More

    ಸಾಸ್ತಾನ ಮೀನು ಮಾರುಕಟ್ಟೆ ಅವ್ಯವಸ್ಥೆ, ಮೀನು ತ್ಯಾಜ್ಯ ನೀರು ವಿಲೇವಾರಿಯಾಗದೆ ದುರ್ವಾಸನೆ

    ಕೋಟ: ಐರೋಡಿ ಗ್ರಾಪಂ ವ್ಯಾಪ್ತಿಗೆ ಒಳಪಟ್ಟ ಸಾಸ್ತಾನದ ಮೀನುಮಾರುಕಟ್ಟೆ ಉದ್ಘಾಟನೆಗೊಂಡು ವರ್ಷ ಕಳೆಯುವಷ್ಟರಲ್ಲಿ ಕಾಮಗಾರಿಯ ಗುಣಮಟ್ಟ ಬಯಲಾಗುತ್ತಿದೆ. ಸುಮಾರು 1,81,73,777 ರೂ. ವೆಚ್ಚದಲ್ಲಿ ನಬಾರ್ಡ್ ಯೋಜನೆಯಡಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ನಿರ್ಮಾಣಗೊಂಡ ಮಾರುಕಟ್ಟೆಯಲ್ಲಿ ಒಂದೊಂದೇ ಅವ್ಯವಸ್ಥೆ ಅನಾವರಣಗೊಳ್ಳುತ್ತಿದೆ.
    ತ್ಯಾಜ್ಯ ನೀರಿನ ಹೊಳೆ: ಮೀನುಮಾರುಕಟ್ಟೆ ಉದ್ಘಾಟನೆಗೊಂಡು ವರ್ಷ ಕಳೆಯುಷ್ಟರಲ್ಲಿ ಅದರ ಮೂಲಸೌಕರ್ಯ ವ್ಯವಸ್ಥೆ ಮೂಲೆಗುಂಪಾಗಿದ್ದರೆ ಅಸಮರ್ಪಕ ಕಾಮಗಾರಿಯಿಂದ ಮಾರುಕಟ್ಟೆಯಿಂದ ಹೊರಬರುವ ಮೀನಿನ ನೀರು ಹಿಂಭಾಗದಲ್ಲಿ ನಿರ್ಮಿಸಲಾದ ಟ್ಯಾಂಕ್ ಒಳಗೆ ಶೇಖರಣೆಯಾಗಿ ದುರ್ವಾಸನೆ ಬೀರಲು ಪ್ರಾರಂಭಿಸಿದೆ. ಈ ಟ್ಯಾಂಕ್‌ನಿಂದ ತ್ಯಾಜ್ಯ ನೀರು ಫಿಲ್ಟರ್ ಮಾಡುವ ವ್ಯವಸ್ಥೆಯನ್ನೂ ಅಳವಡಿಸಲಾಗಿಲ್ಲ. ಶೌಚಗೃಹ ಬಾಗಿಲು ಹಾಳಾಗಿದೆ.

    ಮೀನುಮಾರುಕಟ್ಟೆ ನಿರ್ಮಾಣ ಪ್ರಾರಂಭದಿಂದಲೂ ಸ್ಥಳೀಯ ಪಂಚಾಯಿತಿ ಹಾಗೂ ಹಸಿ ಮೀನು ಮಾರಾಟಗಾರ ಮಹಿಳೆಯರಿಗೆ ತಗಾದೆ ಸೃಷ್ಟಿಯಾಗಿತ್ತು. ಅದಾದ ನಂತರ ಮೀನುಮಾರುಕಟ್ಟೆ ಪಂಚಾಯಿತಿ ಅಧೀನಕ್ಕೆ ಬಿಟ್ಟುಕೊಡುವಂತೆ ಆಗಿನ ಬೋರ್ಡ್ ಒತ್ತಡ ಹೇರಿತ್ತು. ಆದರೂ ಇಬ್ಬರ ಜಗಳ ತಾರಕಕ್ಕೇರಿ ಸಚಿವರ ಹಾಗೂ ಶಾಸಕರ ಸಂಧಾನದಿಂದ ಮಹಿಳೆಯರಿಗೆ ಮಾರಾಟ ಮಾಡಲು ಅನುವು ಮಾಡಿ ಕೊಡಲಾಗಿತ್ತು. ಅಲ್ಲಿನ ಕಳಪೆ ಕಾಮಗಾರಿ ಕುರಿತು ಆಗಲೇ ಆರೋಪ ಕೇಳಿಬಂದಿತ್ತು. ಆದರೆ ಉದ್ಘಾಟಿಸುವ ತವಕದಲ್ಲಿ ಆ ವಿಚಾರಗಳು ಕಣ್ಮರೆಯಾಗಿದ್ದವು.

    ನಿರ್ಮಿತಿ ವಿರುದ್ಧ ಆಕ್ರೋಶ
    ಕಟ್ಟಡ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿದ್ದ ನಿರ್ಮಿತಿ ಕೇಂದ್ರ ನಿರ್ಲಕ್ಷ್ಯ ತೋರಿರುವುದಕ್ಕೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಕಾಮಗಾರಿಯ ಕುರಿತು ತನಿಖೆಗೆ ಆಗ್ರಹಿಸುತ್ತಿದ್ದಾರೆ.

    ಪಂಚಾಯಿತಿ ಉಸ್ತುವಾರಿಯಲ್ಲಿ ಇಲ್ಲ!
    ಮಾರುಕಟ್ಟೆ ನಿರ್ಮಿಸಿ ವರ್ಷ ಕಳೆದರೂ ಪಂಚಾಯಿತಿಗೆ ಹಸ್ತಾಂತರಗೊಂಡಿಲ್ಲ. ಹಾಗಾದರೆ ಈ ಮಾರುಕಟ್ಟೆ, ಅಲ್ಲಿರುವ ಅಂಗಡಿ ಕೋಣೆಗಳ ಉಸ್ತುವಾರಿ ಯಾರ ಹೊಣೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

    ಸಾಸ್ತಾನ ಮೀನುಮಾರುಕಟ್ಟೆ ನಿರ್ಮಿಸಿ ವರ್ಷ ಕಳೆದರೂ ಪಂಚಾಯಿತಿಗೆ ಮಾರುಕಟ್ಟೆಯನ್ನು ಹಸ್ತಾಂತರ ಪ್ರಕ್ರಿಯೆ ಆಗಿಲ್ಲ. ಅಲ್ಲಿನ ಅಸಮರ್ಪಕ ಕಾಮಗಾರಿಯ ಬಗ್ಗೆ ಪಂಚಾಯಿತಿಗೂ ದೂರುಗಳು ತಲುಪಿವೆ. ಈ ಬಗ್ಗೆ ನಾವು ಸಂಬಂಧಪಟ್ಟ ಇಲಾಖೆಗೆ ಪತ್ರದ ಮೂಲಕ ಮಾಹಿತಿ ಕೇಳಿದ್ದೇವೆ. ತನಿಖೆ ನಡೆಸಲೂ ಸೂಚಿಸಲಾಗಿದೆ.
    ಗೀತಾ ಶೆಟ್ಟಿ, ಐರೋಡಿ ಗ್ರಾಪಂ ಅಧ್ಯಕ್ಷೆ

    ಮಾರುಕಟ್ಟೆ ನಿರ್ಮಿಸಿ ಲಾಕ್‌ಡೌನ್ ಸಂದರ್ಭ ಪಂಚಾಯಿತಿಗೆ ಹಸ್ತಾಂತರಿಸಿ, ಮಾರುಕಟ್ಟೆಯಲ್ಲಿ ವ್ಯವಹರಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಲ್ಲಿರುವ ಸಣ್ಣಪುಟ್ಟ ಲೋಪದೋಷಗಳನ್ನು ಶೀಘ್ರ ಸರಿಪಡಿಲಾಗುವುದು. ಕಾಮಗಾರಿ ಕಳಪೆ ಆರೋಪ ಸತ್ಯಕ್ಕೆ ದೂರವಾದದ್ದು.
    ಗಣೇಶ್, ಇಂಜಿನಿಯರ್, ಉಡುಪಿ ನಿರ್ಮಿತಿ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts