More

    ಸಾಸ್ತಾನದಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ: ನವಯುಗ ಸಂಸ್ಥೆಗೆ ಸಂಸದೆ, ಶಾಸಕರ ತಾಕೀತು

    ಕೋಟ: ಕೋಟ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯವರಿಗೆ ಟೋಲ್ ವಿನಾಯತಿಗೆ ಆಗ್ರಹಿಸಿ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿಯ ವತಿಯಿಂದ ಸೋಮವಾರ ನಡೆದ ಬೃಹತ್ ಪ್ರತಿಭಟನೆ ಫಲ ನೀಡಿದ್ದು, ಸಂಸದೆ ಹಾಗೂ ಶಾಸಕರು ಟೋಲ್ ವಿನಾಯಿತಿ ಮುಂದುವರಿಸಲು ನವಯುಗ ಕಂಪನಿಗೆ ತಾಕೀತು ಮಾಡಿದ್ದಾರೆ.

    ವಾರದಿಂದ ನಡೆಯುತ್ತಿದ್ದ ಟೋಲ್ ವಿನಾಯಿತಿ ಹೋರಾಟಕ್ಕೆ ಕೊನೆಗೂ ಮುಕ್ತಿ ದೊರಕಿದೆ. ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಂಸದರು, ಶಾಸಕರು, ಅಧಿಕಾರಿಗಳ ಸಭೆಯಲ್ಲಿ ಹೆದ್ದಾರಿ ಜಾಗೃತಿ ಸಮಿತಿ ಪದಾಧಿಕಾರಿಗಳ ಸಮ್ಮುಖದಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡಬೇಕೆಂದು ನವಯುಗ ಕಂಪನಿಗೆ ಸೂಚಿಸಲಾಯಿತು.

    ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂಬ ನವಯುಗ ಕಂಪನಿ ನಿಲುವನ್ನು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ತೀವ್ರ ತರಾಟೆ ತೆಗೆದುಕೊಂಡು ‘ನಿಮ್ಮ ಟೋಲ್ ಕಾನೂನು ಬದ್ಧ ಅಲ್ಲದಿದ್ದರೂ ಟೋಲ್ ನಿರ್ಮಿಸಲು ಸ್ಥಳೀಯರು ಅವಕಾಶ ಕಲ್ಪಿಸಿದ್ದಾರೆ, ಅವರಿಗೆ ನ್ಯಾಯ ದೊರೆಕಿಸುವುದು ನಮ್ಮ ಕರ್ತವ್ಯವಾಗಿದೆ’ ಎಂದು ಯಥಾಸ್ಥಿತಿ ಟೋಲ್ ಮುಕ್ತಿ ಮುಂದುವರಿಸುವಂತೆ ತಾಕೀತು ಮಾಡಿದ್ದಾರೆ.

    ವೇದಿಕೆಯಲ್ಲಿ ಹರ್ಷೋದ್ಗಾರ: ಅಪರಾಹ್ನ 4 ಗಂಟೆಗೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಿಂದ ಹಿಂತಿರುಗಿ ವೇದಿಕೆಗೆ ಆಗಮಿಸಿದ ಸಮಿತಿ ಅಧ್ಯಕ್ಷ ಶ್ಯಾಮಸುಂದರ ನಾಯಿರಿ, ನಮ್ಮ ಪರವಾಗಿ ಸಂಸದರು, ಶಾಸಕರು, ಸಚಿವರು ಮಾತನಾಡಿ ನ್ಯಾಯ ದೊರಕಿಸಿದ್ದಾರೆ. ನಮಗೆ ಇಂದು ಜಯ ದೊರೆತಿದೆ ಎಂದು ಹೇಳಿದರು. ಅವರು ಈ ವಿಷಯ ಪ್ರಕಟಿಸುತ್ತಿದ್ದಂತೆ ಸಭೆಯಲ್ಲಿ ಹರ್ಷೋದ್ಗಾರ ಮೂಡಿಬಂತು.

    ಬಂದ್ ಯಶಸ್ವಿ: ಟೋಲ್ ವಿನಾಯಿತಿಗೆ ಆಗ್ರಹಿಸಿ ಹೆದ್ದಾರಿ ಜಾಗೃತಿ ಸಮಿತಿ ನೀಡಿದ ಸ್ವಯಂ ಪ್ರೇರಿತ ಬಂದ್ ಭಾಗಶಹ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗಿದೆ. ಕೋಟ, ಸಾಲಿಗ್ರಾಮ, ಸಾಸ್ತಾನ, ಸೇರಿದಂತೆ ಇನ್ನುಳಿದ ಭಾಗಗಳಲ್ಲಿ ಅಂಗಡಿ ಮುಂಗಟ್ಟು ಬಂದ್‌ಗೊಳಿಸಿ ಹೆದ್ದಾರಿ ಸಮಿತಿಗೆ ಬೆಂಬಲ ಸೂಚಿಸಿದ್ದರು. ಜಿ.ಪಂ. ವ್ಯಾಪ್ತಿಯ ಸಾರ್ವಜನಿಕರು, ವ್ಯಾಪಾರಿಗಳು ತಮ್ಮ ವ್ಯವಹಾರ ಸ್ಥಗಿತಗೊಳಿಸಿ ಪೂರ್ವಾಹ್ನದಿಂದಲೇ ಸಾಸ್ತಾನ ಟೋಲ್ ಸಮೀಪ ಬೃಹತ್ ಪೆಂಡಲ್‌ನಲ್ಲಿ ಸೇರಿದ್ದರು. ನವಯುಗ ಸಂಸ್ಥೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ಹೊರಹಾಕಿ ಟೋಲ್ ವಿನಾಯಿತಿ ಮುಂದುವರಿಸುವಂತೆ ತಾಕೀತು ಹಾಕಿದರು.

    ಈ ಸಂದರ್ಭ ವೇದಿಕೆಗೆ ಆಗಮಿಸಿದ ಸಚಿವ ಕೋಟ ಶ್ರೀೀನಿವಾಸ ಪೂಜಾರಿ, ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡುವ ನಿಟ್ಟಿನಲ್ಲಿ ಸಂಸದರ ನೇತೃತ್ವದಲ್ಲಿ ನಡೆಯುವ ದಿಶಾ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹಾಗೂ ಸ್ಥಳೀಯರ ಪರವಾಗಿ ಸದಾ ಇರುವುದಾಗಿ ಹೇಳಿದರು.

    ಪ್ರತಿಭಟನಾ ಸ್ಥಳ ಸ್ವಚ್ಛ: ಭಾರಿ ಪ್ರಮಾಣದ ಪೆಂಡಲ್‌ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಜ್ಜಿಗೆ, ನೀರು, ಇನ್ನಿತರ ಪಾನೀಯಗಳನ್ನು ಪ್ರತಿಭಟನಾ ನಿರತರಿಗೆ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಭಟನೆ ಮುಗಿದ ನಂತರ ಹೆದ್ದಾರಿ ಸಮಿತಿ ಸದಸ್ಯರು ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಛಗೊಳಿಸಿರುವುದು ಮೆಚ್ಚುಗೆಗೆ ಕಾರಣವಾಗಿತ್ತು.

    ಬ್ರಹ್ಮಾವರ ತಾಲೂಕು ಪಂಚಾಯತಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ, ಮಾಜಿ ಜಿಪಂ ಅಧ್ಯಕ್ಷ ಕೇಶವ ಕುಂದರ್, ಸಾಸ್ತಾನ ಸಂತ ಅಂತೋನಿ ದೇವಾಲಯದ ಧರ್ಮಗುರು ಜೋನ್ ವಾಲ್ಟರ್ ಮೆಂಡೋನ್ಸಾ, ಸ್ಥಳೀಯ ಜುಮ್ಮಾ ಮಸೀದಿಯ ಧರ್ಮಗುರು ಮೌಲಾನ ರಿಜ್ವಾನ್, ಪಾಂಡೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ದಿನಕರ್, ಉಪಾಧ್ಯಕ್ಷ ಸಿಲ್ವೆಸ್ಟರ್ ಡಿಸೋಜ, ಜಯ ಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಸಾಲಿಗ್ರಾಮ, ಮಾಜಿ ತಾಪಂ ಸದಸ್ಯ ರಾಜರಾಮ್ ಪೂಜಾರಿ, ಹೆದ್ದಾರಿ ಜಾಗೃತಿ ಸಮಿತಿಯ ಶ್ಯಾಮ್ ಸುಂದರ್ ನಾಯಿರಿ,ಕಾರ್ಯದರ್ಶಿ ಆಲ್ವಿನ್ ಅಂದ್ರಾದೆ,ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ವಿಠಲ್ ಪೂಜಾರಿ, ಭೋಜ ಪೂಜಾರಿ, ಸಂದೀಪ್ ಕುಂದರ್, ದಿನೇಶ್ ಗಾಣಿಗ, ರಾಜೇಶ್ ಸಾಸ್ತಾನ,ನಾಗರಾಜ್ ಗಾಣಿಗ, ಶ್ರೀಧರ ಪಿ.ಎಸ್, ಚಂದ್ರಶೇಖರ್ ಮೆಂಡನ್, ಅಚ್ಯುತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts