More

    ಸಾತನೂರು ಪೊಲೀಸರ ಕಾರ್ಯಾಚರಣೆ : 41 ಜೀವಂತ ನಾಡಬಾಂಬ್‌ಗಳ ವಶ

    ಕನಕಪುರ: ಕನಕಪುರ ತಾಲೂಕಿನ ಸಾತನೂರು ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ನಾಡಬಾಂಬ್‌ಗಳನ್ನಿಟ್ಟು ವನ್ಯಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರನ್ನು ಸಾತನೂರು ಪೊಲೀಸರು ಬಂಧಿಸಿ, 41 ಜೀವಂತ ನಾಡಬಾಂಬ್‌ಗಳು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ವಾಹನ ವಶಪಡಿಸಿಕೊಂಡಿದ್ದಾರೆ.

    ಚನ್ನಪಟ್ಟಣ ತಾಲೂಕಿನ ವಿರೂಪಾಕ್ಷಪುರ ಹೋಬಳಿಯ ಬಿ.ವಿ.ಪಾಳ್ಯ ಗ್ರಾಮದ ನಿವಾಸಿ ಕೃಷ್ಣ ಎಂಬುವರ ಮಗ ಕೇಶವ (30) ಹಾಗೂ ಉಯ್ಯಂಬಳ್ಳಿ ಹೋಬಳಿ ನಾಯಕನಹಳ್ಳಿ ವಾಸಿ ಮಾರಣ್ಣ ಎಂಬುವವರ ಮಗ ರಾಮು (25) ಬಂಧಿತರು.

    ಕಳೆದ ವಾರ ಸಾತನೂರು ಠಾಣಾ ವ್ಯಾಪ್ತಿಯ ಏಳಗಳ್ಳಿಯಲ್ಲಿ ಬೇಟೆಗಾಗಿ ತಮ್ಮಣ್ಣಗೌಡರ ಜಮೀನಿನಲ್ಲಿ ನಾಡಬಾಂಬ್ ತಿಂದ ಹಸುವಿನ ಬಾಯಿ ಛಿದ್ರಗೊಂಡು ಹಸು ಮೃತಪಟ್ಟಿತ್ತು. ಅಲ್ಲದೆ, ಕಾಳೀರೇಗೌಡ ಎಂಬುವವರ ಜಮೀನಿನಲ್ಲಿ ಮೇಯಲು ಹೋಗಿದ್ದ ಹಸು ಮೇಯುವಾಗ ಹುದುಗಿಸಿಟ್ಟಿದ್ದ ನಾಡಬಾಂಬ್ ಸಿಡಿದು ಗಾಯಗೊಂಡು ಮೃತಪಟ್ಟಿತ್ತು.

    ದೂರು ದಾಖಲು: ಏಳಗಳ್ಳಿ ಗ್ರಾಮದ ಸುತ್ತಮುತ್ತಲ ಜಮೀನಿನಲ್ಲಿ ನಾಡಬಾಂಬ್‌ನಿಂದಾಗಿ ಹಸುಗಳು ನಿತ್ಯ ಮೃತಪಡುತ್ತಿದ್ದುದರಿಂದ ಜಾನುವಾರುಗಳ ಮಾಲೀಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸಾತನೂರು ಪೊಲೀಸರು ಆರೋಪಿಗಳ ಪತ್ತೆಗಾಗಿ ಮಾಹಿತಿದಾರರನ್ನು ನೇಮಿಸಿದ್ದರು. ಮಾಹಿತಿದಾರರ ಸುಳಿವಿನ ಆಧಾರದಲ್ಲಿ ಮಂಗಳವಾರ ದೊಡ್ಡಾಲಹಳ್ಳಿ ಸಮೀಪ ಕಾಡಿನಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಕೃತ್ಯಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳು ಕೊಳ್ಳೇಗಾಲ ತಾಲೂಕಿನ ಗ್ರಾಮವೊಂದರಲ್ಲಿ ನಾಡಬಾಂಬ್‌ಗಳನ್ನು ತಯಾರಿಸಿ ಸುಮಾರು 30 ವಿವಿಧ ಅರಣ್ಯ ಪ್ರದೇಶದ ಬಳಿಯ ಜಮೀನುಗಳಲ್ಲಿ ಇಟ್ಟಿದ್ದಾಗಿಯೂ ಒಪ್ಪಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
    ಸರ್ಕಲ್ ಇನ್‌ಸ್ಪೆಕ್ಟರ್ ಪ್ರಕಾಶ್ ಮಾರ್ಗದರ್ಶನದಲ್ಲಿ ಸಬ್‌ಇನ್‌ಸ್ಪೆಕ್ಟರ್ ಮುರಳಿ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿತ್ತು. ದಾಳಿಯಲ್ಲಿ ಎಎಸ್‌ಐ ದುರ್ಗೇಗೌಡ, ಮುಖ್ಯಪೇದೆಗಳಾದ ತುಳಸಿದಾಸ್, ಮೋಹನ್, ಸಿಬ್ಬಂದಿಗಳಾದ ಮಹೇಶ್, ಸಿದ್ದಲಿಂಗಪ್ಪ ಪಾಲ್ಗೊಂಡಿದ್ದರು.

    ಬಂದೂಕು ಬದಲು ಬಾಂಬ್: ಪೊಲೀಸರಿಗೆ ತಲೆನೋವಾಗಿದ್ದ ನಾಡಬಾಂಬ್ ಪ್ರಕರಣವನ್ನು ಬಯಲಿಗೆಳೆದಾಗ ಕಳ್ಳಬೇಟೆಗಾರರು ಅರಣ್ಯ ಪ್ರದೇಶದ ಸುತ್ತಮುತ್ತಲ ಜಮೀನುಗಳಲ್ಲಿ ನಾಡಬಾಂಬ್‌ಗಳಿಗೆ ಮೇಲ್ಭಾಗದಲ್ಲಿ ಕೋಳಿ ಮಾಂಸ ಮತ್ತು ಪ್ರಾಣಿಗಳ ಚರ್ಮ ಲೇಪಿಸಿ ಇಡುತ್ತಿದ್ದರು. ಪ್ರಾಣಿಗಳ ಹತ್ಯೆಗೆ ನಾಡ ಬಂದೂಕುಗಳನ್ನು ಉಪಯೋಗಿಸಿದರೆ ಶಬ್ದ ಬರುವುದರಿಂದ ಸಿಕ್ಕಿ ಹಾಕಿಕೊಳ್ಳುವ ಭಯದಿಂದಾಗಿ ಬಂದೂಕುಗಳ ಬದಲು ಉಂಡೆಬಾಂಬುಗಳನ್ನು ಬಳಸುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts