ಅಲ್ಜೆ ಮರ್ಸ್ ದಿನ’ದಂದು ಯೋಜನೆ ಪ್ರಕಟಿಸಲು ಸಜ್ಜಾಗುತ್ತಿದೆ. ಆ ಮೂಲಕ ಈ ಯೋಜನೆ ರೂಪಿಸಿದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮರೆವಿನ ಕಾಯಿಲೆಯನ್ನು ತಗ್ಗಿಸಲು ರೋಗನಿರ್ಣಯ ಪ್ರೋತ್ಸಾಹಿಸುವ ಅಗತ್ಯವಿದ್ದು, ಆರಂಭಿಕ ಹಂತದಲ್ಲೇ ರೋಗ ಲಕ್ಷಣಗಳನ್ನು ಆಧರಿಸಿ ಹೆಚ್ಚಿನ ಜನರನ್ನು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಇದಕ್ಕಾಗಿ ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಅಧಿಕಾರಿಗಳು, ವೈದ್ಯರು, ಸಲಹೆಗಾರರು ಮತ್ತು ಮನಶಾಸಜ್ಞರಿಗೆ ಅಗತ್ಯ ತರಬೇತಿ ಒದಗಿಸಲಾಗುವುದು ಎಂದು ಆರೋಗ್ಯ ಇಲಾಖೆ ಉಪ ನಿರ್ದೇಶಕಿ (ಮಾನಸಿಕ ಆರೋಗ್ಯ) ಡಾ. ರಜನಿ ಪಾರ್ಥಸಾರಥಿ ತಿಳಿಸಿದ್ದಾರೆ.

    ರಾಜ್ಯದಲ್ಲಿ 5 ಲಕ್ಷ ರೋಗಿಗಳು:
    ರಾಜ್ಯದಲ್ಲಿ ಐದು ಲಕ್ಷ ಮಂದಿ ಮರೆವಿನ ಸಮಸ್ಯೆ ಹೊಂದಿದ್ದಾರೆ. ಅಂಕಿ ಅಂಶಗಳ ಪ್ರಕಾರ, 2036ರ ವೇಳೆಗೆ ಈ ಸಂಖ್ಯೆಯು ದ್ವಿಗುಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ, ರಾಜ್ಯದಲ್ಲಿ ಮರೆವು ಸಮಸ್ಯೆ ಹೊಂದಿರುವವರಲ್ಲಿ ಶೇ.10 ಜನರಿಗೆ ಮಾತ್ರ ರೋಗನಿರ್ಣಯ ಮತ್ತು ಚಿಕಿತ್ಸೆ ದೊರೆಯುತ್ತಿದೆ ಎಂದಿದ್ದಾರೆ.

    ಔಷಧರಹಿತ ಚಿಕಿತ್ಸೆ:
    ಕ್ರಿಯಾ ಯೋಜನೆಯಲ್ಲಿ ಔಷಧ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ. ಚಟುವಟಿಕೆಗಳ ಮೂಲಕ ಮಿದುಳನ್ನು ಉತ್ತೇಜಿಸುವ, ಅರಿವಿನ ಪ್ರಚೋದನೆ ಚಿಕಿತ್ಸೆಯ ಮೂಲಕ ಗುಣಪಡಿಸುವ ಪ್ರಯತ್ನ ಮಾಡಲಾಗುವುದು. ಈ ಚಟುವಟಿಕೆಗಳು ರೋಗದ ಪ್ರಗತಿಯನ್ನು ನಿಧಾನಗೊಳಿಸುತ್ತದೆ ಎಂದು ನಿಮ್ಹಾನ್ಸ್‌ನ ನರರೋಗ ತಜ್ಞರು ತಿಳಿಸಿದ್ದಾರೆ.

    ಪುನರ್ವಸತಿ ವ್ಯವಸ್ಥೆ:
    ವಿಶ್ವ ಆರೋಗ್ಯ ಸಂಸ್ಥೆಯು ಈ ಬಾರಿ ‘ಮರೆವಿನ ಕಾಯಿಲೆಯನ್ನು ಸಾರ್ವಜನಿಕ ಆರೋಗ್ಯದ ಆದ್ಯತೆ’ ಎಂದು ೋಷಿಸಿದೆ. ರಾಜ್ಯದ ಕ್ರಿಯಾ ಯೋಜನೆಯಲ್ಲಿ ಕೇವಲ ಔಷಧ ಹಾಗೂ ಬೌದ್ಧಿಕ ಚಿಕಿತ್ಸೆ ಮಾತ್ರವಲ್ಲದೆ ಅಗತ್ಯ ಇರುವ ರೋಗಿಗಳ ಪುನರ್ವಸತಿಯ ಅಗತ್ಯ ಎದುರಾಗಬಹುದು. ಹಾಗಾಗಿ ಅದಕ್ಕೂ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ರೋಗಿಗಳಿಗೆ ಔಷಧ ಹಾಗೂ ಚಿಕಿತ್ಸೆಯಷ್ಟೇ ಉತ್ತಮ ಪರಿಸರದ ಅಗತ್ಯವೂ ಹೆಚ್ಚಿರುತ್ತದೆ. ಹಾಗಾಗಿ ರೋಗಿಯ ಪರಿಸರ ಆಧರಿಸಿ ಚಿಕಿತ್ಸೆಯ ಬಗ್ಗೆ ನಿರ್ಣಯಿಸಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು.

    ನರಕೋಶಗಳಿಗೆ ಹಾನಿ:
    ಮಿದುಳಿನಲ್ಲಿನ ಅಸಹಜ ಬದಲಾವಣೆಗಳಿಂದ ಮರೆವಿನ ಕಾಯಿಲೆ ಉಂಟಾಗುತ್ತದೆ. ಆಲೋಚನಾ ಶಕ್ತಿ ಕುಸಿಯುತ್ತದೆ. ಇದರಿಂದ ವ್ಯಕ್ತಿಯ ದೈನಂದಿನ ಜೀವನ ಮತ್ತು ಸ್ವತಂತ್ರ ಕಾರ್ಯಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾತ್ರವಲ್ಲ ನಡವಳಿಕೆ, ಭಾವನೆ ಹಾಗೂ ಸಂಬಂಧಗಳ ಮೇಲೂ ಪರಿಣಾಮ ಬೀರಲಿದೆ. ಮರೆವು, ಸಂವಹನ ಮಾಡುವಾಗ ಪದಗಳ ಹುಡುಕಾಟ, ನಿರ್ಣಯಗಳನ್ನು ದುರ್ಬಲಗೊಳಿಸುತ್ತದೆ, ದೃಷ್ಟಿದೋಷ, ನಡೆಯುವಾಗ ತೊಡರುವುದು, ಗೊಂದಲಕ್ಕೆ ಒಳಗಾಗುವುದು, ಖಿನ್ನತೆ, ವ್ಯಕ್ತಿತ್ವ ಬದಲಾವಣೆ ಇದರ ಲಕ್ಷಣಗಳಾಗಿವೆ. ವಿಶೇಷವಾಗಿ ವಯಸ್ಸಾದವರಲ್ಲಿ ಹೆಚ್ಚಿನ ಪರಿಣಾಮ ಬೀರುತ್ತದೆ. ಮರೆವಿನ ಸಮಸ್ಯೆ ರೋಗಿಯ ನರಕೋಶಗಳನ್ನು ಹಾನಿಗೊಳಿಸುತ್ತದೆ.

    ಮರೆವಿನ ಕಾಯಿಲೆ ಆರೈಕೆಗೆ ತರಬೇತಿ : ಆರೋಗ್ಯ ಇಲಾಖೆ ಕ್ರಿಯಾ ಯೋಜನೆಸ್ಮರಣೆ ಶಕ್ತಿ ಕುಂದುವ ಕಾಯಿಲೆ ತಡೆಗಟ್ಟಲು ಅಭಿಯಾನದ ರೀತಿ ಕಾರ್ಯಕ್ರಮ ಹಾಕಿಕೊಳ್ಳುವ ಅಗತ್ಯವಿದ್ದು, ಹಿರಿಯರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುವುದರಿಂದ ಆರೋಗ್ಯ ಇಲಾಖೆ ಅಂತಹವರ ಆರೈಕೆಗೆ ಕ್ರಿಯಾ ಯೋಜನೆ ರೂಪಿಸಿದೆ. ಹಲವು ಜಾಗೃತಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ.
    – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

    ಮರೆವಿನ ಕಾಯಿಲೆ ಆರೈಕೆಗೆ ತರಬೇತಿ : ಆರೋಗ್ಯ ಇಲಾಖೆ ಕ್ರಿಯಾ ಯೋಜನೆಮರೆವಿನ ಕಾಯಿಲೆ ಹಿರಿಯರಲ್ಲಿ ಹೆಚ್ಚು ಕಂಡು ಬರುವ ಸಮಸ್ಯೆ ಆಗಿದೆ. ಅವರಿಗೆ ಯಾವ ರೀತಿಯ ಆರೈಕೆ ನೀಡಬೇಕು ಎಂಬುದರ ಕುರಿತು ಕ್ರಿಯಾ ಯೋಜನೆ ರೂಪಿಸಲಾಗಿದೆ. ಇದರ ಬಿಡುಗಡೆ ನಂತರ ತರಬೇತಿ ಕಾರ್ಯಕ್ರಮ ಆರಂಭಿಸಲಾಗುವುದು. ಯೋಜನೆ ಯಶಸ್ವಿ ಜಾರಿಗೆ ಅಗತ್ಯ ಅನುದಾನ ಕುರಿತು ಮುಂದಿನ ಬಜೆಟ್‌ನಲ್ಲಿ ಮನವಿ ಸಲ್ಲಿಸಲಾಗುವುದು.
    – ಡಿ. ರಂದೀಪ್, ಆಯುಕ್ತರು, ಆರೋಗ್ಯ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts